ಗ್ರಾಪಂ ಚುನಾವಣೆ : ರಾಜಕೀಯ ಪಕ್ಷಗಳ ಪರ ಫಲಿತಾಂಶ ; ಮಾಧ್ಯಮಗಳ ಬಗ್ಗೆ ಆಯೋಗದಿಂದ ಚಾಟಿ ! 

30-12-20 08:40 pm       Mangaluru Correspondent   ಕರ್ನಾಟಕ

ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶ ಪ್ರಕಟಣೆ ವಿಚಾರದಲ್ಲಿ ಟಿವಿ ವಾಹಿನಿಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. 

ಬೆಂಗಳೂರು, ಡಿ.30: ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶ ಪ್ರಕಟಣೆ ವಿಚಾರದಲ್ಲಿ ಟಿವಿ ವಾಹಿನಿಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. 

ಗ್ರಾಮ ಪಂಚಾಯತಿ ಚುನಾವಣೆ ಪಕ್ಷ ರಹಿತವಾಗಿರುತ್ತದೆ‌. ಆದರೆ, ಕೆಲವು ಟಿವಿ ವಾಹಿನಿಗಳು ಗ್ರಾಪಂ ಚುನಾವಣೆಯ ಫಲಿತಾಂಶ ಪ್ರಕಟಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಆಧಾರಿತ ಚುನಾವಣೆಯ ರೀತಿ ಪ್ರಸಾರ ಮಾಡುತ್ತಿದೆ. ಇದರಿಂದ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ. 

ಅಲ್ಲದೆ, ಪಕ್ಷ ರಹಿತ ಚುನಾವಣೆ ಆಗಿರುವ ಸಂದರ್ಭದಲ್ಲಿ ಯಾವುದೇ ಆಧಾರ ಇಲ್ಲದೆ ರಾಜಕೀಯ ಪಕ್ಷಗಳ ಪರ ಫಲಿತಾಂಶ ಪ್ರಸಾರ ಮಾಡಬಾರದು‌. ಈ ಬಗ್ಗೆ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗೆ ಸೂಚನೆ ನೀಡುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಿಗೆ ರಾಜ್ಯ ಚುನಾವಣಾ ಆಯೋಗದಿಂದ ಸುತ್ತೋಲೆ ಮೂಲಕ ನಿರ್ದೇಶನ ನೀಡಲಾಗಿದೆ. 

ಗ್ರಾಪಂ ಚುನಾವಣೆ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಡಿ.31 ರ ವರೆಗೂ ನಡೆಯಲಿದೆ. ಈ ಮಧ್ಯೆ ಪ್ರಸಾರ ಮಾಧ್ಯಮಗಳು ನಿರ್ದಿಷ್ಟ ರಾಜಕೀಯ ಪಕ್ಷಗಳು ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾಗಿ ಪ್ರಕಟ ಮಾಡುವಂತಿಲ್ಲ ಎಂದಿದ್ದರೂ, ಪಕ್ಷಗಳ ಬೆಂಬಲಿತರು ಎನ್ನುವ ನೆಲೆಯಲ್ಲಿ ಪ್ರಸಾರ ಮಾಡುತ್ತಿವೆ. ಈ ವೇಳೆ, ಹೆಚ್ಚಿನ ಬಾರಿ ರಾಜಕೀಯ ಪಕ್ಷಗಳ ನಾಯಕರು ಕೂಡ ತಮ್ಮ ಪಕ್ಷಗಳಿಗೇ ಗೆಲುವು ಅನ್ನುವ ನೆಲೆಯಲ್ಲಿ ಹೇಳಿಕೆ ನೀಡುತ್ತಾರೆ. ಅಲ್ಲದೆ, ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತಾರೆ. ಅಭ್ಯರ್ಥಿಗಳ ಪರವಾಗಿ ರಾಜಕೀಯ ಪಕ್ಷಗಳ ಬಾವುಟ ಹಿಡಿದು ವಿಜಯೋತ್ಸವ ಆಚರಣೆಯೂ ನಡೆಯುತ್ತದೆ. ಈ ವೇಳೆ, ಮಾಧ್ಯಮಗಳು ಕೂಡ ಅದನ್ನೇ ಪ್ರಸಾರ ಮಾಡುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಈ ಬಗ್ಗೆ ಎಚ್ಚರಿಸಬೇಕಾದ ಮಾಧ್ಯಮಗಳು ಅದನ್ನೇ ಪ್ರಸಾರ ಮಾಡುತ್ತಿರುವ ಬಗ್ಗೆ ಚುನಾವಣಾ ಆಯೋಗ ಪರೋಕ್ಷವಾಗಿ ಚಾಟಿ ಬೀಸಿದೆ.