ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ ಬಾಂಗ್ಲಾ ವಲಸಿಗರು ; ಅಕ್ರಮ ವಲಸಿಗರ ತಾಣವಾಗುತ್ತಿದೆ ಬೆಂಗಳೂರು, ರಾಷ್ಟ್ರೀಯ ಭದ್ರತೆಗೆ ಆತಂಕ,‌ ತುರ್ತು ಕ್ರಮಕ್ಕೆ ರೈಲ್ವೇ ಸಚಿವರಿಗೆ ಪತ್ರ 

17-01-26 05:29 pm       Bangalore Correspondent   ಕರ್ನಾಟಕ

ಪಶ್ಚಿಮ ಬಂಗಾಳ–ಬೆಂಗಳೂರು ನಡುವಣ ರೈಲಿನಲ್ಲಿಯೇ ಬಾಂಗ್ಲಾ ವಲಸಿಗರು ರಾಜ್ಯಕ್ಕೆ ಬರುತ್ತಿದ್ದು ಇದು ರಾಷ್ಟ್ರೀಯ ಭದ್ರತೆಗೆ ಭಾರೀ ಸವಾಲಾಗುತ್ತಿದೆ. ಇದರ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ರೈಲ್ವೇ ಸಚಿವರಿಗೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಜ.17 : ಪಶ್ಚಿಮ ಬಂಗಾಳ–ಬೆಂಗಳೂರು ನಡುವಣ ರೈಲಿನಲ್ಲಿಯೇ ಬಾಂಗ್ಲಾ ವಲಸಿಗರು ರಾಜ್ಯಕ್ಕೆ ಬರುತ್ತಿದ್ದು ಇದು ರಾಷ್ಟ್ರೀಯ ಭದ್ರತೆಗೆ ಭಾರೀ ಸವಾಲಾಗುತ್ತಿದೆ. ಇದರ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ರೈಲ್ವೇ ಸಚಿವರಿಗೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ಗೆ ಪತ್ರವನ್ನು ಬರೆದಿರುವ ಅವರು, ಅಕ್ರಮ ವಲಸಿಗರು ರೈಲುಗಳ ಮೂಲಕ ದಕ್ಷಿಣ ಭಾರತ ಪ್ರವೇಶಿಸುವುದನ್ನು ತಡೆಯುವುದಕ್ಕಾಗಿ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಪಶ್ಚಿಮ ಬಂಗಾಳ ಮತ್ತು ಬೆಂಗಳೂರು ನಡುವೆ ಪ್ರಸ್ತುತ 15ರಿಂದ 17ರಷ್ಟು ವೀಕ್ಲಿ ಮತ್ತು ಡೈಲಿ ರೈಲುಗಳು ಸಂಚರಿಸುತ್ತಿದ್ದು, ಈ ಮಾರ್ಗಗಳನ್ನು ಅಕ್ರಮ ವಲಸಿಗರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ಬಂದಿವೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಂತರಾಷ್ಟ್ರೀಯ ಗಡಿಗಳ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವವರು ಈ ಮಾರ್ಗದ ಮೂಲಕ ದಕ್ಷಿಣ ಭಾರತಕ್ಕೆ ನುಸುಳುತ್ತಿದ್ದಾರೆ ಎಂದು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. 

ರೈಲು ಮಾರ್ಗಗಳಲ್ಲಿ ಪ್ರಯಾಣಿಸುವ ಹಲವರು ನಕಲಿ ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಗಳನ್ನು ಬಳಸುತ್ತಿರುವುದು ಮತ್ತೊಂದು ಆತಂಕಕಾರಿ ಅಂಶವಾಗಿದೆ. ಇಂತಹ ದಾಖಲೆಗಳು ನಾಗರಿಕತ್ವದ ಸಾಬೀತು ಅಲ್ಲ ಎಂದು ಬಾಂಬೆ ಹೈಕೋರ್ಟ್ ನೀಡಿರುವ ಇತ್ತೀಚಿನ ತೀರ್ಪನ್ನೂ ಛಲವಾದಿ ನಾರಾಯಣಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೋರ್ಟ್ ಆದೇಶವಿದ್ದ ಹೊರತಾಗ್ಯೂ ಇಂಥ ನಕಲಿ ದಾಖಲೆಗಳನ್ನು ಬಳಸಿಕೊಂಡು ಸ್ಥಳೀಯ ಭದ್ರತಾ ತಪಾಸಣೆಗಳನ್ನು ತಪ್ಪಿಸಿಕೊಂಡು ಸಂಚರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. 

ಬೆಂಗಳೂರು ನಗರವು ಕಾರ್ಮಿಕ ವಸತಿಗಳ ಪ್ರಮುಖ ಕೇಂದ್ರವಾಗಿದ್ದು, ಪಶ್ಚಿಮ ಬಂಗಾಳ ಹಾಗೂ ಉತ್ತರ ಭಾರತದಿಂದ ಬಂದ ಅಕ್ರಮ ವಲಸಿಗರು ಇಲ್ಲಿ ನೆಲೆಸುತ್ತಿರುವ ಬಗ್ಗೆ ವರದಿಗಳಿವೆ. ಇದರಿಂದ ನಗರ ಹಾಗೂ ರಾಜ್ಯದ ಆಂತರಿಕ ಭದ್ರತೆಗೆ ಗಂಭೀರ ಅಪಾಯ ಎದುರಾಗುತ್ತಿದೆ ಎಂದು ನಾರಾಯಣಸ್ವಾಮಿ ಎಚ್ಚರಿಸಿದ್ದಾರೆ. 

ಪ್ರಮುಖ ರೈಲು ನಿಲ್ದಾಣಗಳಲ್ಲಿ ಬಯೋಮೆಟ್ರಿಕ್ ಆಧಾರಿತ ಕಟ್ಟುನಿಟ್ಟಿನ ಗುರುತು ಪರಿಶೀಲನೆ ನಡೆಸುವುದು. ಈ ಮಾರ್ಗದ ರೈಲುಗಳ ಸಂಖ್ಯೆಯ ಪುನರ್‌ಪರಿಶೀಲನೆ, ಆರ್‌ಪಿಎಫ್ ಹಾಗೂ ಗುಪ್ತಚರ ದಳದ ಸಿಬ್ಬಂದಿಯನ್ನು ಗುಪ್ತವಾಗಿ ನಿಯೋಜಿಸಿ ಅನುಮಾನಾಸ್ಪದ ಚಟುವಟಿಕೆಗಳ ನಿಗಾ ಇರಿಸುವುದು. ರೈಲ್ವೆ ಬುಕಿಂಗ್ ವ್ಯವಸ್ಥೆಯನ್ನು ಎಸ್‌ಐಆರ್/ಎನ್‌ಆರ್‌ಸಿ ಸೇರಿದಂತೆ ರಾಷ್ಟ್ರೀಯ ಡೇಟಾಬೇಸ್‌ಗಳಿಗೆ ಜೋಡಿಸುವುದನ್ನು ಮಾಡಬೇಕೆಂದು ಸಲಹೆ ನೀಡಿದ್ದಾರೆ. 

ಭಾರತದ ಗಡಿಗಳ ಭದ್ರತೆ ಹಾಗೂ ನಗರಗಳ ಸುರಕ್ಷತೆ ಭಾರತೀಯ ರೈಲ್ವೆಯ ಜಾಗೃತಿಯ ಮೇಲೆಯೇ ಅವಲಂಬಿತವಾಗಿದೆ ಎಂದು ಹೇಳಿರುವ ನಾರಾಯಣಸ್ವಾಮಿ, ಈ ವಿಷಯವನ್ನು ಆದ್ಯತೆಯ ರಾಷ್ಟ್ರೀಯ ಭದ್ರತಾ ವಿಚಾರವಾಗಿ ಪರಿಗಣಿಸಿ ತ್ವರಿತ ಹಾಗೂ ದೃಢ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

Karnataka Legislative Council Opposition Leader Chalavadi Narayanaswamy has written to Union Railway Minister Ashwini Vaishnaw, warning that alleged Bangladeshi illegal migrants are entering Bengaluru through West Bengal–Bengaluru train routes, posing a serious national security risk.