30 ವರ್ಷಗಳಲ್ಲೇ ಕಾಣದಂಥ ಮಳೆ ರಾಜ್ಯದಲ್ಲಿ ದಿಢೀರಾಗಿ ಸುರಿಯಲು ಕಾರಣವೇನು?

07-01-21 12:12 pm       Bangalore Correspondent   ಕರ್ನಾಟಕ

ರಾಜ್ಯದ ಹಲವೆಡೆ ನಿನ್ನೆ ತುಂತುರು ಮಳೆಯಾಯಿತು. ಇನ್ನೂ ನಾಲ್ಕು ದಿನ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಬೆಂಗಳೂರು, ಜ.7 : ಜನವರಿ ತಿಂಗಳಲ್ಲಿ ಈ ರೀತಿ ಅನಿರೀಕ್ಷಿತ ಮಳೆಯನ್ನು ಕಳೆದ 30 ವರ್ಷಗಳಲ್ಲೇ ಕಂಡಿಲ್ಲ, ದಾಖಲೆಗಳನ್ನು ಕೆದಕಿದರೆ ಎಲ್ಲೋ ಮುನಾರ್ಲ್ಕು ಬಾರಿ ತುಂತುರು ಮಳೆ ಸುರಿದ ಅಂಕಿ ಅಂಶ ಸಿಗುತ್ತದೆ ಎಂದು ಹವಾಮಾನ ಇಲಾಖೆ ಜನವರಿ 6ರಂದು ರಾಜ್ಯದ ಹಲವೆಡೆ ಸುರಿದ ಮಳೆ ಬಗ್ಗೆ ವಿವರ ನೀಡಿದೆ. ರಾಜ್ಯದ ಹಲವೆಡೆ ನಿನ್ನೆ ತುಂತುರು ಮಳೆಯಾಯಿತು. ಇನ್ನೂ ನಾಲ್ಕು ದಿನ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜನವರಿಯಲ್ಲಿ ಉಂಟಾದ ಅನಿರೀಕ್ಷಿತ ಮಳೆಗೆ ಕಾರಣವೇನು..?, ಎಲ್ಲೆಲ್ಲಿ ಎಷ್ಟೇಷ್ಟು ದಿನ ಮಳೆಯಾಗುತ್ತೆ ಅನ್ನೋದನ್ನು ನೋಡೋಣ.

ದಿಢೀರ್ ಮಳೆಯಾಗಲು ಕಾರಣವೇನು...?

ದಿಢೀರ್ ಮಳೆಗೆ ಪೂರ್ವ ಅಲೆಗಳೇ ಪ್ರಮುಖ ಕಾರಣ. ಚಳಿಗಾಲದಲ್ಲಿ ಸಾಮಾನ್ಯವಾಗಿ ಜನವರಿ ಮತ್ತು ಫೆಬ್ರವರಿ ಅವಧಿಯಲ್ಲಿ ಪೂರ್ವ ದಿಕ್ಕಿನಿಂದ ಗಾಳಿ ಬೀಸುವುದರಿಂದ ಆಗಾಗ ಮಳೆ ಸುರಿಯುತ್ತದೆ. ಬಂಗಾಳ ಕೊಲ್ಲಿಯ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಪ್ರಬಲವಾಗಿರೋದ್ರಿಂದ ಮಳೆಯಾಗುತ್ತಿದೆ. ರಾತ್ರಿ ಹಾಗೂ ಹಗಲು ತಾಪಮಾನ ಒಂದೇ ಆಗಿರೋದ್ರಿಂದ ಚಳಿಯ ಪ್ರಮಾಣ ಹೆಚ್ಚಿದೆ.

ಎಷ್ಟು ವರ್ಷಕೊಮ್ಮೆ ಜನವರಿ ತಿಂಗಳಲ್ಲಿ ಮಳೆಯಾಗುತ್ತೆ...?

ಹವಾಮಾನ ತಜ್ಞರು ಹೇಳೋ ಪ್ರಕಾರ 30 ವರ್ಷದಲ್ಲಿ 4- 5 ಬಾರಿ ಜನವರಿಯಲ್ಲಿ ಮಳೆಯಾಗಿರಬಹುದೆಂದು ಅಂದಾಜಿಸಿದ್ದಾರೆ.

ರಾಜ್ಯದ ಯಾವ ಯಾವ ಭಾಗಗಳಲ್ಲಿ ಎಷ್ಟು ದಿನ ಮಳೆಯಾಗಲಿದೆ...?

ಹವಮಾನ ಇಲಾಖೆಯ ಮುನ್ಸೂಚನೆಯಂತೆ ಕರ್ನಾಟಕದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ. ಕಳೆದ ಎರಡು-ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಇತ್ತು. ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಅಲ್ಲಲ್ಲಿ ಮಳೆಯಾಗಿದೆ.

ಜ. 10ರವರೆಗೆ ಕರಾವಳಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಇನ್ನು ಉತ್ತರ ಒಳನಾಡಿನಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಸಾಧ್ಯತೆ. ದಕ್ಷಿಣ ಒಳನಾಡಿನಲ್ಲಿ ಇಂದು ಹಲವು ಕಡೆ ಮಳೆಯಾಗುವ ಸಾಧ್ಯತೆ ಇದೆ. 8 ಹಾಗೂ 9 ರಂದು ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ.

ರಾಜ್ಯದ ಹಲವೆಡೆ ಬೆಳೆ ನಾಶ, ಜನಜೀವನ ಅಸ್ತವ್ಯಸ್ತ

ಸಂಕ್ರಾಂತಿ ಮುನ್ನ ಬರುತ್ತಿರುವ ಈ ಅಕಾಲಿಕ ಮಳೆಗೆ ರಾಜ್ಯದ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಮಲೆನಾಡು ಭಾಗದ ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಇನ್ನೊಂದೆಡೆ ಬಯಲು ಸೀಮೆಯ ಚಿತ್ರದುರ್ಗ, ಹೊಸದುರ್ಗ, ಚಳ್ಳಕೆರೆ, ಹಿರಿಯೂರು ಭಾಗದಲ್ಲಿ ನಿರಂತರ ಮಳೆಯಿಂದ ಕೆರೆಗಳು ತುಂಬಿವೆ. ಉತ್ತರ ಒಳನಾಡಿನಲ್ಲೂ ಮಳೆ ಸುರಿಯುತ್ತಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಅಡಿಕೆ, ಭತ್ರ, ಕಾಫಿ ಬೆಳೆ ನಾಶವಾಗಿವೆ.

Heavy Rains in Karnataka Cloudy, gloomy, rainy weather greeted most parts of the State on Wednesday with incessant rains keeping people indoors in Bengaluru and many parts of Coastal Karnataka.