ಜ.13, 14ಕ್ಕೆ ಸಂಪುಟಕ್ಕೆ ಮುಹೂರ್ತ : ವಿಸ್ತರಣೆಯೋ, ಪುನಾರಚನೆಯೋ ? ಸುಳಿವು ಕೊಡದ ಯಡಿಯೂರಪ್ಪ

11-01-21 12:25 pm       Headline Karnataka News Network   ಕರ್ನಾಟಕ

ಕೊನೆಗೂ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿಬಂದಿದೆ.‌ ಜ.13 ಅಥವಾ 14 ರಂದು ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 

ಮೈಸೂರು, ಜ.11: ಕೊನೆಗೂ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿಬಂದಿದೆ.‌ ಜ.13 ಅಥವಾ 14 ರಂದು ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದೇನೆ. ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಬಂದ ಕೂಡಲೇ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಲಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 

ಮೈಸೂರಿನಲ್ಲಿ ಸುತ್ತೂರಿನ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ , 13 ಅಥವಾ 14ಕ್ಕೆ ಮಾಡಬೇಕೆಂಬ ಬಗ್ಗೆ ಸೂಚನೆ ಇದೆ. 13 ರ ಸಂಜೆ 4 ಗಂಟೆ ಬಳಿಕ ಅಮಾವಾಸ್ಯೆ ಇರುವುದಿಲ್ಲ. ಇದೆಲ್ಲಾ ನೋಡಿಕೊಂಡೆ ತೀರ್ಮಾನ ಮಾಡಲಾಗಿದೆ‌. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆ ಬಂದ ಕೂಡಲೇ ಸಚಿವ ಸಂಪುಟಕ್ಕೆ ಕೈಹಾಕಲಿದ್ದೇನೆ. ಆದರೆ ಸಂಪುಟ ವಿಸ್ತರಣೆಯೋ, ಪುನರ್‌ ರಚನೆಯೋ ನಿಮಗೇ ಗೊತ್ತಾಗಲಿದೆ ಎನ್ನುವ ಮೂಲಕ ಸಂಪುಟ ಪುನಾರಚನೆಯ ಬಗೆಗೂ ಸುಳಿವು ನೀಡಿದರು. ಸಂಪುಟ ಪುನಾರಚನೆಯಾದಲ್ಲಿ ಹಲವರನ್ನು ಕೈಬಿಟ್ಟು ಕೆಲವರನ್ನು ಸೇರಿಸಿ ಖಾತೆಗಳ ಬದಲಾವಣೆ ಆಗಲಿದೆ. 

ಇದೇ ವೇಳೆ, ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿರುವುದನ್ನೂ ಸಿಎಂ ಹೇಳಿದ್ದಾರೆ.  ಕೋವಿಡ್‌ ನಂತರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ.ಈ ಹಿನ್ನೆಲೆಯಲ್ಲಿ ಜನಪರ, ಅಭಿವೃದ್ಧಿ ಪರ ಬಜೆಟ್ ನೀಡಲಿದ್ದೇವೆ. ಮಾರ್ಚ್ ವೇಳೆಗೆ ಬಜೆಟ್ ತಯಾರಿ ಪೂರ್ಣಗೊಳ್ಳಲಿದೆ. ನನಗೆ ಉತ್ತಮ ಬಜೆಟ್ ಮಂಡಿಸುವ ವಿಶ್ವಾಸವಿದೆ ಎಂದರು. 

ಸಿಎಂ ಬದಲಾವಣೆ ಚರ್ಚೆಯ ನಡುವೆಯೂ ಸಿಎಂ ಬಿಎಸ್ ವೈ ಬಜೆಟ್ ಮಂಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದು ಕುತೂಹಲ ಮೂಡಿಸಿದೆ.

The much-awaited cabinet expansion in Karnataka could take place on 13 or 14th said Chief Minister BS Yediyurappa indicated in Mysore.