ಸಿಎಂ ಯಡಿಯೂರಪ್ಪರಿಗೆ ಪತ್ರ ಬರೆದಿಟ್ಟು ಅರಣ್ಯ ಇಲಾಖೆಯ ಗುತ್ತಿಗೆ ನೌಕರ ಆತ್ಮಹತ್ಯೆ

18-01-21 01:29 pm       Headline Karnataka News Network   ಕರ್ನಾಟಕ

ಅರಣ್ಯ ಇಲಾಖೆ ವ್ಯಾಪ್ತಿಯ ಕ್ಷೇಮನಿಧಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಗಂಗಾವತಿ, ಜ.18 : ಅರಣ್ಯ ಇಲಾಖೆ ವ್ಯಾಪ್ತಿಯ ಕ್ಷೇಮನಿಧಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿಟ್ಟು ನಿವೃತ್ತಿ ಅಂಚಿನಲ್ಲಿದ್ದ ಅರಣ್ಯ ಇಲಾಖೆಯ ಅರೆಕಾಲಿಕ ನೌಕರನೊಬ್ಬ ಕಚೇರಿಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತ ನೌಕರನನ್ನು ಟಿ.ಮಲ್ಲಿಕಾರ್ಜುನ (59) ಎಂದು ಗುರುತಿಸಲಾಗಿದೆ. ಕಳೆದ 37 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಅರೆಕಾಲಿಕ ನೌಕರನಾಗಿ ಕೆಲಸ ಮಾಡುತ್ತಿದ್ದ ಇವರು ಇದೇ ವರ್ಷ ಮೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದರು.

ಇದುವರೆಗೂ ಅರಣ್ಯ ಇಲಾಖೆಯಲ್ಲಿ ಕ್ಷೇಮನಿಧಿ ಯೋಜನೆಯಲ್ಲಿ‌ ನೇಮಕಗೊಂಡ ಸಾವಿರಾರು ನೌಕರರಿಗೆ ಖಾಯಂ ಮಾಡಿಲ್ಲ. ಕೆಲವರು ಇದೇ ವರ್ಷ ನಿವೃತ್ತಿಯಾಗಲಿದ್ದು ಮುಂದಿನ ಭವಿಷ್ಯ ಕಷ್ಟವಾಗಿದೆ. ಸರಕಾರ ಕೂಡಲೇ ಕ್ಷೇಮನಿಧಿ ಯೋಜನೆಯಲ್ಲಿ ನೇಮಕಗೊಂಡವರನ್ನು ಖಾಯಂ ಮಾಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದ ಮಲ್ಲಿಕಾರ್ಜುನ ನೇಣಿಗೆ ಶರಣಾಗಿದ್ದಾರೆ.

ಯಾವುದೋ ಕಾರಣಕ್ಕೆ ನನ್ನ ಮಗ ಜೈಲಿಗೆ ಹೋಗಿದ್ದು ಸಿಎಂ ನನ್ನ ಮಗನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ರಾಮಣ್ಣ ಎನ್ನುವವರಿಂದ 20 ಸಾವಿರ ರೂ. ಸಾಲ ಪಡೆದು ಒಂದು ತಿಂಗಳು ಬಡ್ಡಿ ಪಾವತಿಸಿದ್ದು ಉಳಿದ ಹಣ ಕೊಟ್ಟು ದಾಖಲೆಗಳನ್ನು ವಾಪಸ್ ಪಡೆಯುವಂತೆ ಕುಟುಂಬದವರಿಗೆ ಪತ್ರದಲ್ಲಿ ತಿಳಿಸಿದ್ದಾನೆ.