75 ಲಕ್ಷ ನೋಟಿನ ಕಂತೆಗಳೊಂದಿಗೆ ಸಿಕ್ಕಿಬಿದ್ದ ಕಸ್ಟಮ್ಸ್ ಅಧಿಕಾರಿ !! ಹವಾಲಾ ವಹಿವಾಟು ಶಂಕೆ

20-01-21 12:53 pm       Bangalore Correspondent   ಕರ್ನಾಟಕ

ಹಣದ ಕಂತೆಗಳನ್ನು ಬ್ಯಾಗಿನಲ್ಲಿ ಹಾಕ್ಕೊಂಡು ವಿಮಾನ ಏರಲು ಬಂದಿದ್ದ ಹಿರಿಯ ಕಸ್ಟಮ್ಸ್ ಅಧಿಕಾರಿಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಪಡೆ ಬಂಧಿಸಿದೆ.

ಬೆಂಗಳೂರು, ಜ.20: ಭಾರೀ ಪ್ರಮಾಣದಲ್ಲಿ ಹಣದ ಕಂತೆಗಳನ್ನು ಬ್ಯಾಗಿನಲ್ಲಿ ಹಾಕ್ಕೊಂಡು ವಿಮಾನ ಏರಲು ಬಂದಿದ್ದ ಚೆನ್ನೈ ಮೂಲದ ಹಿರಿಯ ಕಸ್ಟಮ್ಸ್ ಅಧಿಕಾರಿಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಪಡೆ ಬಂಧಿಸಿದೆ.

ಚೆನ್ನೈ ಕಸ್ಟಮ್ಸ್ ವಿಭಾಗದ ಎಸ್ಪಿ ಆಗಿದ್ದ ಇರ್ಫಾನ್ ಅಹ್ಮದ್ ಮೊಹಮ್ಮದ್ ಎಂಬ ಅಧಿಕಾರಿ ಬಂಧಿತ ವ್ಯಕ್ತಿ. ಈತ ತನ್ನ ಪತ್ನಿಯ ಜೊತೆಗೆ ಲಕ್ನೋಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದು, ಭದ್ರತಾ ಪಡೆಯ ತಪಾಸಣೆಯ ವೇಳೆ ಬ್ಯಾಗ್ ನಲ್ಲಿ ಹಣದ ಕಂತೆ ಪತ್ತೆಯಾಗಿದೆ. ಎರಡು ಸಾವಿರದ ನೋಟುಗಳ ಕಂತೆಗಳಿದ್ದ 74,81,500 ರೂಪಾಯಿ ಬ್ಯಾಗಿನಲ್ಲಿ ಪತ್ತೆಯಾಗಿದ್ದು ಅಧಿಕಾರಿಯನ್ನು ಭದ್ರತಾ ಪಡೆ ವಶಕ್ಕೆ ಪಡೆದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಶಕ್ಕೆ ನೀಡಿದೆ.  

ನಿನ್ನೆ ಬೆಳಗ್ಗೆ 10.20ಕ್ಕೆ ಲಕ್ನೋಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆಂದು ಇರ್ಫಾನ್ ಅಹ್ಮದ್ ಕುಟುಂಬ ಬಂದಿತ್ತು. ಆತನ ಬ್ಯಾಗಿನಲ್ಲಿ ಹಣದ ಕಂತೆಯ ಜೊತೆಗೆ ಹೈ ಎಂಡ್ ಮೊಬೈಲ್ಸ್ ಮತ್ತು ಜುವೆಲ್ಲರಿಯೂ ಪತ್ತೆಯಾಗಿದೆ. ಒಂದಷ್ಟು ಚಿನ್ನ ಹೊಂದಿರುವುದು ದೊಡ್ಡ ಅಪರಾಧ ಅಲ್ಲ. ಆದರೆ, ಯಾವುದೇ ದಾಖಲೆಗಳಿಲ್ಲದೆ ಇಷ್ಟೊಂದು ಪ್ರಮಾಣದ ಹಣದ ಕಂತೆ ಸಿಕ್ಕಿದ್ದು ಅಚ್ಚರಿ ಮೂಡಿಸಿದೆ. ನೋಟುಗಳನ್ನು ಕಂತೆ ಹೊಂದಿದ್ದು ಅಕ್ರಮ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ವೇಳೆ, ಪತಿಯನ್ನು ಭದ್ರತಾ ಪಡೆ ವಶಕ್ಕೆ ಪಡೆಯುತ್ತಲೇ ಆತನ ಪತ್ನಿ ಹೊಟ್ಟೆ ನೋವು ಮತ್ತು ತಲೆಸುತ್ತು ಬರುತ್ತಿದೆ ಎಂದು ಹೇಳಿ ಟಾಯ್ಲೆಟ್ ತೆರಳಿದ್ದಾಳೆ. ಬಳಿಕ ಭದ್ರತಾ ಪಡೆಯ ಮಹಿಳಾ ಸಿಬಂದಿ, ಟಾಯ್ಲೆಟ್ ಹೋಗಿ ನೋಡಿದಾಗ ಅಲ್ಲಿ ಮತ್ತೆ ಹತ್ತು ಲಕ್ಷದ ನೋಟಿನ ಕಂತೆ ಪತ್ತೆಯಾಗಿದೆ. ಹೀಗಾಗಿ ಆಕೆಯನ್ನೂ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹೀಗಿದ್ದರೂ, ಭಾರೀ ಪ್ರಮಾಣದ ಹಣವನ್ನು ಅಕ್ರಮವಾಗಿ ಎಲ್ಲಿ ಕೊಂಡೊಯ್ಯುತ್ತಿದ್ದ. ಹಣದ ಮೂಲ ಎಲ್ಲಿಂದ ಎನ್ನುವ ಬಗ್ಗೆ ಆರೋಪಿತ ಅಧಿಕಾರಿ ಮಾಹಿತಿ ನೀಡಿಲ್ಲ. ಕಸ್ಟಮ್ಸ್ ಅಧಿಕಾರಿಯೇ ಹವಾಲಾ ವಹಿವಾಟಿನಲ್ಲಿ ಸಕ್ರಿಯವಾಗಿರುವ ಬಗ್ಗೆ ಶಂಕೆ ಇದೆ.

A senior Customs officer posted in Chennai was nabbed at the Bengaluru Airport on Tuesday after he was found carrying Rs 74.81 lakh cash in his hand baggage, officials said.