ಖಾತೆ ಅದಲು ಬದಲು ; ಮಾಧುಸ್ವಾಮಿಗೆ ವೈದ್ಯಕೀಯ, ಎಂಟಿಬಿ ಅಬಕಾರಿ, ಅಂಗಾರ ಮೀನುಗಾರಿಕೆ, ಕೋಟ ಮುಜರಾಯಿ

21-01-21 12:45 pm       Dilip : Bengaluru Correspondent   ಕರ್ನಾಟಕ

ಸಿಎಂ ಯಡಿಯೂರಪ್ಪ ಸಂಪುಟದ ಸಚಿವರ ಖಾತೆಗಳನ್ನು ಅದಲು ಬದಲು ಮಾಡಿದ್ದಾರೆ. ಅಲ್ಲದೆ, ಕೆಲವರ ಖಾತೆಗಳನ್ನು ಬದಲಿಸಿ, ಹೊಸತಾಗಿ ಸಚಿವರಾದವರಿಗೆ ಪ್ರಮುಖ ಖಾತೆಗಳನ್ನು ನೀಡಿದ್ದಾರೆ.

ಬೆಂಗಳೂರು, ಜ.21: ಸಿಎಂ ಯಡಿಯೂರಪ್ಪ ಸಂಪುಟದ ಸಚಿವರ ಖಾತೆಗಳನ್ನು ಅದಲು ಬದಲು ಮಾಡಿದ್ದಾರೆ. ಅಲ್ಲದೆ, ಕೆಲವರ ಖಾತೆಗಳನ್ನು ಬದಲಿಸಿ, ಹೊಸತಾಗಿ ಸಚಿವರಾದವರಿಗೆ ಪ್ರಮುಖ ಖಾತೆಗಳನ್ನು ನೀಡಿದ್ದಾರೆ.

ಸಿಎಂ ಯಡಿಯೂರಪ್ಪ ಹಣಕಾಸು, ಇಂಧನ ಮತ್ತು ಬೆಂಗಳೂರು ನಗರಬಾಭಿವೃದ್ಧಿ ಖಾತೆಗಳನ್ನು ತಮ್ಮ ಜೊತೆಗೇ ಇರಿಸಿಕೊಂಡಿದ್ದಾರೆ. ಆರೋಗ್ಯ ಸಚಿವ ಸುಧಾಕರ್ ಬಳಿ ಹೆಚ್ಚುವರಿಯಾಗಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಜೆ.ಸಿ.ಮಾಧುಸ್ವಾಮಿಗೆ ನೀಡಲಾಗಿದೆ. ಮಾಧುಸ್ವಾಮಿ ಬಳಿಯಿದ್ದ ಕಾನೂನು ಮತ್ತು ಸಂಸದೀಯ ಖಾತೆಗಳನ್ನು ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಮಾಧುಸ್ವಾಮಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಹೆಚ್ಚುವರಿ ನೀಡಲಾಗಿದೆ.  

ಕಳೆದ ವಾರ ಸಂಪುಟಕ್ಕೆ ಸೇರಿದ ಸಿ.ಪಿ.ಯೋಗೀಶ್ವರ್ ಸಣ್ಣ ನೀರಾವರಿ ಖಾತೆಯನ್ನು ಪಡೆದಿದ್ದಾರೆ. ಆರ್.ಶಂಕರ್ ಪೌರಾಡಳಿತ ಮತ್ತು ರೇಷ್ಮೆ ಇಲಾಖೆ ಖಾತೆಗಳನ್ನು ಪಡೆದಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಬಳಿಯಿದ್ದ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಖಾತೆಗಳನ್ನು ನೂತನವಾಗಿ ಸಚಿವರಾದ ಸುಳ್ಯದ ಎಸ್.ಅಂಗಾರ ಅವರಿಗೆ ನೀಡಲಾಗಿದೆ. ಉಳಿದಂತೆ ಆನಂದ ಸಿಂಗ್ ಬಳಿಯಿದ್ದ ಅರಣ್ಯ ಖಾತೆಯನ್ನು ಅರವಿಂದ ಲಿಂಬಾವಳಿಗೆ, ಸಿ.ಸಿ.ಪಾಟೀಲ್ ಬಳಿಯಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯನ್ನು ಅರವಿಂದ ಲಿಂಬಾವಳಿಗೆ ನೀಡಲಾಗಿದೆ.

ಎಂಟಿಬಿ ನಾಗರಾಜ್ ಅವರಿಗೆ ಆರ್.ನಾಗೇಶ್ ಅವರಿಂದ ತೆರವಾಗಿದ್ದ ಅಬಕಾರಿ ಖಾತೆಯನ್ನು ನೀಡಲಾಗಿದೆ. ಕೋಟ ಶ್ರೀನಿವಾಸ ಪೂಜಾರಿಗೆ ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ನೀಡಲಾಗಿದೆ. ಉಮೇಶ್ ಕತ್ತಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನೀಡಲಾಗಿದೆ.

ಸುಧಾಕರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆನಂದ ಸಿಂಗ್ ಪ್ರವಾಸೋದ್ಯಮ, ಗೋಪಾಲಯ್ಯ ತೋಟಗಾರಿಕೆ ಮತ್ತು ಸಕ್ಕರೆ, ನಾರಾಯಣ ಗೌಡರಿಗೆ ಯುವಜನ, ಕ್ರೀಡೆ ಮತ್ತು ವಕ್ಫ್ ಇಲಾಖೆಯನ್ನು ಕೊಡಲಾಗಿದೆ. ನಾರಾಯಣ ಗೌಡ ಈ ಹಿಂದೆ ತೋಟಗಾರಿಕೆ ಸಚಿವರಾಗಿದ್ದರು. ಉಳಿದಂತೆ ಸುರೇಶ್ ಕುಮಾರ್, ಈಶ್ವರಪ್ಪ, ರಾಮುಲು ಖಾತೆಗಳನ್ನು ಬದಲು ಮಾಡಿಲ್ಲ. ಖಾತೆಗಳನ್ನು ಬದಲಿಸಿ ಸಿಎಂ ಯಡಿಯೂರಪ್ಪ ಮಾಡಿರುವ ಆದೇಶಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು ಅಧಿಕೃತವಾಗಿ ಜಾರಿಗೆ ಬಂದಿದೆ.

ಖಾತೆಗಳನ್ನು ಅದಲು ಬದಲು ಮಾಡಿರುವ ವಿಚಾರದಲ್ಲಿಯೂ ಕೆಲವು ಸಚಿವರು ಅಸಮಾಧಾನಗೊಂಡಿದ್ದಾರೆ. ಅಸಾಧಾನಗೊಂಡ ಸಚಿವರು ಸಚಿವ ಸುಧಾಕರ್ ಮನೆಯಲ್ಲಿ ಸೇರಿದ್ದು, ಆಕ್ರೋಶ ಹೊರಹಾಕಿದ್ದಾರೆ. ನಾರಾಯಣ ಗೌಡ, ಎಂಟಿಬಿ, ಗೋಪಾಲಯ್ಯ, ಆನಂದ್ ಸಿಗ್ ಸೇರಿದ್ದಾರೆ. 

Chief minister B S Yediyurappa changes allocation of portfolios to the ministers of Karnataka.