ಗೋಹತ್ಯೆ ನಿಷೇಧ ನೂತನ ಕಾಯ್ದೆಯಡಿ ವಿಜಯಪುರದಲ್ಲಿ ಮೊದಲ ಪ್ರಕರಣ ದಾಖಲು

23-01-21 02:32 pm       Bangalore Correspondent   ಕರ್ನಾಟಕ

ಕರ್ನಾಟಕದಲ್ಲಿ ಜಾರಿಗೆ ಬಂದ ನೂತನ ಗೋಹತ್ಯೆ ನಿಷೇಧ ಕಾಯ್ದೆಯಡಿ ಮೊದಲ ಪ್ರಕರಣ ವಿಜಯಪುರ ಜಿಲ್ಲೆಯ ಕೂಡ್ಗಿಯಲ್ಲಿ ದಾಖಲಾಗಿದೆ.

ಬೆಂಗಳೂರು, ಜ.23: ಕರ್ನಾಟಕದಲ್ಲಿ ಜಾರಿಗೆ ಬಂದ ನೂತನ ಗೋಹತ್ಯೆ ನಿಷೇಧ ಕಾಯ್ದೆಯಡಿ ಮೊದಲ ಪ್ರಕರಣ ವಿಜಯಪುರ ಜಿಲ್ಲೆಯ ಕೂಡ್ಗಿಯಲ್ಲಿ ದಾಖಲಾಗಿದೆ. ಕೂಡ್ಗಿ ಸಣ್ಣ ಗ್ರಾಮವಾಗಿದ್ದು, ಸೋಲಾಪುರ- ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 13 ವಿಜಯಪುರ ಜಿಲ್ಲೆಯನ್ನು ಹಾದುಹೋಗುವಲ್ಲಿ ಸಿಗುತ್ತದೆ.

ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು, ಕೂಡ್ಗಿ ಗ್ರಾಮದ ಸಿಕಂದರ್ ಸಾಬ್ ರಾಜೇಸಾಬ್ ಬೇಪಾರಿ ಎಂಬ ವ್ಯಕ್ತಿಯನ್ನು ಬಸವನಬಾಗೇವಾಡಿ ಪೊಲೀಸರು ಬಂಧಿಸಿದ್ದಾಗಿ ತಿಳಿಸಿದ್ದಾರೆ. ಗ್ರಾಮದ ರೈಲ್ವೇ ಹಳಿಯ ಬದಿ ಟಿನ್ ಶೆಡ್ ಹಾಕ್ಕೊಂಡು ಸಿಕಂದರ್ ಸಾಬ್ ಗೋವಿನ ಮಾಂಸವನ್ನು ಮಾರುತ್ತಿದ್ದ ವೇಳೆ ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದರು. ಒಂದು ಎತ್ತನ್ನು ಕೊಂದು ಮಾಂಸ ಮಾಡಿದ್ದ. ಇನ್ನೊಂದು ಎತ್ತನ್ನು ಕಡಿಯುವುದಕ್ಕಾಗಿ ಕಟ್ಟಿ ಹಾಕಿದ್ದ. ಅದನ್ನು ಪೊಲೀಸರು ವಶಕ್ಕೆ ಪಡೆದು ರಕ್ಷಣೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ದನ, ಎತ್ತುಗಳನ್ನು ಸಂರಕ್ಷಿಸುವುದಕ್ಕಾಗಿ ಈ ಕಾನೂನು ತರಲಾಗಿದೆ. ಕಾಯ್ದೆ ಇದೆಯೆಂದು ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಪೊಲೀಸರು ತಮ್ಮ ಕೆಲಸವನ್ನು ಮಾಡುತ್ತಾರೆ. ಜನರು ದನ, ಎತ್ತು, ಕರು, ಎಮ್ಮೆ ಹೀಗೆ ಜಾನುವಾರುಗಳನ್ನು ಕಳ್ಳಸಾಗಾಣಿಕೆ ಅಥವಾ ಕಡಿಯುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಸಾಕು, ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯ ಸರಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ್ದು, ಜ.18ರಿಂದ ರಾಜ್ಯದಲ್ಲಿ ಅಧಿಕೃತವಾಗಿ ಜಾರಿಗೆ ಬಂದಿದೆ. ಈ ಕಾಯ್ದೆ ಪ್ರಕಾರ, ಜಾನುವಾರುಗಳ ಅಕ್ರಮ ಸಾಗಣೆ ಮತ್ತು ವಧೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಪ್ರಕರಣ ದಾಖಲಾದರೆ ಆರೋಪಿಗಳಿಗೆ ಐದು ವರ್ಷಗಳ ಶಿಕ್ಷೆ ವಿಧಿಸಲು ಅವಕಾಶವಿದೆ.