ಅಸೆಂಬ್ಲಿ ಚುನಾವಣೆಗೆ ಜೆಡಿಎಸ್ ರೆಡಿ ; ಎರಡು ವರ್ಷ ಮೊದಲೇ ಅಭ್ಯರ್ಥಿ ಘೋಷಿಸಿದ ಎಚ್ಡಿಕೆ !

25-01-21 05:51 pm       Bangalore Correspondent   ಕರ್ನಾಟಕ

ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಅಷ್ಟರಲ್ಲೇ ಜೆಡಿಎಸ್ ಚುನಾವಣೆಗೆ ತಯಾರಿ ಆರಂಭಿಸಿದೆ.

ಬೆಂಗಳೂರು, ಜ.25; ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಅಷ್ಟರಲ್ಲೇ ಜೆಡಿಎಸ್ ಚುನಾವಣೆಗೆ ತಯಾರಿ ಆರಂಭಿಸಿದೆ. ಅಲ್ಲದೆ, ಮುಂದಿನ ವಿಧಾನಸಭೆ ಚುನಾವಣೆಗೆ ಈಗಲೇ ಅಭ್ಯರ್ಥಿಗಳ ಘೋಷಣೆಗೆ ಮುಂದಾಗಿದೆ. 

ಬೆಂಗಳೂರಿನ ಜೆ.ಪಿ. ನಗರದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ, ಆನೇಕಲ್ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳ ಘೋಷಣೆ ಮಾಡಿದ್ದಾರೆ. ಆನೇಕಲ್ ಕ್ಷೇತ್ರದಿಂದ ಕೆ.ಪಿ.ರಾಜು, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಪ್ರಭಾಕರ ರೆಡ್ಡಿ ಅವರ ಹೆಸರನ್ನು ಅಭ್ಯರ್ಥಿಗಳಾಗಿಸಿ ಘೋಷಣೆ ಮಾಡಿದ್ದಾರೆ. 

ಇದೇ ವೇಳೆ ಮಾತನಾಡಿದ ಕುಮಾರಸ್ವಾಮಿ, ಕಳೆದ ಬಾರಿ ಬಿಎಸ್ಪಿ ಜೊತೆ ಮೈತ್ರಿ ಮಾಡಿದ್ದು ದುಬಾರಿಯಾಯ್ತು. ಈ ಬಾರಿ ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳಲ್ಲ. ಏಕಾಂಗಿಯಾಗಿ ಚುನಾವಣೆ ಎದುರಿಸುತ್ತೇವೆ. ಮುಂದಿನ ಬಾರಿ ಅಧಿಕಾರಕ್ಕೆ ಬರಲೇಬೇಕೆಂಬ ನೆಲೆಯಲ್ಲಿ ಈಗಲೇ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದೇನೆ. ಪಕ್ಷ ತಳಮಟ್ಟದಲ್ಲಿ ಗಟ್ಟಿಗೊಳಿಸಲು ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದ್ದೇನೆ. ಈಗಿನಿಂದಲೇ ಚುನಾವಣೆ ತಯಾರಿ ಮಾಡಿಕೊಳ್ಳಲು ಸೂಚನೆ ನೀಡಿದ್ದೇನೆ ಎಂದರು. 

ಜೆಡಿಎಸ್ ವರಿಷ್ಠ ದೇವೇಗೌಡರು ಮತ್ತು ಎಚ್ಡಿ ಕುಮಾರಸ್ವಾಮಿ, ಮುಂದಿನ ಬಾರಿ ಹೇಗಾದರೂ ಅಧಿಕಾರ ಗಿಟ್ಟಿಸಿಕೊಳ್ಳಬೇಕೆಂಬ ನೆಲೆಯಲ್ಲಿ ತಳಹಂತದಲ್ಲಿ ಪಕ್ಷ ಗಟ್ಟಿಗೊಳಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಅದಕ್ಕಾಗಿ ಜೆಡಿಎಸ್ ಪ್ರಾಬಲ್ಯ ಇರುವ ಕಡೆ ಸಮಾವೇಶ ನಡೆಸುತ್ತಿದ್ದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿದ್ದಾರೆ.