ಹೇಮಾವತಿ ಅಣೆಕಟ್ಟು ಬಳಿ ಹತ್ತು ಕೇಜಿ ಸ್ಫೋಟಕ, 200 ಜಿಲೆಟಿನ್ ಕಡ್ಡಿ ಪತ್ತೆ !

28-01-21 02:39 pm       Headline Karnataka News Network   ಕರ್ನಾಟಕ

ಹಾಸನ ಜಿಲ್ಲೆಯ ಅಕ್ರಮ ಗಣಿಗಾರಿಕೆ ನಡೆಸುವ ಮಂದಿ ತಮ್ಮಲ್ಲಿನ ಸ್ಫೋಟಕಗಳನ್ನು ಕಾಡಿನಲ್ಲಿ ಬಚ್ಚಿಡುವ ಕೆಲಸ ಮಾಡುತ್ತಿದ್ದಾರೆ.

ಹಾಸನ, ಜ.28: ಶಿವಮೊಗ್ಗದಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟಕ ದಾಸ್ತಾನು ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿರುವಾಗಲೇ ಹಾಸನ ಜಿಲ್ಲೆಯ ಅಕ್ರಮ ಗಣಿಗಾರಿಕೆ ನಡೆಸುವ ಮಂದಿ ತಮ್ಮಲ್ಲಿನ ಸ್ಫೋಟಕಗಳನ್ನು ಕಾಡಿನಲ್ಲಿ ಬಚ್ಚಿಡುವ ಕೆಲಸ ಮಾಡುತ್ತಿದ್ದಾರೆ. ಹಾಸನದ ಹೇಮಾವತಿ ನದಿ ದಂಡೆಯಲ್ಲಿ ಅಪಾರ ಪ್ರಮಾಣದ ಅಮೋನಿಯಂ ನೈಟ್ರೇಟ್ ಮತ್ತು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಪೊಲೀಸರ ತಲೆನೋವಿಗೆ ಕಾರಣವಾಗಿದೆ.

ಗೊರೂರು ಸಮೀಪದ ಹೇಮಾವತಿ ನದಿ ಅಣೆಕಟ್ಟು ಬಳಿಯ ಕಾಡಿನಲ್ಲಿ ಹತ್ತು ಕೇಜಿ ಅಮೋನಿಯಂ ನೈಟ್ರೇಟ್ ಮತ್ತು 200 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಅರಣ್ಯದಲ್ಲಿ ಸ್ಫೋಟಕ ಬಚ್ಚಿಟ್ಟಿರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಸ್ಫೋಟಕವನ್ನು ವಶಕ್ಕೆ ಪಡೆದಿದ್ದಾರೆ. ಕಾಡಿನಲ್ಲಿ ಗುಂಡಿ ತೋಡಿ ಸ್ಫೋಟಕಗಳನ್ನು ಬಚ್ಚಿಡುವ ಕಾರ್ಯ ಮಾಡಿದ್ದರು.

ಶಿವಮೊಗ್ಗದ ಅಕ್ರಮ ಗಣಿಗಾರಿಕೆ ಪತ್ತೆಯಾದ ಬಳಿಕ ಹಾಸನದಲ್ಲಿಯೂ ಅಕ್ರಮದ ವಿರುದ್ಧ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗೊರೂರು ಪಿಎಸ್ಐ ನೇತೃತ್ವದಲ್ಲಿ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಗಿತ್ತು. ಪೊಲೀಸರು ಮತ್ತು ಗಣಿ ಇಲಾಖೆ ಅಧಿಕಾರಿಗಳು ದಾಳಿ ನಡೆಸುವ ಭಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸುವ ಮಂದಿ ತಮ್ಮಲ್ಲಿದ್ದ ಸ್ಫೋಟಕಗಳನ್ನು ಎಲ್ಲೆಲ್ಲೋ ಬಚ್ಚಿಡುವ ಕಾರ್ಯ ಮಾಡುತ್ತಿದ್ದಾರೆ.

ಗಣಿಗಾರಿಕೆ ನಡೆಸುವ ಮಂದಿಯೇ ಇಷ್ಟು ಪ್ರಮಾಣದಲ್ಲಿ ಸ್ಫೋಟಕ ದಾಸ್ತಾನು ಮಾಡಿದ್ದಾರೆಯೇ ಅಥವಾ ಇನ್ನಾವುದೇ ಕೈವಾಡ ಇದ್ದಿರಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಮಲೆನಾಡನ್ನೇ ಕಂಪಿಸಿದ ಭಾರೀ ಸ್ಪೋಟ ; ಕ್ರಷರ್ ಗೆ ತಂದಿದ್ದ ಡೈನಮೈಟ್ ಲೋಡ್ ಲಾರಿಯಲ್ಲೇ ಬ್ಲಾಸ್ಟ್ !! ಹತ್ತಕ್ಕೂ ಹೆಚ್ಚು ಸಾವು

Follow a Major blast in Shivamogga the police have found 200 Gelatin Sticks in Hassan.