ಪರಿಷತ್ತಿನಲ್ಲಿ ಮೈತ್ರಿ ಖಾತ್ರಿ ; ಉಪ ಸಭಾಪತಿ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ, ಜೆಡಿಎಸ್ ಸಾಥ್ !

28-01-21 03:08 pm       Bangalore Correspondent   ಕರ್ನಾಟಕ

ವಿಧಾನ ಪರಿಷತ್ತಿನಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಖಾತ್ರಿಯಾಗಿದೆ. ಉಪ ಸಭಾಪತಿ ಸ್ಥಾನಕ್ಕೆ ಬಿಜೆಪಿಯಿಂದ ಎಂ.ಕೆ. ಪ್ರಾಣೇಶ್ ನಾಮಪತ್ರ ಸಲ್ಲಿಸಿದ್ದಾರೆ.

ಬೆಂಗಳೂರು, ಜ.28: ವಿಧಾನ ಪರಿಷತ್ತಿನಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಖಾತ್ರಿಯಾಗಿದೆ. ಪರಿಷತ್ ಸಭಾಪತಿ ಸ್ಥಾನಕ್ಕೆ ಈಗಾಗ್ಲೇ ಜೆಡಿಎಸ್ ಹಿರಿಯ ಶಾಸಕ, ಮಾಜಿ ಸಚಿವ ಬಸವರಾಜ್ ಹೊರಟ್ಟಿ ಹೆಸರನ್ನು ಫೈನಲ್ ಮಾಡಿರುವಾಗಲೇ ಉಪ ಸಭಾಪತಿ ಸ್ಥಾನಕ್ಕೆ ಬಿಜೆಪಿಯಿಂದ ಎಂ.ಕೆ. ಪ್ರಾಣೇಶ್ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ಸದಸ್ಯರ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ಸಿನ ಹೊರಟ್ಟಿ ಮತ್ತು ಕೋನ ರೆಡ್ಡಿ ಉಪಸ್ಥಿತರಿದ್ದುದು ಬಿಜೆಪಿ- ಜೆಡಿಎಸ್ ನಡುವಿನ ಮೈತ್ರಿಗೆ ಬಲ ಬಂದಂತಾಗಿದೆ.

ಇದೇ ವೇಳೆ, ಕಾಂಗ್ರೆಸ್ ನಿಂದ ಉಪ ಸಭಾಪತಿ ಸ್ಥಾನಕ್ಕೆ ಕೆ.ಸಿ. ಕೊಂಡಯ್ಯ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ, ಬಿ.ಕೆ. ಹರಿಪ್ರಸಾದ್, ಪರಿಷತ್ತಿನ ಮುಖ್ಯ ಸಚೇತಕ ನಾರಾಯಣ ಸ್ವಾಮಿ, ಎಸ್.ಆರ್ ಪಾಟೀಲ್ ಉಪಸ್ಥಿತರಿದ್ದರು.

ಜೆಡಿಎಸ್ ಮುಖಂಡ, ಉಪ ಸಭಾಪತಿಯಾಗಿದ್ದ ಎಸ್.ಎಲ್. ಧರ್ಮೇಗೌಡರ ನಿಧನದಿಂದ ಆ ಸ್ಥಾನ ತೆರವಾಗಿತ್ತು. ಸಭಾಪತಿ ಜಾಗದಲ್ಲಿ ಕಾಂಗ್ರೆಸಿನ ಪ್ರತಾಪಚಂದ್ರ ಶೆಟ್ಟಿ ಇದ್ದು, ಅವರನ್ನು ಕೆಳಗಿಳಿಸಲು ಬಿಜೆಪಿ ಮತ್ತು ಜೆಡಿಎಸ್ ಮುಂದಾಗಿದೆ. ಬಿಜೆಪಿ ಸದಸ್ಯರು ಈಗಾಗ್ಲೇ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ಮಂಡಿಸಿದ್ದಾರೆ. ಅದಕ್ಕೂ ಮುನ್ನ ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದ್ದು, ಮೊದಲು ಅದನ್ನು ತುಂಬಲು ಕಸರತ್ತು ನಡೆದಿದೆ.

ಪರಿಷತ್ತಿನಲ್ಲಿ ಬಿಜೆಪಿ 31 ಸದಸ್ಯರನ್ನು ಹೊಂದಿದ್ದರೆ, ಕಾಂಗ್ರೆಸ್ 29 ಮತ್ತು ಜೆಡಿಎಸ್ 13 ಸ್ಥಾನಗಳನ್ನು ಹೊಂದಿದೆ. ವಿಧಾನಸಭೆಯಲ್ಲಿ ಪೂರ್ಣ ಬಹುಮತ ಹೊಂದಿದ್ದರೂ, ಬಿಜೆಪಿಗೆ ಪರಿಷತ್ತಿನ ಪೂರ್ಣ ಬಹುಮತ ಇಲ್ಲ. ಹೀಗಾಗಿ ವಿವಾದಿತ ಮಸೂದೆಗಳನ್ನು ಬಿಜೆಪಿ ಸರಕಾರಕ್ಕೆ ಪರಿಷತ್ತಿನಲ್ಲಿ ಪಾಸ್ ಮಾಡಲು ಸಾಧ್ಯವಾಗದ ಸ್ಥಿತಿಯಿದೆ. ಇದಕ್ಕಾಗಿಯೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು, ಗೋಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಕೆಲವು ಮಸೂದೆಗಳನ್ನು ಪರಿಷತ್ತಿನಲ್ಲಿ ಅಂಗೀಕಾರ ಪಡೆಯಲು ತಂತ್ರ ಹೂಡಿದೆ.

ಈ ಹಿಂದೆ ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷದ ಪ್ರತಾಪಚಂದ್ರ ಶೆಟ್ಟಿ ಸಭಾಪತಿಯಾಗಿದ್ದರು. ಧರ್ಮೇಗೌಡರಿಗೆ ಉಪ ಸಭಾಪತಿ ಸ್ಥಾನ ನೀಡಲಾಗಿದೆ. ಈಗ ಜೆಡಿಎಸ್ ಆಡಳಿತಾರೂಢ ಬಿಜೆಪಿಯ ಸಖ್ಯ ಬೆಳೆಸಿರುವುದರಿಂದ ಬಿಜೆಪಿಗೆ ಪರಿಷತ್ತಿನಲ್ಲಿ ಬಲ ಬಂದಿದೆ. ಜೆಡಿಎಸ್, ಬಿಜೆಪಿಗೆ ವಿಷಯಾಧಾರಿತ ಬೆಂಬಲ ನೀಡುವುದಾಗಿ ಹೇಳಿದ್ದು, ಈ ಬಗ್ಗೆ ಎರಡೂ ಪಕ್ಷದ ಮುಖಂಡರು ಕುಳಿತು ನಿರ್ಧಾರಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಉಪ ಸಭಾಪತಿಯಾಗುವುದು ಖಚಿತ ಎನ್ನಲಾಗುತ್ತಿದೆ.

ಉಪ ಸಭಾಪತಿ ಸ್ಥಾನ ತುಂಬಿದ ಬಳಿಕ ಅವಿಶ್ವಾಸ ವಿಚಾರ ಚರ್ಚೆಗೆ ಬರಲಿದ್ದು, ಸಭಾಪತಿ ಸ್ಥಾನದಿಂದ ಪ್ರತಾಪರನ್ನು ಕೆಳಗಿಳಿಸಿ ಹೊರಟ್ಟಿಯನ್ನು ಆ ಸ್ಥಾನಕ್ಕೆ ತರುವ ಪ್ಲಾನ್ ಇದೆ. ಹಾಗಾದಲ್ಲಿ ಜೆಡಿಎಸ್ ಅಭ್ಯರ್ಥಿ ಮೊದಲ ಬಾರಿಗೆ ಪರಿಷತ್ತಿನ ಸಭಾಪತಿ ಸ್ಥಾನ ಅಲಂಕರಿಸಿದಂತಾಗಲಿದೆ.