ಏಷ್ಯಾದ ಅತಿದೊಡ್ಡ ಏರ್ ಶೋ ಆರಂಭ ; ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ

03-02-21 02:18 pm       Bangalore Correspondent   ಕರ್ನಾಟಕ

13ನೇ ಆವೃತ್ತಿಯ ಮೂರು ದಿನಗಳ ಏಷ್ಯಾದಲ್ಲೇ ಅತಿದೊಡ್ಡ ಏರ್ ಶೋಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದರು.

ಬೆಂಗಳೂರು, ಫೆ.3: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಇದೇ ಮೊದಲ ಬಾರಿಗೆ ಕೋವಿಡ್ ಕಾರಣದಿಂದ ಸಾರ್ವಜನಿಕರನ್ನು ದೂರವಿಟ್ಟು ಏರ್ ಶೋ ಮಾಡಲಾಗಿದೆ. ಯಲಹಂಕದಲ್ಲಿ ಏರ್ಪಡಿಸಲಾಗಿರುವ 13ನೇ ಆವೃತ್ತಿಯ ಮೂರು ದಿನಗಳ ಏಷ್ಯಾದಲ್ಲೇ ಅತಿದೊಡ್ಡ ಏರ್ ಶೋಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದರು.

ಇದಕ್ಕೂ ಮುನ್ನ ಎಂಐ ಹೆಲಿಕಾಪ್ಟರ್ ಗಳು ಆಗಸದಲ್ಲಿ ರಾಷ್ಟ್ರ ಧ್ವಜ, ಭಾರತೀಯ ವಾಯುಪಡೆಯ ಧ್ವಜ ಮತ್ತು ಏರೋ ಇಂಡಿಯಾದ ಬಾವುಟ ಹಿಡಿದು ಸಮಾನ ಅಂತರದಲ್ಲಿ ಹಾರಿಬಂದಿದ್ದು ರೋಚಕವಾಗಿತ್ತು. ಕಳೆದ ವರ್ಷ ವಾಯುಪಡೆಗೆ ಸೇರ್ಪಡೆಯಾಗಿರುವ ರಫೇಲ್ ಜೆಟ್ ವಿಮಾನಗಳು, ಸೂರ್ಯ, ಸಾರಂಗ್ ಫೈಟರ್ ಜೆಟ್ ಗಳು ಈ ಬಾರಿಯ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಅಲ್ಲದೆ, ಅಮೆರಿಕದ ಬಿ1 ಐಬಿ ಸೂಪರ್ ಸಾನಿಕ್ ಬಾಂಬರ್ ವಿಮಾನವೂ ಏರ್ ಶೋನದಲ್ಲಿ ಹಾರಾಟ ನಡೆಸಲಿದೆ.

ಕೋವಿಡ್ ಬಳಿಕ ಜಗತ್ತಿನಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಏರ್ ಶೋ ಇದಾಗಿದ್ದು, ಈ ಬಾರಿ ಸಾರ್ವಜನಿಕರಿಗೆ ವಾಯುನೆಲೆ ಪ್ರದೇಶಕ್ಕೆ ಪ್ರವೇಶ ನೀಡಲಾಗಿಲ್ಲ. ನೇರವಾಗಿ ನೋಡುವ ಬದಲಾಗಿ ಟಿವಿ, ಯೂಟ್ಯೂಬ್ ಮೂಲಕ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಇದಕ್ಕೆ ಮೊದಲ ಹೈಬ್ರಿಡ್ ಏರ್ ಶೋ ಎಂದೂ ಹೆಸರಿಸಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 80ಕ್ಕೂ ಹೆಚ್ಚು ವಿದೇಶಿ ಕಂಪನಿಗಳು, ರಕ್ಷಣಾ ಇಲಾಖೆ ಪ್ರತಿನಿಧಿಗಳು, 55ಕ್ಕೂ ಹೆಚ್ಚು ರಾಷ್ಟ್ರಗಳ ಅಧಿಕಾರಿಗಳು, 540 ಪ್ರದರ್ಶಕರು ಭಾಗವಹಿಸುತ್ತಿದ್ದಾರೆ.

ಇದೇ ವೇಳೆ, ಮಾತನಾಡಿದ ರಾಜನಾಥ್ ಸಿಂಗ್, ಜಾಗತಿಕ ಸಾಂಕ್ರಾಮಿಕ ರೋಗದ ಆತಂಕದ ನಡುವೆಯೂ ಇಷ್ಟೊಂದು ಅಪಾರ ಸಂಖ್ಯೆಯಲ್ಲಿ ಕಂಪನಿಗಳು, ಹಲವು ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದು ಸಂತೋಷವಾಗುತ್ತಿದೆ. ಇದು ಜಾಗತಿಕವಾಗಿ ಭಾರತ ಬೆಳೆಯುತ್ತಿರುವುದನ್ನು ಸೂಚಿಸುತ್ತದೆ ಎಂದು ಹೇಳಿದರು.

ರಕ್ಷಣಾ ತಂತ್ರಜ್ಞಾನಕ್ಕೆ 130 ಬಿಲಿಯನ್ ಡಾಲರ್ !

ರಕ್ಷಣಾ ವಿಭಾಗದ ಸಾಮರ್ಥ್ಯ ವೃದ್ಧಿಸಲು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ವಿವಿಧ ರಕ್ಷಣಾ ತಂತ್ರಜ್ಞಾನ, ಉಪಕರಣಗಳ ತಯಾರಿಕೆಗೆ ಆತ್ಮನಿರ್ಭರ್ ಯೋಜನೆಯಡಿ ದೇಶೀಯವಾಗಿ ತೊಡಗಿಸಿದ್ದೇವೆ. ಮುಂದಿನ 7-8 ವರ್ಷಗಳಲ್ಲಿ ರಕ್ಷಣಾ ವಿಭಾಗಕ್ಕೆ 130 ಬಿಲಿಯನ್ ಡಾಲರ್ ಖರ್ಚು ಮಾಡಲು ಯೋಜನೆ ಹಾಕಿದ್ದೇವೆ ಎಂದು ತಿಳಿಸಿದರು.

ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ದೇಶದ ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಗಳ ಉತ್ಪಾದನೆಯಲ್ಲಿ ಶೇ.65ರಷ್ಟು ಬೆಂಗಳೂರಿನಲ್ಲೇ ಆಗುತ್ತಿರುವುದು ಹೆಮ್ಮೆಯ ವಿಚಾರ. ದೇವನಹಳ್ಳಿಯಲ್ಲಿ ಒಂದು ಸಾವಿರ ಎಕರೆ ವ್ಯಾಪ್ತಿಯಲ್ಲಿ ಅಂತಾರಾಷ್ಟ್ರೀಯ ಏರೋ ಸ್ಪೇಸ್ ಯಾರ್ಡ್ ಸ್ಥಾಪನೆಯಾಗುತ್ತಿದೆ. ಅದರಲ್ಲಿ 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸ್ಥಾಪನೆಯೂ ಆಗಲಿದೆ ಎಂದರು.

ಕೇಂದ್ರ ಸಚಿವ ಸದಾನಂದ ಗೌಡ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಮೂರು ಸೇನೆಗಳ ರಕ್ಷಣಾ ಮುಖ್ಯಸ್ಥರು, ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್ ರಾವತ್, ಕೇಂದ್ರ ರಕ್ಷಣಾ ಇಲಾಖೆ ಕಾರ್ಯದರ್ಶಿ ರಾಜಕುಮಾರ್ ಸಿಂಗ್ ಮತ್ತಿತರರಿದ್ದರು. 

The 13th Aero India 2021 took off officially with the defence minister Rajnath Singh inaugurating the event in Bengaluru on Wednesday which was followed by a flying display. This is the first air show in the international calendar to take place post-COVID and it is also the first hybrid show.