ಟಿವಿ, ಬೈಕ್ ಇದೆಯೆಂದು ಬಿಪಿಎಲ್ ಕಾರ್ಡ್ ರದ್ದುಪಡಿಸುವುದು ಸರಿಯಲ್ಲ ; ಸುರೇಶ್ ಕುಮಾರ್

15-02-21 04:08 pm       Headline Karnataka News Network   ಕರ್ನಾಟಕ

ಟಿವಿ, ಫ್ರಿಡ್ಜ್ ಇದ್ದವರು ಬಿಪಿಎಲ್ ಕಾರ್ಡನ್ನು ವಾಪಸ್ ನೀಡಬೇಕೆಂಬ ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಸ್ವಪಕ್ಷೀಯರಿಂದಲೇ ಆಕ್ಷೇಪ ವ್ಯಕ್ತವಾಗಿದೆ.

ಮೈಸೂರು, ಫೆ.15: ಟಿವಿ, ಫ್ರಿಡ್ಜ್ ಇದ್ದವರು ಬಿಪಿಎಲ್ ಕಾರ್ಡನ್ನು ವಾಪಸ್ ನೀಡಬೇಕೆಂಬ ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಸ್ವಪಕ್ಷೀಯರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಬಡವರು ತಿಂಗಳ ಕಂತು ಕಟ್ಟಿಕೊಂಡು ಟಿವಿ, ಬೈಕ್ ಕೊಂಡಿರುತ್ತಾರೆ. ಹಾಗೆಂದು ಅವರ ಬಿಪಿಎಲ್ ಕಾರ್ಡ್ ರದ್ದುಪಡಿಸಬೇಕೆಂದು ಹೇಳುವುದು ಸರಿಯಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ಟಿವಿ ನೋಡಿಕೊಂಡೇ ಮಕ್ಕಳು ಪಾಠ ಕಲಿತಿದ್ದಾರೆ. ಈಗ ಪ್ರತಿ ಮನೆಯಲ್ಲೂ ಟಿವಿ ಇದ್ದೇ ಇರುತ್ತದೆ. ಟಿವಿ ಇಲ್ಲದಿರುತ್ತಿದ್ದರೆ ಮಕ್ಕಳಿಗೂ ಕಲಿಕೆ ಕಷ್ಟವಾಗುತ್ತಿತ್ತು. ಟಿವಿ ಇದೆಯೆಂದು ಅವರ ಬಿಪಿಎಲ್ ಕಾರ್ಡ್ ಕಿತ್ತುಕೊಳ್ಳುವುದು ಸಲ್ಲದ ನಡೆಯಲ್ಲ. ಈ ಬಗ್ಗೆ ಉಮೇಶ ಕತ್ತಿ ಜೊತೆಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಉಮೇಶ್ ಕತ್ತಿ ಹೇಳಿಗೆ ಬಳ್ಳಾರಿಯ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗ ಬಡವರ ಮನೆಯಲ್ಲೂ ಟಿವಿ ಇರುತ್ತದೆ. ಸಾಲ ಮಾಡಿಯಾದರೂ, ಬೈಕ್, ಸ್ಕೂಟರ್ ತೆಗೆದಿರುತ್ತಾರೆ. ಹಾಗೆಂದು ಬಿಪಿಎಲ್ ಕಾರ್ಡ್ ಹಿಂತೆಗೆಯುವ ಪ್ರಸ್ತಾಪ ಸರಿಯಲ್ಲ ಎಂದಿದ್ದಾರೆ.

ಭಾನುವಾರ ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಉಮೇಶ್ ಕತ್ತಿ, ಐದು ಎಕರೆಗಿಂತ ಹೆಚ್ಚು ಜಮೀನು, ಮನೆಯಲ್ಲಿ ಟಿವಿ, ಫ್ರಿಡ್ಜ್, ಬೈಕ್ ಇದ್ದರೆ ಅಂಥವರ ಬಿಪಿಎಲ್ ಕಾರ್ಡನ್ನು ರದ್ದುಪಡಿಸಲಾಗುವುದು. ಮಾರ್ಚ್ ಅಂತ್ಯದೊಳಗೆ ಸ್ವಇಚ್ಛೆಯಿಂದ ಈ ಸೌಲಭ್ಯ ಇದ್ದವರು ತಮ್ಮ ಬಿಪಿಎಲ್ ಕಾರ್ಡ್ ರದ್ದುಪಡಿಸಬೇಕು. ಇಲ್ಲದಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಹೇಳಿಕೆ ನೀಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. 

 ಬಡ, ಮಧ್ಯಮ ವರ್ಗದವರಿಗೆ ರಾಜ್ಯ ಸರ್ಕಾರ ಶಾಕ್ ! ಟಿವಿ, ಬೈಕ್ ಹೊಂದಿದ್ದರೆ ಬಿಪಿಎಲ್ ಕಾರ್ಡ್ ರದ್ದು ! ಸಂಚಲನ ಸೃಷ್ಟಿಸಿದ ಸಚಿವ ಕತ್ತಿ

 ಟಿವಿ ಇಲ್ಲದ ಮನೆ ಇದೆಯೇ ? ಬಿಜೆಪಿಯಿಂದ ‘ಗರೀಬೋಂಕೋ ಹಠಾವೋ’ ಮಾಡುತ್ತಿದ್ದಾರೆ