ಶಿರಾಡಿ ಘಾಟ್ ; ಮೂತ್ರಕ್ಕೆ ತೆರಳಿದ್ದ ಲಾರಿ ಚಾಲಕನ ಮೇಲೆರಗಿದ ಒಂಟಿ ಸಲಗ !

26-02-21 04:11 pm       Headline Karnataka News Network   ಕರ್ನಾಟಕ

ಲಾರಿ ನಿಲ್ಲಿಸಿ ಮೂತ್ರ ವಿಸರ್ಜನೆಗೆ ತೆರಳಿದ್ದ ಲಾರಿ ಚಾಲಕ ಕಾಡಾನೆಯ ತಿವಿತಕ್ಕೆ ಬಲಿಯಾದ ಘಟನೆ ಶಿರಾಡಿ ಘಾಟ್ ಬಳಿ ನಡೆದಿದೆ. 

ಬೆಳ್ತಂಗಡಿ, ಫೆ.26: ಹೆದ್ದಾರಿಯಲ್ಲಿ ಲಾರಿ ನಿಲ್ಲಿಸಿ ಮೂತ್ರ ವಿಸರ್ಜನೆಗೆ ತೆರಳಿದ್ದ ಲಾರಿ ಚಾಲಕ ಕಾಡಾನೆಯ ತಿವಿತಕ್ಕೆ ಬಲಿಯಾದ ಘಟನೆ ಶಿರಾಡಿ ಘಾಟ್ ಬಳಿ ನಡೆದಿದೆ. 

ಮಂಗಳೂರಿನಿಂದ ಬೆಂಗಳೂರಿಗೆ ಟ್ಯಾಂಕರ್ ಚಲಾಯಿಸಿಕೊಂಡು ತೆರಳಿದ್ದ ರಾಜಸ್ಥಾನ ಮೂಲದ ಚಾಲಕ, ಶಿರಾಡಿ ಘಾಟ್ ಬಳಿಯ ಕೆಂಪುಹೊಳೆ ಎಂಬಲ್ಲಿ ನಿನ್ನೆ ರಾತ್ರಿ ಲಾರಿ ನಿಲ್ಲಿಸಿದ್ದು ಮೂತ್ರೆ ವಿಸರ್ಜನೆಗೆಂದು ರಸ್ತೆ ಬದಿಗೆ ತೆರಳಿದ್ದಾನೆ. ಈ ವೇಳೆ ಜವರಾಯನಂತೆ ಕಾದಿದ್ದ ಕಾಡಾನೆ ಎರಗಿದ್ದು ಸೊಂಡಿಲಿನಲ್ಲಿ ಎತ್ತಿ ಬಿಸಾಕಿದೆ. ಒಂಟಿ ಸಲಗದ ಹೊಡೆತಕ್ಕೆ ಸಿಲುಕಿದ ಚಾಲಕ ಸ್ಥಳದಲ್ಲೇ ಸಾವು ಕಂಡಿದ್ದಾನೆ. 

ರಸ್ತೆಯಲ್ಲಿ ಬಿದ್ದುಕೊಂಡಿದ್ದ ಚಾಲಕನ ಶವವನ್ನು ಸಕಲೇಶಪುರ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಸಕಲೇಶಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿರಾಡಿ ಘಾಟ್ ಬಳಿ ಕಳೆದ ಹಲವು ಸಮಯಗಳಿಂದ ಒಂಟಿ ಸಲಗ ಬೀಡುಬಿಟ್ಟಿದ್ದು ಹಗಲಿನಲ್ಲೂ ರಸ್ತೆಯಲ್ಲಿ ಕಾಣಸಿಗುತ್ತಿದೆ. ಇದರಿಂದಾಗಿ ವಾಹನ ಸವಾರರು ಅಲ್ಲಿಂದ ತೆರಳಲು ಭಯ ಪಡುತ್ತಿದ್ದಾರೆ.

In a tragic incident, a Truck driver was killed after a wild elephant attacked him while he was urinating stopping then truck at Shiradi Ghat in Mangalore.