ಕೆಎಸ್ಸಾರ್ಪಿ ಇತಿಹಾಸದಲ್ಲೇ ಮೊದಲ ಬಾರಿಗೆ ಭಡ್ತಿ ; ಸಿಬಂದಿಗೆ ಆರು ವರ್ಷಕ್ಕೆ ಭಡ್ತಿ ನೀಡಿ ಅಲೋಕ್ ಕುಮಾರ್ ಅಚ್ಚರಿ !

26-02-21 05:12 pm       Bangalore Correspondent   ಕರ್ನಾಟಕ

ಆರು ವರ್ಷ ಸೇವೆ ಪೂರೈಸಿದ ಕರ್ನಾಟಕ ರಾಜ್ಯ ಮೀಸಲು ಪಡೆಯ 126 ಪುರುಷ ಅಭ್ಯರ್ಥಿಗಳಿಗೆ ಮುಖ್ಯ ಪೇದೆ ಹುದ್ದೆಗೆ ಬಡ್ತಿ ನೀಡಲಾಗಿದೆ.

ಬೆಂಗಳೂರು, ಫೆ.26 : ಪೊಲೀಸ್ ಇಲಾಖೆಯಲ್ಲಿ ಹತ್ತಾರು ವರ್ಷ ದುಡಿದರೂ ಬಡ್ತಿ ಸಿಗದೆ ರೋಸಿ ಹೋದವರ ಮಾತು ಕೇಳಿದ್ದೇವೆ. ಇಂಥ ಮಾತುಗಳ ಮಧ್ಯೆಯೇ ಕರ್ನಾಟಕ ರಾಜ್ಯ ಮೀಸಲು ಪಡೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್, ಕೆಎಸ್ಸಾರ್ಪಿ ಇತಿಹಾಸದಲ್ಲೇ ಮೊದಲ ಬಾರಿಗೆ ಆರು ವರ್ಷ ಸೇವೆ ಪೂರೈಸಿದ ಪೊಲೀಸ್ ಕಾನ್‌ಸ್ಟೇಬಲ್ ಗಳಿಗೆ ಹೆಡ್ ಕಾನ್‌ಸ್ಟೇಬಲ್ ಹುದ್ದೆಗೆ ಬಡ್ತಿ ನೀಡಿದ್ದಾರೆ.

ಆರು ವರ್ಷ ಸೇವೆ ಪೂರೈಸಿದ ಕರ್ನಾಟಕ ರಾಜ್ಯ ಮೀಸಲು ಪಡೆಯ 126 ಪುರುಷ ಅಭ್ಯರ್ಥಿಗಳಿಗೆ ಮುಖ್ಯ ಪೇದೆ ಹುದ್ದೆಗೆ ಬಡ್ತಿ ನೀಡಲಾಗಿದೆ. ಅಲ್ಲದೆ, 4 ರಿಂದ 5 ವರ್ಷ ಸೇವೆ ಸಲ್ಲಿಸಿದ 72 ಮಹಿಳಾ ಅಭ್ಯರ್ಥಿಗಳಿಗೆ ಕೂಡ ಬಡ್ತಿ ನೀಡಿದ್ದಾರೆ. ಈ ಮೂಲಕ ಹತ್ತು ವರ್ಷ ಸೇವೆ ಸಲ್ಲಿಸಿದರೂ ಬಡ್ತಿ ಸಿಗದೇ ಪರದಾಡುತ್ತಿದ್ದ ಪೊಲೀಸ್ ಸಿಬ್ಬಂದಿಯಲ್ಲಿ ಸಂತಸ ಮೂಡಿದೆ. ಕರ್ನಾಟಕ ರಾಜ್ಯ ಪೊಲೀಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಕೆಲಸ ಆಗಿದೆ ಎಂದು ಕೆಎಸ್ ಆರ್ ಪಿ ಪಡೆಯ ಮುಖ್ಯಸ್ಥ ಅಲೋಕ್ ಕುಮಾರ್ ಸಂತಸ ಹಂಚಿಕೊಂಡಿದ್ದಾರೆ. 

ಕಂದಾಯ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಐದು ವರ್ಷ ಸೇವೆ ಸಲ್ಲಿಸಿದರೆ ಕಡ್ಡಾಯ ಬಡ್ತಿ ಸಿಗುತ್ತದೆ. ಆದರೆ ಪೊಲೀಸ್ ಇಲಾಖೆಯಲ್ಲಿ ಮಾತ್ರ ಅದರ ಪಾಲನೆ ಆಗುವುದಿಲ್ಲ. ಈ ಹಿಂದೆ ನಿವೃತ್ತ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ವರದಿಯಲ್ಲಿ ಬಡ್ತಿ ಸಂಗತಿ ಪ್ರಸ್ತಾಪವಾಗಿತ್ತು. ಬಡ್ತಿ ಅನ್ನೋದನ್ನೇ ಮರೆತಿದ್ದ ರಾಜ್ಯ ಮೀಸಲು ಪಡೆಯ ಸಿಬ್ಬಂದಿಗೆ ಈಗ ಐದು ವರ್ಷಕ್ಕೆ ಪದೋನ್ನತಿ ಸಿಕ್ಕಿದ್ದು ಸಂತಸದ ಜೊತೆ ಅಚ್ಚರಿಯನ್ನೂ ಮೂಡಿಸಿದೆ. 

ಆರಂಭದಲ್ಲಿ ಹೊಟ್ಟೆ ಬಿಟ್ಟು ದೇಹ ಬೆಳೆಸಿಕೊಂಡಿದ್ದ ಕರ್ನಾಟಕ ರಾಜ್ಯ ಮೀಸಲು ಪಡೆಯ ಸಿಬ್ಬಂದಿಗೆ ತೂಕ ಇಳಿಸುವ ಟಾಸ್ಕ್ ಕೊಟ್ಟಿದ್ದರು, ಅಲೋಕ್ ಕುಮಾರ್. ಆರಂಭದಲ್ಲಿ ಇದಕ್ಕೆ ಅಪಸ್ವರ ಕೇಳಿ ಬಂದಿತ್ತು. ಬೆಳಗಿನಿಂದ ಸಂಜೆ ವರಗೆ ಕೆಲಸ ಮಾಡಿ ಬೆಳಗ್ಗೆ ಎದ್ದು ಓಡುವರು ಯಾರು ? ಎಂದು ಅಸಮಾಧಾನ ತೋಡಿಕೊಂಡಿದ್ದರು. ಆದರೆ, ಹಂತ ಹಂತವಾಗಿ ಸಿಬ್ಬಂದಿ ತೂಕ ಇಳಿಸಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ವಿವಾದಗಳಿಂದಲೇ ನಗರ ಪೊಲೀಸ್‌ ಆಯುಕ್ತ ಹುದ್ದೆಯಿಂದ ನಿರ್ಗಮಿಸಿದ್ದ ಅಲೋಕ್ ಕುಮಾರ್ ಮೀಸಲು ಪಡೆಯ ಸಿಬ್ಬಂದಿಯಲ್ಲಿ ಬದಲಾವಣೆ ತರುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.