ಬುಡಕಟ್ಟು ಜನಾಂಗದವರು ಏಸುವನ್ನು ಅಪ್ಪಿಕೊಳ್ಳುತ್ತಾರಂದ್ರೆ ಮೀಸಲಾತಿ ಏಕೆ ?

06-03-21 03:43 pm       Headline Karnataka News Network   ಕರ್ನಾಟಕ

ವಿಶಿಷ್ಟ ಸಂಸ್ಕೃತಿಯವರು ಕೂಡ ಏಸುವನ್ನು ದೇವರೆಂದು ಒಪ್ಪಿಕೊಳ್ಳುವ ವಿವೇಚನೆ ಪಡೆದಿದ್ದಾರೆ ಅಂದ್ರೆ ಅವರಿಗೆ ಪರಿಶಿಷ್ಟರಿಗೆ ನೀಡಬೇಕಾದ ಮೀಸಲಾತಿ ನೀಡಬೇಕಿಲ್ಲ ಎಂದು ಮೈಸೂರು ಸಂಸದ ಪ್ರತಾಪಸಿಂಹ ಹೇಳಿದ್ದಾರೆ.

ಮೈಸೂರು, ಮಾ.6: ಬುಡಕಟ್ಟು ಜನಾಂಗದವರು ನಾಗರಿಕ ಸಮಾಜದಿಂದ ದೂರವಿದ್ದುಕೊಂಡು ಕಾಡಿನಲ್ಲಿರುವ ದೇವರನ್ನು ಪೂಜಿಸುತ್ತಾರೆ. ಅವರಲ್ಲಿ ವಿಶಿಷ್ಟ ಸಂಸ್ಕೃತಿ, ಆಚರಣೆ ಇದೆ. ಹಾಗೆಂದು, ಅಂಥ ವಿಶಿಷ್ಟ ಸಂಸ್ಕೃತಿಯವರು ಕೂಡ ಏಸುವನ್ನು ದೇವರೆಂದು ಒಪ್ಪಿಕೊಳ್ಳುವ ವಿವೇಚನೆ ಪಡೆದಿದ್ದಾರೆ ಅಂದ್ರೆ ಅವರಿಗೆ ಪರಿಶಿಷ್ಟರಿಗೆ ನೀಡಬೇಕಾದ ಮೀಸಲಾತಿ ನೀಡಬೇಕಿಲ್ಲ ಎಂದು ಮೈಸೂರು ಸಂಸದ ಪ್ರತಾಪಸಿಂಹ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂಸದರು, ಆಮಿಷ ಒಡ್ಡಿ ಮತಾಂತರ ಮಾಡುವುದನ್ನು ತಡೆಯಬೇಕೆಂಬ ನಿಟ್ಟಿನಲ್ಲಿ ನಾನು ಹಾಗೆ ಹೇಳಿದ್ದೇನೆ. ಜನಪದರು, ಬುಡಕಟ್ಟು ಜನಾಂಗದ ವಿಶಿಷ್ಟ ಸಂಸ್ಕೃತಿಯನ್ನು ಹಾಗೇ ಉಳಿಸಿಕೊಳ್ಳಬೇಕು. ಅದಕ್ಕಾಗಿ ಬುಡಕಟ್ಟಿನವರು ಮತಾಂತರಗೊಂಡರೆ ಅವರಿಗೆ ಪರಿಶಿಷ್ಟ ಜಾತಿಯ ಮೀಸಲಾತಿ ನೀಡಬಾರದು ಎಂದರು.

ಜಾತಿ ವ್ಯವಸ್ಥೆ ಇರುವುದು ಹಿಂದು ಧರ್ಮದಲ್ಲಿ ಮಾತ್ರ. ಜಾತಿಯಲ್ಲಿ ಹಿಂದುಳಿದಿದ್ದಾರೆ ಎಂದು ಅವರಿಗೆ ಪರಿಶಿಷ್ಟ ಜಾತಿ ಮೀಸಲಾತಿ ನೀಡಲಾಗಿದೆ. ಈಗ ಅವರನ್ನು ದಲಿತ ಕ್ರೈಸ್ತರು ಎಂಬ ನೆಲೆಯಲ್ಲಿ ಮೀಸಲಾತಿ ಕೊಡಬೇಕು ಅಂದರೆ ಅದು ಹೇಗೆ ಸಾಧ್ಯ. ಕ್ರಿಶ್ಚಿಯನ್ ಮತ್ತು ಮುಸ್ಲಿಮರಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ ಎಂಬುದನ್ನು ಅವರೇ ಹೇಳುತ್ತಾರೆ. ಈ ಮಾತಿಗೆ ವಿವೇಚನೆ ಇದೆಯೇ ಎಂಬುದನ್ನು ಕೇಳಿದ್ದೇನೆ. ಈ ಮಾತಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಪ್ರತಾಪ ಸಿಂಹ ಹೇಳಿದ್ದಾರೆ.

ಇತ್ತೀಚೆಗೆ ಮೈಸೂರು ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಸಭೆಯಲ್ಲಿ ಸಂಸದರು, ಆದಿವಾಸಿಗಳಿಗೆ ನೀಡುವ ಸವಲತ್ತುಗಳನ್ನು ಕ್ರಿಶ್ಚಿಯನ್ ಆಗಿ ಮತಾಂತರಗೊಂಡ ಬುಡಕಟ್ಟು ಜನಾಂಗಗಳಿಗೆ ನೀಡಬಾರದು ಎಂದು ಹೇಳಿದ್ದರು. ಈ ವಿಚಾರಕ್ಕೆ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದು, ಸಂಸದ ಪ್ರತಾಪಸಿಂಹ ಕ್ರಿಸ್ತಿಯನ್ನರ ಬಗ್ಗೆ ಅವಹೇಳನ ಮಾಡಿದ್ದಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.