ರಾಜಕೀಯದಲ್ಲಿ ಬಿಸಿ ಮುಟ್ಟಿಸಿದ ಸಿಂಗಲ್ ಹೆಂಡ್ತಿ ಹೇಳಿಕೆ ; ಕ್ಷಮೆ ಕೋರಿದ ಸಚಿವ ಸುಧಾಕರ್

24-03-21 05:18 pm       Headline Karnataka News Network   ಕರ್ನಾಟಕ

ಸಿಂಗಲ್ ಹೆಂಡ್ತಿ ಹೇಳಿಕೆಗೆ ಭಾರೀ ವಿರೋಧ ಕೇಳಿಬರುತ್ತಲೇ ಆರೋಗ್ಯ ಸಚಿವ ಸುಧಾಕರ್ ತನ್ನ ಹೇಳಿಕೆ ಬಗ್ಗೆ ಕ್ಷಮೆ ಯಾಚಿಸಿದ್ದಾರೆ.

ಬೆಂಗಳೂರು, ಮಾ.24: ಸಿಂಗಲ್ ಹೆಂಡ್ತಿ ಹೇಳಿಕೆಗೆ ಬಿಜೆಪಿ, ಕಾಂಗ್ರೆಸ್ ಪಕ್ಷದ ನಾಯಕರಿಂದ ಭಾರೀ ವಿರೋಧ ಕೇಳಿಬರುತ್ತಲೇ ಆರೋಗ್ಯ ಸಚಿವ ಸುಧಾಕರ್ ತನ್ನ ಹೇಳಿಕೆ ಬಗ್ಗೆ ಕ್ಷಮೆ ಯಾಚಿಸಿದ್ದಾರೆ.

ಇಲ್ಲಿ ಯಾರೂ ಸತ್ಯ ಹರಿಶ್ಚಂದ್ರರು ಅಲ್ಲ. ಪತ್ನಿಯ ಹೊರತಾದ ಸಂಬಂಧ ಎಷ್ಟು ಮಂದಿ ಇಟ್ಟುಕೊಂಡಿಲ್ಲ. ತನಿಖೆ ನಡೆದರೆ ಎಲ್ಲ 224 ಶಾಸಕರ ನೈತಿಕತೆಯ ಬಗ್ಗೆಯೂ ತನಿಖೆಯಾಗಲಿ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ರಮೇಶ್ ಕುಮಾರ್ ಎಲ್ಲ ಏಕಪತ್ನಿ ವೃತ ಮಾಡುತ್ತಿದ್ದಾರೆಯೇ ಎಂದು ಸುಧಾಕರ್ ಪ್ರಶ್ನೆ ಮಾಡಿದ್ದರು. ಬಿಜೆಪಿ ನಾಯಕರ ವಿರುದ್ಧ ಹೇಳಿಕೆ ನೀಡುತ್ತಿದ್ದ ಕಾಂಗ್ರೆಸಿಗರನ್ನು ಗುರಿಯಾಗಿರಿಸಿ ಸುಧಾಕರ್ ಹೇಳಿಕೆ ನೀಡಿದ್ದು ವಿವಾದದ ರೂಪ ಪಡೆಯುತ್ತಲೇ ಬಿಜೆಪಿಯ ಕೆಲವು ಶಾಸಕರೇ ವಿರೋಧ ವ್ಯಕ್ತಪಡಿಸಿದ್ದರು. ಮಹಿಳಾ ಶಾಸಕಿಯರೂ ಈ ಬಗ್ಗೆ ಕಿಡಿಕಾರಿದ್ದರು.

ಇದಲ್ಲದೆ, ಸಿದ್ದರಾಮಯ್ಯ, ರೇಣುಕಾಚಾರ್ಯ, ದೇಶಪಾಂಡೆ ಮತ್ತಿತರ ಕೆಲವು ಶಾಸಕರು ಸುಧಾಕರ್ ಸದನದಲ್ಲೇ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದರು. ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಸುಧಾಕರ್ ಟ್ವೀಟ್ ಮಾಡಿದ್ದು, ಕೆಲವು ನಾಯಕರ ಏಕಪಕ್ಷೀಯ ಮತ್ತು ಪೂರ್ವಾಗ್ರಹ ಪೀಡಿತ ಹೇಳಿಕೆಗಳಿಂದ ಬೇಸತ್ತು ಅವರ ನೈತಿಕತೆಯನ್ನು ಪ್ರಶ್ನಿಸಿ ಬೆಳಗ್ಗೆ ನಾನು ನೀಡಿದ್ದ ಹೇಳಿಕೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿದೆ. ಎಲ್ಲ 224 ಶಾಸಕರ ಬಗ್ಗೆ ಗೌರವ ಇಟ್ಟುಕೊಂಡಿದ್ದೇನೆ. ಇದರಿಂದ ಯಾರಿಗಾದರೂ ನೋವಾಗಿದ್ದಲ್ಲಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.