ರಾಜಧಾನಿ ಬೆಂಗಳೂರಿಗೆ ತಲುಪಿದ ಮೊದಲ 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲು

11-05-21 02:51 pm       Bangalore Correspondent   ಕರ್ನಾಟಕ

ರಾಂಚಿಯ ಟಾಟಾನಗರದಿಂದ ರಾಜ್ಯಕ್ಕೆ ಆಕ್ಸಿಜನ್ ಕಂಟೇನರ್‌ಗಳನ್ನು ಹೊತ್ತ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಇಂದು ಬೆಂಗಳೂರು ತಲುಪಿದೆ.

Photo credits : ANI @ ANI

ಬೆಂಗಳೂರು, ಮೇ 11: ರಾಂಚಿಯ ಟಾಟಾನಗರದಿಂದ ರಾಜ್ಯಕ್ಕೆ ಆಕ್ಸಿಜನ್ ಕಂಟೇನರ್‌ಗಳನ್ನು ಹೊತ್ತ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಇಂದು (ಮಂಗಳವಾರ) ಬೆಂಗಳೂರು ತಲುಪಿದೆ.

ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು "ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲು ಸೇವೆಯನ್ನು ಆರಂಭಿಸಿದ್ದು, ಸುಮಾರು 120 ಟನ್ ಆಕ್ಸಿಜನ್ ಹೊತ್ತ "ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲು ಜೆಮ್‌ಶೆಡ್‌ಪುರ್‌ನಿಂದ ಸೋಮವಾರ ಹೊರಟಿತ್ತು. ಇಂದು ಬೆಂಗಳೂರಿನ ವೈಟ್‌ಫೀಲ್ಡ್‌ಗೆ ಆಗಮಿಸಿದೆ.

ಕರ್ನಾಟಕದಲ್ಲಿ ಸೋಮವಾರ 39,305 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 24 ಗಂಟೆಯಲ್ಲಿ 596 ಜನರು ಮೃತಪಟ್ಟಿದ್ದಾರೆ. ರಾಜ್ಯದ ದೈನಂದಿನ ಆಕ್ಸಿಜನ್ ಕೋಟಾವನ್ನು 1200 ಟನ್ ಗೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿತ್ತು.

ಗುಜರಾತ್‌ನಿಂದ ಸೋಮವಾರ ಹೊರಡುವ ಮತ್ತೊಂದು ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಮಂಗಳವಾರ ದೆಹಲಿ ತಲುಪಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಸೋಮವಾರವೇ ಟ್ವೀಟ್ ಮಾಡಿದ್ದಾರೆ.

ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಭಾರತೀಯ ರೈಲ್ವೆ ಇದುವರೆಗೂ 4,200 ಮೆಟ್ರಿಕ್ ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಅನ್ನು 268 ಟ್ಯಾಂಕರ್‌ಗಳ ಮೂಲಕ ದೇಶದ ವಿವಿಧ ರಾಜ್ಯಗಳಿಗೆ ಸಾಗಣೆ ಮಾಡಿದೆ.

ಭಾರತೀಯ ರೈಲ್ವೆ ನೀಡಿರುವ ಮಾಹಿತಿಯಂತೆ 68 ರೈಲುಗಳು ಇದುವರೆಗೂ ಪ್ರಯಾಣವನ್ನು ಪೂರ್ಣಗೊಳಿಸಿವೆ. ಮಹಾರಾಷ್ಟ್ರಕ್ಕೆ 293 ಮೆಟ್ರಿಕ್ ಟನ್, ಉತ್ತರ ಪ್ರದೇಶಕ್ಕೆ 1,230 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಮಾಡಲಾಗಿದೆ.

ಮಧ್ಯಪ್ರದೇಶಕ್ಕೆ 271 ಮೆಟ್ರಿಕ್ ಟನ್, ಹರಿಯಾಣಕ್ಕೆ 555 ಮೆಟ್ರಿಕ್ ಟನ್, ತೆಲಂಗಾಣಕ್ಕೆ 123 ಮೆಟ್ರಿಕ್ ಟನ್, ದೆಹಲಿಗೆ 1679 ಮತ್ತು ತೆಲಂಗಾಣಕ್ಕೆ 40 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಮಾಡಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಬಿ.ಎಸ್ ಯಡಿಯೂರಪ್ಪ, 120 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತ 6 ಕಂಟೇನರ್ ಗಳು ಬೆಂಗಳೂರಿಗೆ ಬಂದು ತಲುಪಿದೆ. ಕೊರೊನಾ ವಿರುದ್ಧ ಹೋರಾಡಲು ನಿರಂತರವಾಗಿ ಬೆಂಬಲ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಪಿಯೂಶ್ ಗೋಯಲ್, ಡಿ.ವಿ ಸದಾನಂದ ಗೌಡ, ಪ್ರಲ್ಹಾದ್ ಜೋಶಿ ಅವರಿಗೆ ಧನ್ಯವಾದ ಎಂದು ತಿಳಿಸಿದ್ದಾರೆ.

The first 'Oxygen Express' to Karnataka with six cryogenic containers -- a total of 120 tonnes -- left Jamshedpur on Monday.