ತುಳು ಭಾಷೆ 8ನೇ ಪರಿಚ್ಚೇದಕ್ಕೆ ಸೇರಬೇಕು ; ತುಳುವರ ಹಕ್ಕೊತ್ತಾಯಕ್ಕೆ ಸಿ.ಟಿ. ರವಿ ಬೆಂಬಲ

05-07-21 12:18 pm       Bangalore Correspondent   ಕರ್ನಾಟಕ

ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಸ್ಮಿತೆ ಹೊಂದಿರುವ ತುಳು ಭಾಷೆಯನ್ನು ಭಾರತದ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಒತ್ತಾಯಿಸಿದ್ದಾರೆ.

ಬೆಂಗಳೂರು, ಜುಲೈ 5: ತುಳು ಭಾಷೆ ಸ್ವಂತ ಲಿಪಿ ಇರುವ ಭಾಷೆ. ಸಮೃದ್ಧ ಸಂಸ್ಕೃತಿಯನ್ನು ಹೊಂದಿರುವ ಭಾಷೆ. ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಒತ್ತಾಯಿಸಿದ್ದಾರೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಅವರು, 'ಹದಿನೈದನೆಯ ಶತಮಾನದ ವರೆಗೆ ಸ್ವಂತ ಲಿಪಿಯನ್ನು ಹೊಂದಿದ್ದ ಭಾಷೆ ತುಳು. 19 ಲಕ್ಷಕ್ಕೂ ಅಧಿಕ ಮಂದಿಗೆ ತುಳು ಮಾತೃಭಾಷೆಯಾಗಿದೆ. ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಮತ್ತು ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳಲ್ಲಿ ವ್ಯವಹಾರದ ಭಾಷೆಯಾಗಿ ತುಳು ಬಳಸಲ್ಪಡುತ್ತದೆ' ಎಂದು ತಿಳಿಸಿದ್ದಾರೆ. 

'ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಸ್ಮಿತೆ ಹೊಂದಿರುವ ತುಳು ಭಾಷೆಯನ್ನು ಭಾರತದ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು. ಇದು ತುಳು ಭಾಷಿಕರ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಅಸ್ಮಿತೆಯನ್ನು ಬೆಳೆಸುವಲ್ಲಿ ಸಹಕಾರಿಯಾಗಲಿದೆ. ಹಾಗೆಯೇ, ತುಳು ಲಿಪಿಯ ಪುನರುತ್ಥಾನದಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ' ಎಂದು ಸಿ.ಟಿ.ರವಿ ಟ್ವೀಟ್‌ ಮಾಡಿದ್ದಾರೆ. 

ಈ ಮೂಲಕ ತುಳು ಭಾಷಿಗ ಹೊರತಾದ ಆಡಳಿತ ಪಕ್ಷದಲ್ಲಿರುವ ರಾಷ್ಟ್ರ ಮಟ್ಟದ ಮುಖಂಡರೊಬ್ಬರು, ತುಳು ಭಾಷೆ ಸಂವಿಧಾನದಡಿ ಸೇರ್ಪಡೆಯಾಗಬೇಕೆಂಬ  ನೆಲೆಯಲ್ಲಿ ತುಳುವರು ನಡೆಸುತ್ತಿರುವ ಹಕ್ಕೊತ್ತಾಯದ ಧ್ವನಿಗೆ ಬೆಂಬಲ ಸಾರಿದ್ದಾರೆ.

Various organizations initiated a Twitter campaign demanding official language status to include Include Tulu in the Eighth Schedule CT Ravi supports initiative on Twitter.