ಮುಸ್ಲಿಂ ವೋಟ್ ಬ್ಯಾಂಕ್ ಅಷ್ಟೇನಾ ? ನಮ್ಮ ಸಮುದಾಯದ ವಿಷ್ಯ ನೀವೇ ಮಾತಾಡಿದ್ರೆ ಮುಸ್ಲಿಮರು ಯಾಕೆ ಬೇಕ್ರೀ ? ಸಿದ್ದು ಬಗ್ಗೆ ಸಿಎಂ ಇಬ್ರಾಹಿಂ ರಾಂಗ್ !

15-07-21 01:14 pm       Headline Karnataka News Network   ಕರ್ನಾಟಕ

ಮುಸ್ಲಿಮರಲ್ಲಿ ಮುಂದೆ ಯಾರು ಎಂ.ಎಲ್.ಎ ಆಗಬೇಕು ಎನ್ನುವುದನ್ನ ಸಮಾಜದ ಜನ ನಾವು ತೀರ್ಮಾನ ಮಾಡುತ್ತೇವೆ. ಚೇರ್ಮನ್ ಯಾರಾಗಬೇಕು ಎಂದು ನಾವು ತೀರ್ಮಾನ ಮಾಡುತ್ತೇವೆ. ಬೇರೆಯವರು ತೀರ್ಮಾನ ಮಾಡುವುದಲ್ಲ ಎಂದು ಇಬ್ರಾಹಿಂ ಟಾಂಗ್ ನೀಡಿದ್ದಾರೆ. 

ಮೈಸೂರು, ಜುಲೈ 15: ಪಕ್ಷದ ಚಟುವಟಿಕೆಯಿಂದ ದೂರ ಸರಿದಿರುವ ವಿಚಾರದಲ್ಲಿ ಕಡೆಗೂ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಬಾಯಿ ತೆರೆದಿದ್ದಾರೆ.‌ ಮೈಸೂರಿನಲ್ಲಿ ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಂ ಸಮುದಾಯದ ವಿಷಯಗಳನ್ನ ನೀವೇ ತೀರ್ಮಾನ ಮಾಡಿದ್ರೆ ಮುಸ್ಲಿಮರು ಯಾಕೆ ಬೇಕ್ರೀ ಎನ್ನುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಬಗ್ಗೆ ತಿವಿದಿದ್ದಾರೆ. 

ಪಕ್ಷದಲ್ಲಿ ದಲಿತರ ಸಮಸ್ಯೆಯನ್ನ ದಲಿತರು, ಲಿಂಗಾಯ್ತರ ಸಮಸ್ಯೆಯನ್ನ ಲಿಂಗಾಯ್ತರೇ ಪರಿಹಾರ ಮಾಡ್ತಾರೆ. ಮುಸ್ಲಿಮರ ಸಮಸ್ಯೆಯನ್ನ ಮುಸ್ಲಿಮರೇ ಯಾಕೆ ಪರಿಹಾರ ಮಾಡಬಾರದು..? ಈ ಮೂಲಭೂತ ಪ್ರಶ್ನೆಯೇ ನನ್ನದು. ಮುಸ್ಲಿಮರಲ್ಲಿ ಮುಂದೆ ಯಾರು ಎಂ.ಎಲ್.ಎ ಆಗಬೇಕು ಎನ್ನುವುದನ್ನ ಸಮಾಜದ ಜನ ನಾವು ತೀರ್ಮಾನ ಮಾಡುತ್ತೇವೆ. ಚೇರ್ಮನ್ ಯಾರಾಗಬೇಕು ಎಂದು ನಾವು ತೀರ್ಮಾನ ಮಾಡುತ್ತೇವೆ. ಬೇರೆಯವರು ತೀರ್ಮಾನ ಮಾಡುವುದಲ್ಲ ಎಂದು ಇಬ್ರಾಹಿಂ ಟಾಂಗ್ ನೀಡಿದ್ದಾರೆ. 

ಹಿಂದುಳಿದ ವರ್ಗದವರಲ್ಲಿ ಯಾರು ಲೀಡರ್ ಆಗ್ಬೇಕು‌‌ ಎಂದು ನಾವು ತೀರ್ಮಾನ ಮಾಡಿದ್ವಾ..? ದಲಿತರ ಆಯ್ಕೆ ಮಾಡುವುದರ ಬಗ್ಗೆ ದಲಿತ ನಾಯಕರು ತೀರ್ಮಾನ ಮಾಡುತ್ತಾರೆ. ಮುಸ್ಲಿಮರ ನಾಯಕ ಯಾರಾಗಬೇಕು ಎನ್ನೋದನ್ನ ನೀವುಗಳೇ ತೀರ್ಮಾನ ಮಾಡಿದರೆ ನಾವೆಲ್ಲ ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ ಸಿ.ಎಂ. ಇಬ್ರಾಹಿಂ, ಅಧಿಕಾರ ಸಿಗದಿರುವ ವರೆಗೂ ನಾನು ಎಲ್ಲಿಗೂ ಬರೋದಿಲ್ಲ ಎಂದು ನಾನು ಯಾವುದೇ ಚುನಾವಣೆಗೂ ಹೋಗಲಿಲ್ಲ. ಯಾವ ಉಪಚುನಾವಣೆಗೂ ಬರೋದಿಲ್ಲ ಎಂದಿದ್ದೇನೆ. ಮುಂದೆನೂ ಯಾವುದೇ ಚುನಾವಣೆಗೂ ಹೋಗೋದಿಲ್ಲ. ಬೆಳಗಾವಿ, ಬಸವ ಕಲ್ಯಾಣ ಚುನಾವಣೆಯಲ್ಲೂ ಕಾಂಗ್ರೆಸ್ ಸೋತಿದೆ. ಮುಸ್ಲಿಮ್ ಮತದಾರರ 70% ವೋಟ್ ಸಿಗಲಿಲ್ಲ. ನಾಯಕರಿಗೆ ಹುಮ್ಮಸ್ಸು ಸಿಗದಿದ್ದರಿಂದ ಚುನಾವಣೆಯಲ್ಲಿ ಪಾಲ್ಗೊಳ್ಳಲಿಲ್ಲ. ಅಲ್ಪ ಸಂಖ್ಯಾತರ ವೋಟು ಮಾತ್ರ ಬೇಕು ಎನ್ನೋದು ತಪ್ಪು ಎಂದರು. 

ನನ್ನ ಕೋಪ ಏನಿದ್ದರೂ ವಿಷಯಾಧರಿತ. ವ್ಯಕ್ತಿಯಾಧಾರಿತ ಕೋಪ ಅಲ್ಲ. 

ಸಿದ್ದರಾಮಯ್ಯ ಎಲ್ಲನು ಸರಿ ಮಾಡ್ತೇನೆ ಎಂದಿದ್ದಾರೆ, ಆದರೆ ನಾನು ದೆಹಲಿಗೆ ಹೋಗಬೇಕು ಎಂದಿದ್ದೇನೆ. ಮೇಡಂ ಅವರು ತೀರ್ಮಾನ ಮಾಡಬೇಕು, ಅದಕ್ಕೆ ದೆಹಲಿಗೆ ಹೋಗುತ್ತೇವೆ ಎಂದು ಸಿಎಂ ಇಬ್ರಾಹಿಂ ಹೇಳಿದರು. 

ಇನ್ನು ತನ್ವೀರ್ ಸೇಠ್ ಸಿಎಂ ಆಗೋ ವಿಚಾರದಲ್ಲಿ ಪ್ರತಿಕ್ರಿಯಿಸಿದ ಇಬ್ರಾಹಿಂ, ಯಾಕೆ ಆಗಬಾರದು. ಲಿಂಗಾಯತರು, ಒಕ್ಕಲಿಗರು ಮಾತ್ರ ಸಿಎಂ ಆಗೋದಾ ? ನಾವು ಆಗಬಾರದೇ ? 800 ವರ್ಷ ದೇಶ ಆಳಿದವರು ನಾವು ಎನ್ನುವ ಮೂಲಕ ಹಳೆಯ ಮೊಘಲರ ಕಾಲದ ಪಳೆಯುಳಿಕೆ ತಾವೇ ಎನ್ನುವುದನ್ನು ನೆನಪಿಸಿದರು.

CM Ibrahim talks about the Vote bank of Muslims in Mysore.