ಸಚಿವ ನಿರಾಣಿಯಿಂದ ರೈತರ ಹೆಸರಲ್ಲಿ ಸಾವಿರಾರು ಕೋಟಿ ವಂಚನೆ ; ಸಿಎಂ ಸ್ಥಾನಕ್ಕೆ ಇಂಥ ಸಿಡಿ ಬಾಬಾನೇ ಸಿಕ್ಕಿದ್ನಾ ?

20-07-21 03:46 pm       Headline Karnataka News Network   ಕರ್ನಾಟಕ

ಸಿಎಂ ಯಡಿಯೂರಪ್ಪ ಸ್ಥಾನಕ್ಕೆ ಸಚಿವ ಮುರುಗೇಶ್ ನಿರಾಣಿಯ ಹೆಸರು ಕೇಳಿ ಬರ್ತಿರುವಾಗಲೇ ನಿರಾಣಿ ವಿರುದ್ಧ ಭಾರೀ ವಂಚನೆ ಆರೋಪ ಕೇಳಿಬಂದಿದೆ. ಎನ್ ಜಿಓ ಸಂಸ್ಥೆಯೊಂದರ ಆಲಂ ಪಾಷಾ ಎನ್ನುವವರು ನಿರಾಣಿ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದಾರೆ.

ಬೆಂಗಳೂರು, ಜುಲೈ 20: ಸಿಎಂ ಯಡಿಯೂರಪ್ಪ ಸ್ಥಾನಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿಯ ಹೆಸರು ಕೇಳಿ ಬರ್ತಿರುವಾಗಲೇ ನಿರಾಣಿ ವಿರುದ್ಧ ಭಾರೀ ವಂಚನೆ ಆರೋಪ ಕೇಳಿಬಂದಿದೆ. ಎನ್ ಜಿಓ ಸಂಸ್ಥೆಯೊಂದರ ಆಲಂ ಪಾಷಾ ಎನ್ನುವವರು ನಿರಾಣಿ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದಾರೆ.

ನಿರಾಣಿಯವರು ಮುಧೋಳ, ಬೆಳಗಾವಿ, ಬಾಗಲಕೋಟ ಭಾಗದ ಸಾವಿರಾರು ಸಣ್ಣ ರೈತರ ಹೆಸರಲ್ಲಿ ಬೆಳೆ ಸಾಲ ಪಡೆದು ವಂಚನೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಬೆಳೆಸಾಲವನ್ನು ಬೋಗಸ್ ಹೆಸರಲ್ಲಿ ಪಡೆದು ಅದರ ಹಣವನ್ನು ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಲಿ.ನಲ್ಲಿ ಜಮಾವಣೆ ಮಾಡಿದ್ದಾರೆ. ಶೇ.4ರ ಬಡ್ಡಿದರ ಕೃಷಿ ಸಾಲವನ್ನು ರೈತರ ನಕಲಿ ಆಧಾರ್ ಕಾರ್ಡ್, ನಕಲಿ ಬ್ಯಾಂಕ್ ಖಾತೆ ಮೂಲಕ ಸಾವಿರಾರು ಕೋಟಿ ರೂಪಾಯಿ ಪಡೆದು ಅವ್ಯವಹಾರ ಮಾಡಿದ್ದಾರೆ. ವಿಜಯ ಸೌಹಾರ್ದ ಕ್ರೆಡಿಟ್ ಸೊಸೈಟಿ ಹೆಸರಲ್ಲಿ ಎಂಟು ಸಾವಿರ ಕೋಟಿ ಅವ್ಯವಹಾರ ನಡೆದಿದ್ದು ಈ ಬಗ್ಗೆ ಲೋಕಾಯುಕ್ತದಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಇದಲ್ಲದೆ, ಮುರುಗೇಶ್ ನಿರಾಣಿ ಒಬ್ಬ ಸಿಡಿ ಬಾಬಾ. ನಿರಾಣಿ ಬಳಿ 500 ಸಿಡಿಗಳಿವೆ. ಹಾಗಾಗಿ ಅವರಿಗೆ ಹೆದರಿ ಸಚಿವ ಸ್ಥಾನ ಕೊಡಲಾಗಿತ್ತು. ಅದಕ್ಕಾಗಿಯೇ ಕೆಲವರು ಕೋರ್ಟಿಗೆ ಹೋಗಿ ಸ್ಟೇ ತಂದಿದ್ದಾರೆ. ಕೋರ್ಟಿಗೆ ಹೋದವರ ಎಲ್ಲಾ ಸಿಡಿಗಳು ಇದೆ. ಆರು ಮಂತ್ರಿಗಳು ಸ್ಟೇ ತಗೊಂಡಿದ್ದಾರೆ. ಸಾರ್ವಜನಿಕ ವಲಯದಲ್ಲಿ ಇರುವವರು ಸ್ಟೇ ತಗೊಳ್ಳಬೇಕು ಯಾಕೆ ? ಆನೇ ಆರೋಪ ಬಂದರೂ ಅದನ್ನು ಎದುರಿಸೋದು ಬಿಟ್ಟು ಅದನ್ನು ಮಾಧ್ಯಮಗಳು ಪ್ರಕಟಿಸಲೇಬಾರದು ಎಂದು ಸ್ಟೇ ತಗೊಳ್ಳೋದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ ಆಲಂ ಪಾಷಾ.

ನಿರಾಣಿ ವಿರುದ್ಧ ಹಲವಾರು ಕ್ರಿಮಿನಲ್ ಕೇಸುಗಳಿವೆ. ಸಿಡಿ ಮುಂದಿಟ್ಟು ಸಿಎಂ ಸ್ಥಾನಕ್ಕೆ ಬರುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಬಿಡುವ ಜಾಗದಲ್ಲಿ ಅವರ ಅಪ್ಪನಂಥವರನ್ನು ಯಾಕೆ ತರಬೇಕು ಎಂದು ಪ್ರಶ್ನಿಸಿದ ಪಾಷಾ, ಬಿಜೆಪಿಯಲ್ಲಾಗಲೀ ಕಾಂಗ್ರೆಸಿನಲ್ಲಾಗಲೀ ಇಂಥವರನ್ನು ಯಾಕೆ ಆಯ್ಕೆ ಮಾಡಬೇಕು. ಹಣಕಾಸು ಇದ್ದವರಿಗೆ ಮಾತ್ರ ಸಿಎಂ ಸ್ಥಾನವಾ ? ನಾನು ಹೇಳ್ತಿರೋದು ತಪ್ಪು ಆಗಿದ್ದಲ್ಲಿ ಸಚಿವರಾಗಿರುವ ನಿರಾಣಿ ನನ್ನನ್ನು ಅರೆಸ್ಟ್ ಮಾಡಲಿ ಎಂದು ಸವಾಲೆಸೆದರು. ಬೆಂಗಳೂರಿನಲ್ಲಿ ದಿ ಹೆಲ್ಪಿಂಗ್ ಸಿಟಿಜನ್ ಅಂಡ್ ಪೀಪಲ್ಸ್ ಕೋರ್ಟ್ ಎನ್ನುವ ಎನ್ ಜಿಓ ಸಂಸ್ಥೆಯನ್ನು ಆಲಂ ಪಾಷಾ ನಡೆಸುತ್ತಿದ್ದಾರೆ.  

Video: