ದರಕ್ಕಿಂತ ಹೆಚ್ಚು ಹಣ ವಸೂಲಿ ; ಓಲಾ, ಊಬರ್​ ಟ್ಯಾಕ್ಸಿ ಕಂಪೆನಿ ಮೇಲೆ RTO ದಾಳಿ !

21-07-21 11:42 am       Headline Karnataka   ಕರ್ನಾಟಕ

ಲೈಸೆನ್ಸ್​ ಪಡೆಯುವ ವಿಚಾರದಲ್ಲಿ ಲೋಪಗಳಾಗಿರುವುದು ಮತ್ತು ಪ್ರಯಾಣಿಕರಿಗೆ ಸೇವೆ ಒದಗಿಸುವ ವಿಚಾರದಲ್ಲಿ ತಪ್ಪುಗಳಾಗಿರುವ ಹಿನ್ನೆಲೆ ಓಲಾ ಮತ್ತು ಊಬರ್​ ಕಚೇರಿಗಳ ಮೇಲೆ ಆರ್​ಟಿಒ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬೆಂಗಳೂರು, ಜುಲೈ 21: ನಗರದ ವಿವಿಧೆಡೆಯಿರುವ ಓಲಾ ಮತ್ತು ಊಬರ್​ ಕಚೇರಿಗಳ ಮೇಲೆ ಆರ್​ಟಿಒ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಲೈಸೆನ್ಸ್​ ಪಡೆಯುವ ವಿಚಾರದಲ್ಲಿ ಲೋಪಗಳಾಗಿರುವುದು ಮತ್ತು ಪ್ರಯಾಣಿಕರಿಗೆ ಸೇವೆ ಒದಗಿಸುವ ವಿಚಾರದಲ್ಲಿ ತಪ್ಪುಗಳಾಗಿರುವ ಬಗ್ಗೆ ದಾಳಿ ನಡೆಸಿದ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಸಂಸ್ಥೆಗಳಿಗೆ ಪೂರಕ ದಾಖಲೆಗಳನ್ನು ಒದಗಿಸಲು ಕಾಲಾವಕಾಶ ನೀಡಲಾಗಿದೆ.

ಕೋರಮಂಗಲದಲ್ಲಿರುವ ಓಲಾ ಕಚೇರಿ ಮೇಲೆ RTO ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆಯುತ್ತಿದ್ದಾರೆ, ನಿಗದಿತ ಸ್ಥಳಕ್ಕೆ ಸೂಕ್ತ ಸಮಯಕ್ಕೆ ಬರುವುದಿಲ್ಲ, ಡ್ರೈವಿಂಗ್ ಲೈಸೆನ್ಸ್ ಇಲ್ಲದವರು ವಾಹನ ಚಾಲನೆ ಮಾಡುತ್ತಿದ್ದಾರೆ, ಮೋಟಾರು ವಾಹನ ಕಾಯ್ದೆ ಉಲ್ಲಂಘನೆಯಾಗಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಯಿತು ಎಂದು ಸಾರಿಗೆ ಇಲಾಖೆ ಜಂಟಿ ಆಯುಕ್ತ ಹಾಲಸ್ವಾಮಿ ಹೇಳಿದರು.

ದಾಳಿ ವೇಳೆ ಸಂಸ್ಥೆಯ ಸಿಬ್ಬಂದಿಗೆ ತಕ್ಷಣಕ್ಕೆ ಸೂಕ್ತ ದಾಖಲೆ ಒದಗಿಸಲು ಸಾಧ್ಯವಾಗಿಲ್ಲ. ದಾಖಲೆಗಳನ್ನು ಒದಗಿಸಲು ಕಾಲಾವಕಾಶ ಕೇಳಿದ್ದಾರೆ. ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಕೆಲ ಮಾಲೀಕರು ಚಾಲಕರಿಗೂ ಸರಿಯಾಗಿ ಹಣ ಕೊಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು ಎಂದು ತಿಳಿಸಿದರು.

ಇಂದ್ರ ನಗರದ ಊಬರ್ ಕಚೇರಿಯ ಮೇಲೆಯೂ ಆರ್​ಟಿಒ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿಯ ಕುರಿತು ಮಾಹಿತಿ ನೀಡಿದ ಹಿರಿಯ ಮೋಟಾರು ವಾಹನ ತನಿಖಾಧಿಕಾರಿ ನಾಸೀರ್ ಅಹಮ್ಮದ್, ಪ್ರಯಾಣಿಕರ ದೂರಿನ ಮೇರೆಗೆ ದಾಳಿ ನಡೆಸಿದ್ದೇವೆ. 100 ವಾಹನಗಳ ಸಂಚಾರಕ್ಕೆ ಅನುಮತಿ ಪಡೆದು, 10 ಸಾವಿರಕ್ಕೂ ಹೆಚ್ಚು ವಾಹನಗಳು ಓಡಾಡುತ್ತಿದ್ದವು. ಲಾಕ್​ಡೌನ್​ಗೂ ಮೊದಲು 5 ಸಾವಿರ ವಾಹನಗಳು ಓಡುತ್ತಿದ್ದವು ಎಂಬ ದೂರುಗಳು ಬಂದಿದ್ದವು. ದಾಖಲೆ ಸಲ್ಲಿಸಲು ಓಲಾ ಸಂಸ್ಥೆಯ ಸಿಬ್ಬಂದಿ ಕಾಲಾವಕಾಶ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

ಸಾರಿಗೆ ಇಲಾಖೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಚಾಲಕರ ವಿವರ, ವಾಹನಗಳ ವಿವರ, ವಿಮೆ, ಅರ್ಹತಾ ಪ್ರಮಾಣ ಪ್ರಮಾಣಪತ್ರ, ವಾಯುಮಾಲಿನ್ಯ ನಿಯಂತ್ರಣ ಪ್ರಮಾಣಪತ್ರಗಳನ್ನು ಆರ್​ಟಿಒಗೆ ಸಲ್ಲಿಸಬೇಕು ಈ ನಿಯಮಗಳ ಪಾಲನೆಯಾಗಿಲ್ಲ ಎಂಬ ದೂರುಗಳಿವೆ ಎಂದು ಅವರು ಹೇಳಿದರು.

The transport department conducted raids at offices of app-based aggregators of Ola and Uber in the city.