ದೇಶದಲ್ಲಿ ದೊಡ್ಡ ಮಟ್ಟದ ರಾಜಕೀಯ ಅವಘಡ ಸಂಭವ ; ಕೋಡಿಮಠದ ಸ್ವಾಮೀಜಿ ಭವಿಷ್ಯ

21-07-21 05:52 pm       Headline Karnataka News Network   ಕರ್ನಾಟಕ

ರಾಜ್ಯ ಮತ್ತು ದೇಶದ ರಾಜಕೀಯದ ಕುರಿತಾಗಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದು ಮುಂದಿನ ಸಂಕ್ರಾಂತಿಯೊಳಗೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ರಾಜಕೀಯ ಅವಘಡ ಸಂಭವಿಸಲಿದೆ.

ಕಾರವಾರ, ಜುಲೈ 21 : ರಾಜ್ಯ ಮತ್ತು ದೇಶದ ರಾಜಕೀಯದ ಕುರಿತಾಗಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದು ಮುಂದಿನ ಸಂಕ್ರಾಂತಿಯೊಳಗೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ರಾಜಕೀಯ ಅವಘಡ ಸಂಭವಿಸಲಿದೆ. ಅದು ಜಾಗತಿಕವಾಗಿ ತಲ್ಲಣ ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕೋಡಿಮಠದಲ್ಲಿ ಸ್ವಾಮೀಜಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಸದ್ಯ ಎದ್ದಿರುವ ರಾಜಕೀಯ ವಿಪ್ಲವ ಸುಖಾಂತ್ಯ ಕಾಣಲಿದೆ. ಬೇಟೆಗಾರನಿಂದ ತಪ್ಪಿಸಿಕೊಂಡ ಜಿಂಕೆ ಸನ್ಯಾಸಿಯೊಬ್ಬನ ಎದುರು ಹಾದು ಓಡಿಹೋಗಿತ್ತು. ಜಿಂಕೆಯ ಬಗ್ಗೆ ಸನ್ಯಾಸಿಯಲ್ಲಿ ಬೇಟೆಗಾರ ಕೇಳಿದಾಗ ಸನ್ಯಾಸಿ ದ್ವಂದ್ವದಲ್ಲಿ ಸಿಲುಕಿದ್ದರು. ಜಿಂಕೆ ಓಡಿಹೋದ ದಿಕ್ಕು ಹೇಳಿದರೆ ಅದರ ಸಾವಿಗೆ ಕಾರಣವಾದಂತೆ ಆಗುತ್ತದೆ. ಹೇಳದಿದ್ದರೆ ಸುಳ್ಳು ನುಡಿದಂತಾಗುತ್ತದೆ ಎಂಬ ಸಂಕಟ ಸನ್ಯಾಸಿಗಿತ್ತು. ಇದೇ ಸ್ಥಿತಿ ರಾಜಕೀಯದಲ್ಲಿ ಈಗ ಎದುರಾಗಿದ್ದು ಈ ಬಗ್ಗೆ ಹೇಳುವುದಕ್ಕೂ ತೊಡಕಾಗುತ್ತದೆ. ಸದ್ಯದಲ್ಲೇ ಈ ಸ್ಥಿತಿ ಸುಖಾಂತ್ಯ ಕಾಣಲಿದೆ ಎಂದಷ್ಟೇ ಹೇಳಿದರು. 

ಈ ಸಂವಸ್ಸರದಲ್ಲಿ ಪ್ರೇತ ಕಾಣೆಯಾಗುತ್ತಾನೆ. ಪಂಚ ಭೂತಗಳಿಂದ ತೊಂದರೆ ಆಗಲಿದೆ.‌ ಆಗಸ್ಟ್ ಮೂರನೇ ವಾರದಿಂದ ರೋಗ ರುಜಿನಗಳು ಹೆಚ್ಚಲಿವೆ. ಜನವರಿ ವರೆಗೂ ರೋಗ ಭಾದೆ ಇರಲಿದೆ.‌ ಆದರೆ ಜನ ಭೀತಿಯಿಂದ ಸಾಯುತ್ತಿದ್ದಾರೆ ಹೊರತು ಕಾಯಿಲೆ ಸಾಯಿಸುವುದಿಲ್ಲ ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ.