ಯಡಿಯೂರಪ್ಪ ನಡೆಯೇ ನಿಗೂಢ ; ಸ್ವಾಮೀಜಿಗಳ ಸಮಾವೇಶ ಮಧ್ಯೆ ನೆರೆ ಪೀಡಿತ ಪ್ರದೇಶಕ್ಕೆ ಪ್ರವಾಸ, ಎಚ್ಚರಿಕೆಯ ಆಟದಲ್ಲಿ ಹೈಕಮಾಂಡ್ !

25-07-21 03:20 pm       Headline Karnataka News Network   ಕರ್ನಾಟಕ

ಒಂದೆಡೆ ಹೈಕಮಾಂಡ್ ಹೇಳಿದ ಕೂಡಲೇ ರಾಜಿನಾಮೆ ನೀಡುತ್ತೇನೆ, ರಾಷ್ಟ್ರೀಯ ನಾಯಕರ ಆದೇಶ ಶಿರಸಾ ಪಾಲಿಸುತ್ತೇನೆ ಎನ್ನುತ್ತಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ನಡೆ ನಿಗೂಢವಾಗಿದೆ.

ಬೆಂಗಳೂರು, ಜುಲೈ 25: ಒಂದೆಡೆ ಹೈಕಮಾಂಡ್ ಹೇಳಿದ ಕೂಡಲೇ ರಾಜಿನಾಮೆ ನೀಡುತ್ತೇನೆ, ರಾಷ್ಟ್ರೀಯ ನಾಯಕರ ಆದೇಶ ಶಿರಸಾ ಪಾಲಿಸುತ್ತೇನೆ ಎನ್ನುತ್ತಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ನಡೆ ನಿಗೂಢವಾಗಿದೆ. ಸ್ಥಾನ ಬದಲಾವಣೆಯ ತೂಗುಗತ್ತಿ ನೇತಾಡುತ್ತಿದ್ದರೂ ಮುಖ್ಯಮಂತ್ರಿ ಅದರ ಗೊಡವೆ ಇಲ್ಲದೇ ಬೆಳಗಾವಿಯಲ್ಲಿ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಆಮೂಲಕ ತಾವು ರಾಜ್ಯದ ಜನರ ಸೇವೆಯಲ್ಲಿದ್ದೇನೆ ಎನ್ನುವುದನ್ನು ಪರೋಕ್ಷವಾಗಿ ತೋರಿಸುತ್ತಿದ್ದಾರೆ.

ಇನ್ನೊಂದೆಡೆ ವರಿಷ್ಠರು ಸೂಚಿಸಿದ್ದಾರೆ, ಪದಚ್ಯುತಿ ಖಚಿತ ಎನ್ನುತ್ತಲೇ ವಿರೋಧಿ ಬಣದ ಬಿಜೆಪಿ ನಾಯಕರು ತಿರುಗಾಡುತ್ತಿದ್ದಾರೆ. ಹಾಗಿದ್ದರೂ, ಜುಲೈ 25ರ ಗಡುವು ನೀಡಿರುವುದು ಯಾಕೆಂದು ಅರ್ಥವಾಗುತ್ತಿಲ್ಲ. ಹೈಕಮಾಂಡ್ ನೀಡಿರುವ ಗಡುವನ್ನೇ ಗುರಾಣಿ ಮಾಡಿಕೊಂಡಿರುವ ಯಡಿಯೂರಪ್ಪ ತನ್ನ ದಾಳವನ್ನು ಉರುಳಿಸಿದ್ದಾರೆಯೇ ಎನ್ನುವ ಅನುಮಾನ ಮೂಡಿದೆ.

ಯಾಕಂದ್ರೆ, ರಾಜಧಾನಿ ಬೆಂಗಳೂರಿನಲ್ಲೇ ರಾಜ್ಯದಲ್ಲಿ ಪ್ರಬಲವಾಗಿರುವ ವೀರಶೈವ, ಲಿಂಗಾಯತ ಮಠಗಳ ಸ್ವಾಮೀಜಿಗಳು ಸಮಾವೇಶ ನಡೆಸಿದ್ದಾರೆ. ಈಮೂಲಕ ಯಡಿಯೂರಪ್ಪ ಜೊತೆಗೆ ನಾವಿದ್ದೇವೆ ಎನ್ನುವುದನ್ನು ಅವರ ವಿರೋಧಿಗಳಿಗೆ ತೋರಿಸಿದ್ದಾರೆ. ಇದೇ ಸಂದೇಶವನ್ನು ಬಿಜೆಪಿ ಹೈಕಮಾಂಡಿಗೂ ರವಾನೆಯಾಗುವಂತೆ ಮಾಡಲಾಗಿದೆ. ಅತ್ತ ಜುಲೈ 25ರ ಗಡುವು ನೀಡಿದ್ದ ದಿನವೇ ಇತ್ತ ಸಮಾವೇಶ ನಡೆದಿರುವುದು ಇದು ರಾಜಕೀಯ ದಾಳ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ.

ಇದೇ ಕಾರಣಕ್ಕೆ, ಬಿಜೆಪಿ ಹೈಕಮಾಂಡ್ ಕೂಡ ಅಳೆದು ತೂಗಿ ಹೆಜ್ಜೆ ಮುಂದಿಡುತ್ತಿದೆ. ಕಳೆದ ಒಂದು ವರ್ಷದಿಂದಲೂ ಸಿಎಂ ಬದಲಾವಣೆಯ ಮಾತು ಕೇಳಿಬರುತ್ತಿದ್ದರೂ, ಮೋದಿ – ಅಮಿತ್ ಷಾ ತಮ್ಮ ನಿರ್ಧಾರವನ್ನು ನಿಧಾನಿಸುತ್ತಲೇ ಬಂದಿದ್ದಾರೆ. ಯಾಕಂದ್ರೆ, ಸದ್ಯಕ್ಕೆ ಇಡೀ ದೇಶದಲ್ಲಿ ಬಿಜೆಪಿಯಲ್ಲಿ ಅತಿ ಹಿರಿಯ ಮತ್ತು ಸಕ್ರಿಯ ರಾಜಕಾರಣಿ ಇರುವುದು ಯಡಿಯೂರಪ್ಪ ಮಾತ್ರ. ಅಲ್ಲದೆ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರದತ್ತ ಒಯ್ದಿದ್ದೂ ಯಡಿಯೂರಪ್ಪ. ಅದು ಅವರ ತಾಕತ್ತು ಅನ್ನುವುದು ಬಿಜೆಪಿ ರಾಷ್ಟ್ರೀಯ ನಾಯಕರಿಗೂ ಗೊತ್ತು. ಆದರೆ, ಆರೆಸ್ಸೆಸ್ ಮತ್ತು ಪಕ್ಷದ ರಾಷ್ಟ್ರೀಯ ನಾಯಕರು ತಮ್ಮ ನಡೆ ಇಡೀ ದೇಶದಲ್ಲಿ ನಡೆಯುತ್ತೆ. ಕರ್ನಾಟಕದಲ್ಲಿ ನಡೆಯಲ್ವಾ ಎನ್ನುವಷ್ಟರ ಮಟ್ಟಿಗೆ ಯಡಿಯೂರಪ್ಪ ಅವರನ್ನು ಅಧೀರನಾಗಿಸಲು ಹೊರಟಂತಿದೆ. ಇದಕ್ಕೆ ಕಾರಣ ಆಗಿರೋದು ಯಡಿಯೂರಪ್ಪ ಮತ್ತು ಅವರ ಪುತ್ರನ ಬಗ್ಗೆ ಕೇಳಿಬರ್ತಿರುವ ಆರೋಪಗಳು. ತಂದೆ, ಮಕ್ಕಳ ಬಗ್ಗೆ ಬಿಜೆಪಿ ಶಾಸಕರೇ ಆರೋಪ ಮಾಡಿದ್ದು ಈಗ ಯಡಿಯೂರಪ್ಪ ಅವರಿಗೆ ಮುಳುವಾಗಿ ಪರಿಣಮಿಸಿದೆ.

ಇದೇ ವೇಳೆ, ಯಡಿಯೂರಪ್ಪ ಅವರನ್ನು ಮುಟ್ಟಿದರೆ ಕಷ್ಟ. ನೇರವಾಗಿ ಇಳಿಸಿದರೆ ಅದರಿಂದ ಆಪತ್ತು ಎದುರಾಗುತ್ತೆ ಅನ್ನುವುದನ್ನು ರಾಷ್ಟ್ರೀಯ ನಾಯಕರು ತಿಳಿಯದವರೇನಲ್ಲ. ದಕ್ಷಿಣ ಭಾರತದ 150 ಲೋಕಸಭಾ ಕ್ಷೇತ್ರಗಳಲ್ಲಿ ಕಳೆದ ಬಾರಿ ಬಿಜೆಪಿಗೆ ಸಿಕ್ಕಿದ್ದು 35 ಸ್ಥಾನ. ಅದರಲ್ಲಿ ಕರ್ನಾಟಕದ್ದೇ ಸಿಂಹಪಾಲು. ರಾಜ್ಯದಲ್ಲಿ 28 ಸಂಸದ ಸ್ಥಾನಗಳು ಬಿಜೆಪಿ ಪಾಲಾಗಿದ್ದವು. ಇದಕ್ಕೆ ವೀರಶೈವ, ಲಿಂಗಾಯತ ಸಮುದಾಯದ ಮತಬ್ಯಾಂಕ್ ಕೊಡುಗೆ ದೊಡ್ಡದು. ಮುಂದಿನ ಬಾರಿಯೂ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೇರಬೇಕಿದ್ದಲ್ಲಿ ದೇಶದಲ್ಲಿ ಕರ್ನಾಟಕ ಮತ್ತು ಉತ್ತರ ಪ್ರದೇಶದ ಕೊಡುಗೆಯೇ ಮುಖ್ಯವಾಗುತ್ತೆ. ಖಚಿತ ಆಗಿರುವ ಸ್ಥಾನಗಳು ಮತ್ತು ಮತಬ್ಯಾಂಕ್ ಆಗಿರುವ ದೊಡ್ಡ ಪರಿವಾರವನ್ನು ಎದುರು ಹಾಕ್ಕೊಂಡು ಕೈಸುಟ್ಟುಕೊಳ್ಳುವ ಬಗ್ಗೆಯೂ ಮಹಾನಾಯಕರು ಚಿಂತೆಯಲ್ಲಿದ್ದಾರೆ.

ಹಾಗೊಂದು ವೇಳೆ ಯಡಿಯೂರಪ್ಪ ಅವರನ್ನು ಬದಲಿಸಿದರೆ ಯಾವ ರೀತಿಯ ಪರಿಣಾಮ ಎದುರಾಗಲಿದೆ, ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗಿಂತ ಯಡಿಯೂರಪ್ಪ ಪ್ರಭಾವ ಎಷ್ಟರ ಮಟ್ಟಿಗಿದೆ ಎಂಬ ಬಗ್ಗೆ ಖಾಸಗಿ ಕಂಪನಿಗಳ ಮೂಲಕ ಸಮೀಕ್ಷೆಯನ್ನೂ ನಂಬರ್ ವನ್ ಮತ್ತು ಟು ನಾಯಕರು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಅಂದಾಜು ಆರೆಸ್ಸೆಸ್ ಪ್ರಾಬಲ್ಯದಲ್ಲಿ ಗೆಲ್ಲುವ ಕ್ಷೇತ್ರಗಳು 35 ಆಸುಪಾಸು. ಇನ್ನುಳಿದ 40 ಸೀಟುಗಳನ್ನು ಮೋದಿ ಮತ್ತು ಚುನಾವಣೆ ಸಂದರ್ಭದ ಕೊಡು -ಕೊಳ್ಳುವಿಕೆ ಮೂಲಕ ಪಡೆಯಬಹುದು. ಆದರೆ, ಯಡಿಯೂರಪ್ಪ ಪ್ರಭಾವದಿಂದಲೇ ಉತ್ತರ ಮತ್ತು ಮಧ್ಯ ಕರ್ನಾಟಕದಲ್ಲಿ 30 ಸ್ಥಾನಗಳನ್ನು ಗೆಲ್ಲಬಲ್ಲ ತಾಕತ್ತು ಪಕ್ಷಕ್ಕಿದೆ. ಇವೆಲ್ಲ ಕಾರಣಗಳು ಮತ್ತು ಮುಂದಿನ ಲೋಕಸಭೆ ಗೆಲುವಿಗೆ ಅಡ್ಡಿಯಾಗಬಾರದೆಂಬ ಎಚ್ಚರಿಕೆಯ ನಡುವೆ ಬಿಜೆಪಿ ಹೈಕಮಾಂಡ್ ಎಚ್ಚರದ ಹೆಜ್ಜೆಯನ್ನು ಇಟ್ಟಿರುವಂತೆ ತೋರುತ್ತಿದೆ.

ಹಾಗಾಗಿ, ಯಡಿಯೂರಪ್ಪ ಅವರನ್ನು ಇಳಿಸಿದರೂ, ಅವರನ್ನು ದೂರ ಇಡದೆ ಜೊತೆಗೆ ಒಯ್ಯುವ ಪ್ಲಾನ್ ಹೈಕಮಾಂಡಿನದ್ದಿರುವ ಸಾಧ್ಯತೆ ಹೆಚ್ಚು. ಯಾಕಂದ್ರೆ, ಯಡಿಯೂರಪ್ಪ ಹೊರತುಪಡಿಸಿ ಇನ್ಯಾರನ್ನೇ ಲಿಂಗಾಯತ ಸಮುದಾಯದ್ದೇ ಅಭ್ಯರ್ಥಿಗಳನ್ನು ಸಿಎಂ ಮಾಡಿದ್ರೂ ಪಕ್ಷಕ್ಕಾದ ನಷ್ಟವನ್ನು ತುಂಬುವುದು ಕಷ್ಟ. ಅದಕ್ಕಾಗಿ ಯಡಿಯೂರಪ್ಪ ಮತ್ತು ಕುಟುಂಬವನ್ನು ಸಂಪೂರ್ಣ ಎದುರು ಹಾಕ್ಕೊಳ್ಳುವುಷ್ಟು ಮೂರ್ಖತನವನ್ನು ಬಿಜೆಪಿ ನಾಯಕರು ತೋರಲ್ಲ. 

Though an official confirmation is awaited, Karnataka Chief Minister BS Yediyurappa on Sunday hinted at his possible exit by saying that he is expecting suggestions from the BJP high command about his political future by evening. “I’m expecting suggestions from high command by evening, you’ll (media) also come to know what it will be”, he told reporters in Belagavi today. He was in the flood and rain ravaged district to review the relief and rescue operation there.Also Read - This National Parents Day, Here’s a List of Lesser-Known Cultural Destinations to Explore With Your Family