ಬ್ರೇಕಿಂಗ್ ನ್ಯೂಸ್
26-07-21 04:47 pm Headline Karnataka News Network ಕರ್ನಾಟಕ
ಬೆಂಗಳೂರು, ಜುಲೈ 26: ಸುದೀರ್ಘ ಐದು ದಶಕದ ರಾಜಕೀಯ ಪಯಣ. ಕರ್ನಾಟಕದ ಬಿಜೆಪಿ ಪಾಲಿಗೆ ಅದ್ವಿತೀಯ ನಾಯಕ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರ ರಾಜಕೀಯ ಪಯಣವೇ ಕಲ್ಲು ಮುಳ್ಳಿನದ್ದು. ಬಡ ರೈತನೊಬ್ಬನ ಮಗ, ರೈಸ್ ಮಿಲ್ ಒಂದರಲ್ಲಿ ರೈಟರ್ ಆಗಿದ್ದ ಯಡಿಯೂರಪ್ಪ ರಾಜ್ಯ ರಾಜಕೀಯದಲ್ಲಿ ಪ್ರಭಾವಿ ನಾಯಕನಾಗಿ ಬೆಳೆದಿದ್ದೇ ರೋಚಕ.
ಯಡಿಯೂರಪ್ಪ ಹುಟ್ಟಿದ್ದು (1943, ಫೆ.27) ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆ ಎಂಬಲ್ಲಿ. ಲಿಂಗಾಯತ ಸಮುದಾಯದ ಉಪಜಾತಿ ಬಣಜಿಗ ಪಂಗಡಕ್ಕೆ ಸೇರಿದವರು. ಸಿದ್ದಲಿಂಗಪ್ಪ ಮತ್ತು ಪುಟ್ಟತಾಯಮ್ಮ ತಂದೆ, ತಾಯಿ. ವೀರಶೈವ-ಲಿಂಗಾಯತ ಸಮಾಜದ ಆರಾಧ್ಯರಾಗಿದ್ದ ಸ್ವಾಮಿ ಸಿದ್ದಲಿಂಗೇಶ್ವರ ಅವರು ತುಮಕೂರಿನ ಯಡಿಯೂರಿನಲ್ಲಿ ಸ್ಥಾಪಿಸಿದ್ದ ದೇಗುಲದ ನೆನಪಿನಲ್ಲಿ ಹೆತ್ತವರು ತಮ್ಮ ಮಗನಿಗೆ ಅಲ್ಲಿನ ದೇವರದ್ದೇ ಹೆಸರನ್ನು ಯಡಿಯೂರಪ್ಪ ಎಂದು ಇಟ್ಟಿದ್ದರು. ಯಡಿಯೂರಪ್ಪ ನಾಲ್ಕು ವರ್ಷ ಇದ್ದಾಗಲೇ ತಾಯಿ ಪುಟ್ಟತಾಯಮ್ಮ ತೀರಿಕೊಂಡಿದ್ದರು. ಆಬಳಿಕ ಬಡತನದಲ್ಲೇ ಮಂಡ್ಯ ಸರಕಾರಿ ಕಾಲೇಜಿನಲ್ಲಿ (1960-61ರಲ್ಲಿ) ಪಿಯುಸಿ ಮುಗಿಸಿದ್ದರು. ಕೆಲಸಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾಗಲೇ 1965ರಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಫ್ ಡಿ ಕ್ಲರ್ಕ್ ಆಗಿ ನೇಮಕಗೊಂಡಿದ್ದರು. ಆದರೆ, ಒಂದೇ ವರ್ಷದಲ್ಲಿಯೇ ಕ್ಲರ್ಕ್ ಕೆಲಸವನ್ನು ತೊರೆದು ಶಿಕಾರಿಪುರಕ್ಕೆ ತೆರಳಿದ್ದರು. ಅಲ್ಲಿ ವೀರಭದ್ರ ಶಾಸ್ತ್ರಿಯವರ ರೈಸ್ ಮಿಲ್ಲಿನಲ್ಲಿ ರೈಟರ್ ಆಗಿ ಕೆಲಸಕ್ಕೆ ಸೇರಿದ್ದು ಅವರ ಜೀವನದ ದಿಕ್ಕನ್ನೇ ಬದಲಾಯಿಸಿತ್ತು.
ಬದುಕಿನ ದಿಕ್ಕನ್ನೇ ಬದಲಿಸಿದ ಶಿಕಾರಿಪುರ
ರೈಸ್ ಮಿಲ್ಲಿನಲ್ಲಿದ್ದಾಗಲೇ 1967ರಲ್ಲಿ ಅದರ ಮಾಲೀಕರ ಪುತ್ರಿ ಮೈತ್ರಾದೇವಿಯನ್ನು ಮದುವೆಯಾದರು. ಕಾಲೇಜು ದಿನಗಳಲ್ಲೇ ಆರೆಸ್ಸೆಸ್ ಸಂಪರ್ಕದಲ್ಲಿದ್ದ ಯಡಿಯೂರಪ್ಪ ಆಬಳಿಕ ಶಿವಮೊಗ್ಗಕ್ಕೆ ಮರಳಿದ್ದು ಅವರನ್ನು ಜನಸಂಘದ ನಾಯಕರ ಸಖ್ಯ ಬೆಳೆಸುವಂತೆ ಮಾಡಿತ್ತು. ಇದೇ ವೇಳೆ, ಶಿವಮೊಗ್ಗದಲ್ಲಿ ಹಾರ್ಡ್ ವೇರ್ ಶಾಪ್ ಒಂದನ್ನೂ ಆರಂಭಿಸಿದ್ದರು. 1970ರಲ್ಲಿ ಶಿಕಾರಿಪುರ ಘಟಕದ ಆರೆಸ್ಸೆಸ್ ಕಾರ್ಯವಾಹರಾಗಿದ್ದರು. 1972ರಲ್ಲಿ ಶಿಕಾರಿಪುರ ಪುರಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಮೊದಲ ಬಾರಿಗೆ ಪುರಸಭೆ ಸದಸ್ಯರಾಗಿದ್ದಲ್ಲದೆ, ಇದೇ ವೇಳೆ ಅವರನ್ನು ಜನಸಂಘದ ಶಿಕಾರಿಪುರ ತಾಲೂಕು ಘಟಕದ ಅಧ್ಯಕ್ಷರನ್ನಾಗಿಯೂ ಮಾಡಲಾಗಿತ್ತು. 1975ರಲ್ಲಿ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೇ ಅವಧಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿ ಯಡಿಯೂರಪ್ಪ ಜೈಲು ವಾಸವನ್ನೂ ಅನುಭವಿಸಿದ್ದರು. ತುರ್ತು ಸ್ಥಿತಿಯ ಬಳಿಕ ಜನಸಂಘ ಇದ್ದುದು ರಾಷ್ಟ್ರ ಮಟ್ಟದಲ್ಲಿ ಭಾರತೀಯ ಜನತಾ ಪಾರ್ಟಿಯಾಗಿ ಬದಲಾಗಿತ್ತು. ಸಹಜವಾಗೇ ಯಡಿಯೂರಪ್ಪ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
1983ರಲ್ಲಿ ಮೊದಲ ಬಾರಿಗೆ ಶಿಕಾರಿಪುರ ಕ್ಷೇತ್ರದಿಂದ ವಿಧಾನಸಭೆಗೆ ಪ್ರವೇಶ. ಬಿಜೆಪಿಗೆ ರಾಜ್ಯದಲ್ಲಿ ಶಾಸಕ ಸ್ಥಾನ ಸಿಗುತ್ತಿದ್ದಂತೆ, ಐದೇ ವರ್ಷದಲ್ಲಿ ಯಡಿಯೂರಪ್ಪ 1988ರಲ್ಲಿ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಶಿಕಾರಿಪುರದಲ್ಲಿ ಸತತವಾಗಿ ಗೆಲ್ಲುತ್ತಾ ಬಂದ ಯಡಿಯೂರಪ್ಪ 1999ರಲ್ಲಿ ಮೊದಲ ಬಾರಿಗೆ ಸೋಲು ಕಂಡಿದ್ದರು. ಆದರೆ, ಎಂಎಲ್ಸಿ ಆಗಿ ಮತ್ತೆ ವಿಧಾನ ಪರಿಷತ್ ಪ್ರವೇಶ ಮಾಡಿ ವಿಪಕ್ಷ ನಾಯಕರಾಗಿದ್ದರು. ಆನಂತರ 2004ರಲ್ಲಿ ಯಡಿಯೂರಪ್ಪ ಮತ್ತೆ ಗೆದ್ದಿದ್ದಲ್ಲದೆ, ಬಿಜೆಪಿಯನ್ನು ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಪಡೆಯುವಂತೆ ಮಾಡಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲು ದೇವೇಗೌಡರು, ಕಾಂಗ್ರೆಸ್ ಜೊತೆ ಸೇರಿ ಧರಂ ಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ಹೀಗಾಗಿ ಯಡಿಯೂರಪ್ಪ ವಿಧಾನಸಭೆ ವಿಪಕ್ಷ ನಾಯಕರಾಗಿ ಉಳಿದುಬಿಟ್ಟರು.
ಕುಮಾರಸ್ವಾಮಿ ಕೈಕೊಟ್ಟಿದ್ದು ಪ್ಲಸ್ ಆಗಿತ್ತು, ಆದರೆ..!
ಆದರೆ, ಧರಂ ಸಿಂಗ್ ಸರಕಾರದಲ್ಲಿ ಒಳಗಿಂದೊಳಗೇ ಕುದಿಯುತ್ತಿದ್ದ ಹತಾಶೆ ಬಳಿಕ 2006ರಲ್ಲಿ ಸರಕಾರವನ್ನೇ ಬೀಳಿಸಿತ್ತು. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಸೇರಿ 20-20 ಸರಕಾರ ಅಸ್ತಿತ್ವಕ್ಕೆ ಬರುವಂತಾಗಿತ್ತು. ನಿಗದಿಯಂತೆ ಮೊದಲಿಗೆ ಕುಮಾರಸ್ವಾಮಿ ಸಿಎಂ ಆಗಿದ್ದರು. 2007ರಲ್ಲಿ ಒಪ್ಪಂದ ಪ್ರಕಾರ ಮೊದಲ ಬಾರಿಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದರು. ಆದರೆ ಏಳೇ ದಿನದಲ್ಲಿ ಕುಮಾರಸ್ವಾಮಿ ಕೈಕೊಟ್ಟಿದ್ದರಿಂದ ಯಡಿಯೂರಪ್ಪ ಸ್ಥಾನದಿಂದ ಕೆಳಗಿಳಿಯುವಂತಾಗಿತ್ತು. ಕುಮಾರಸ್ವಾಮಿ ಕೈಕೊಟ್ಟ ವಿಚಾರವನ್ನೇ ಮುಂದಿಟ್ಟು 2008ರಲ್ಲಿ ಯಡಿಯೂರಪ್ಪ ಚುನಾವಣೆ ಎದುರಿಸಿದ್ದು, ಇಡೀ ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಬಿಜೆಪಿಯನ್ನು ಬಹುಮತಕ್ಕೇರಿಸಿದ್ದಲ್ಲದೆ ಮತ್ತೆ ಅಧಿಕಾರಕ್ಕೇರುವಂತೆ ಮಾಡಿತ್ತು.
ಆದರೆ, ಬಿಜೆಪಿಯನ್ನು ಸುದೀರ್ಘ ಕಾಲದಿಂದ ಕಟ್ಟಿ ಬೆಳೆಸಿ ಅಧಿಕಾರಕ್ಕೆ ಬಂದಿದ್ದರೂ, ಯಡಿಯೂರಪ್ಪ ಅವರಿಗೆ ಎಡರುಗಾಲಾಗಿ ಪರಿಣಮಿಸಿದ್ದು ಸ್ವಪಕ್ಷೀಯರೇ. ಅಂದು ಅನಂತ ಕುಮಾರ್ ಕೇಂದ್ರ ಮಟ್ಟದಲ್ಲಿದ್ದು ರಾಜ್ಯ ಬಿಜೆಪಿ ಮಟ್ಟಿಗೆ ವರಿಷ್ಠ ನಾಯಕನಾಗಿ ಬೆಳೆದಿದ್ದರೆ, ರಾಜ್ಯಕ್ಕೆ ಯಡಿಯೂರಪ್ಪ ಎನ್ನುವ ಸ್ಥಿತಿಯಿತ್ತು. ಆದರೆ, ಪ್ರತೀ ವಿಚಾರದಲ್ಲಿಯೂ ಇಬ್ಬರ ಮಧ್ಯೆ ಒಳಗಿನ ಕಿತ್ತಾಟ ನಡೆದೇ ಇತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಮಕ್ಕಳು ಭ್ರಷ್ಟಾಚಾರ ನಡೆಸಿದರೆಂಬ ಆರೋಪ ಮತ್ತು ಅದೇ ವಿಚಾರ ಲೋಕಾಯುಕ್ತ ತನಿಖೆಗೊಳಪಟ್ಟು ಯಡಿಯೂರಪ್ಪ ಅವರಿಗೇ ಮುಳುವಾಗಿತ್ತು. 2011ರಲ್ಲಿ ಲೋಕಾಯುಕ್ತ ಪ್ರಕರಣದಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪ ಜೈಲು ಪಾಲಾಗುವಂತಾಗಿದ್ದು ಮುಖ್ಯಮಂತ್ರಿ ಸ್ಥಾನ ತ್ಯಜಿಸುವಂತಾಗಿತ್ತು. ಅಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಡಿ.ವಿ.ಸದಾನಂದ ಗೌಡ ಅದೃಷ್ಟ ಖುಲಾಯಿಸಿ ಸಿಎಂ ಪಟ್ಟಕ್ಕೇರಿದ್ದರು. ಆದರೆ ರಾಜ್ಯ ಬಿಜೆಪಿಯಲ್ಲಿ ನಾಯಕರ ಕಿತ್ತಾಟ ಏರ್ಪಟ್ಟು ಒಂದೇ ವರ್ಷದಲ್ಲಿ ಸಿಎಂ ಸ್ಥಾನ ಬದಲಾಗಿ, ಜಗದೀಶ ಶೆಟ್ಟರ್ ಅವರನ್ನು ಕುಳ್ಳಿರಿಸಲಾಗಿತ್ತು.
ಕೆಜೆಪಿ ಕಟ್ಟಿ ಬಿಜೆಪಿಗೇ ತಿರುಗುಬಾಣ
ಆದರೆ, ಜೈಲು ವಾಸದ ಬಳಿಕ ಮತ್ತೆ ತನಗೆ ಅಧಿಕಾರ ಹಸ್ತಾಂತರಿಸಿಲ್ಲ ಎಂಬ ಒಂದೇ ಕಾರಣಕ್ಕೆ ಯಡಿಯೂರಪ್ಪ ಬಿಜೆಪಿಯನ್ನೇ ಒಡೆದು ಪ್ರತ್ಯೇಕ ಕರ್ನಾಟಕ ಜನತಾ ಪಕ್ಷ ಎಂಬ ಪಕ್ಷ ಕಟ್ಟಿದ್ದರು. ಇದರಿಂದಾಗಿ 2013ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರುವುದನ್ನು ಕೆಜೆಪಿ ಮೂಲಕ ಯಡಿಯೂರಪ್ಪ ತಡೆಹಾಕಿದ್ರು. ಇದರ ಪರೋಕ್ಷ ಲಾಭ ಕಾಂಗ್ರೆಸ್ ಆಗಿದ್ದರಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಕೆಜೆಪಿ ಮೂಲಕ ರಾಜ್ಯಾದ್ಯಂತ ತನ್ನ ಬೆಂಬಲಿಗರನ್ನು ಕಣಕ್ಕಿಳಿಸಿ, ಹತ್ತು ಶೇ. ಮತಗಳನ್ನು ಯಡಿಯೂರಪ್ಪ ಬಲೆಗೆ ಹಾಕಿದ್ದರು. ಆರು ಸ್ಥಾನಗಳನ್ನು ಗೆದ್ದಿದ್ದರೂ ಬಿಜೆಪಿಗೆ ದೊಡ್ಡ ಹೊಡೆತ ಆಗಿತ್ತು. ರಾಜ್ಯ ಬಿಜೆಪಿಗೆ, ಯಡಿಯೂರಪ್ಪ ಇಲ್ಲದೆ ಅಸ್ತಿತ್ವ ಇಲ್ಲ ಎನ್ನುವ ವಾಸ್ತವ ತಿಳಿದ ಕೇಂದ್ರ ನಾಯಕರು, 2014ರ ಲೋಕಸಭೆ ಚುನಾವಣೆ ಹೊತ್ತಿಗೆ ಯಡಿಯೂರಪ್ಪ ಅವರನ್ನು ಕರೆದು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿದ್ದರು. 28 ಲೋಕಸಭೆ ಕ್ಷೇತ್ರಗಳಲ್ಲಿ 19ರಲ್ಲಿ ಬಿಜೆಪಿ ಗೆಲ್ಲುವ ಮೂಲಕ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಮಹತ್ವದ ಕೊಡುಗೆ ಸಿಕ್ಕಂತಾಗಿತ್ತು.
2016ರಲ್ಲಿ ಕ್ಲೀನ್ ಚಿಟ್ ಆಗಿದ್ದ ಯಡಿಯೂರಪ್ಪ
2016ರಲ್ಲಿ ಯಡಿಯೂರಪ್ಪ ಮತ್ತು ಪುತ್ರರ ವಿರುದ್ಧ ದಾಖಲಾಗಿದ್ದ ಲೋಕಾಯುಕ್ತದ ಪ್ರಕರಣ ಖುಲಾಸೆ ಆಗಿತ್ತು. 2011ರಲ್ಲಿ ಸಿಎಂ ಸ್ಥಾನ ಕಳಕೊಳ್ಳಲು ಕಾರಣವಾಗಿದ್ದ 40 ಕೋಟಿಯ ಮೈನಿಂಗ್ ಪ್ರಕರಣದಲ್ಲಿ ಸಿಬಿಐ ಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಅಲ್ಲದೆ, ಅದೇ ವರ್ಷ ಅವರ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿದ್ದ 15 ಎಫ್ಐಆರ್ ಪ್ರಕರಣಗಳನ್ನೂ ಕರ್ನಾಟಕ ಹೈಕೋರ್ಟ್ ರದ್ದು ಪಡಿಸಿತ್ತು. ಯಡಿಯೂರಪ್ಪ ಸಂಪೂರ್ಣ ಕ್ಲೀನ್ ಚಿಟ್ ಆಗುತ್ತಲೇ ರಾಷ್ಟ್ರೀಯ ನಾಯಕರು, ಅವರನ್ನು ನಾಲ್ಕನೇ ಬಾರಿಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದ್ದರು. ಸಿದ್ದರಾಮಯ್ಯ ಸರಕಾರದ ವಿರುದ್ಧ ತೊಡೆ ತಟ್ಟುತ್ತಲೇ 2018ರ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರ ಕೇಂದ್ರದತ್ತ ತಂದಿದ್ದು ಯಡಿಯೂರಪ್ಪ.
ಸಿಎಂ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದರು
2018ರಲ್ಲಿ ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಎಂದೇ ಬಿಂಬಿಸಿ ಬಿಜೆಪಿ ಚುನಾವಣೆ ಎದುರಿಸಿತ್ತು. ಅತಿ ಹೆಚ್ಚು 104 ಸ್ಥಾನಗಳು ಲಭಿಸಿದ್ದವು. ಆದರೆ, ಪೂರ್ಣ ಬಹುಮತ ಇಲ್ಲದೇ ಯಡಿಯೂರಪ್ಪ ಮತ್ತೆ ಹಂಗಿಗೆ ಬಿದ್ದರು. ಆದರೂ, ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದರು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ಅವಕಾಶ ನೀಡಿದ್ದನ್ನು ವಿರೋಧಿಸಿ ಸುಪ್ರೀಂ ಕದ ತಟ್ಟಿದ್ದರು. ಸುಪ್ರೀಂ ಕೋರ್ಟ್ ಯಡಿಯೂರಪ್ಪ ಅವರಿಗೆ ಸದನದಲ್ಲಿ ವಿಶ್ವಾಸ ಮತ ಸಾಬೀತು ಪಡಿಸಲು ಸೂಚನೆ ಕೊಟ್ಟಿತ್ತು. ಆದರೆ, ಯಡಿಯೂರಪ್ಪ ವಿಶ್ವಾಸ ಮತ ತೋರಿಸಲು ಸಾಧ್ಯವಾಗದೆ ಮೂರು ದಿನಗಳ ಮುಖ್ಯಮಂತ್ರಿಯಾಗಿ ಮೇ 19ಕ್ಕೆ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ಆನಂತರ ಕಾಂಗ್ರೆಸ್, ಕುಮಾರಸ್ವಾಮಿ ಜೊತೆ ಸೇರಿ ಸರಕಾರ ರಚಿಸಿತ್ತು. ಕೇವಲ 38 ಸ್ಥಾನಗಳನ್ನು ಹೊಂದಿದ್ದ ಕುಮಾರಸ್ವಾಮಿ ಅಚ್ಚರಿಯಲ್ಲಿ ಮುಖ್ಯಮಂತ್ರಿಯೂ ಆಗಿದ್ದರು. ಆದರೆ, ಒಂದೇ ವರ್ಷದಲ್ಲಿ ಕುಮಾರಸ್ವಾಮಿ ಸರಕಾರವನ್ನು ಬೀಳಿಸಿ, ಮತ್ತೆ ಅಧಿಕಾರಕ್ಕೇರಿದ್ದು ಯಡಿಯೂರಪ್ಪ. ಅದಕ್ಕೆ ಹೆಗಲು ಕೊಟ್ಟಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ಶಾಸಕರು. ಯಡಿಯೂರಪ್ಪಗೆ ಸಾಥ್ ನೀಡಿದ್ದ 17 ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಕುಮಾರಸ್ವಾಮಿ ಸರಕಾರವನ್ನು ಉರುಳಿಸಿತ್ತು. ಇದೀಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಎರಡು ವರ್ಷಗಳ ಅವಧಿಯನ್ನು ಪೂರೈಸಿದ್ದಾರೆ. ಅಷ್ಟರಲ್ಲಿ ಮತ್ತೆ ಹೈಕಮಾಂಡ್ ಹೆಸರಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸಲಾಗಿದೆ.
ನಾಲ್ಕು ಬಾರಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದರೂ ಒಂದು ಬಾರಿಯೂ ಪೂರ್ಣಾವಧಿಗೆ ಸ್ಥಾನ ಅಲಂಕರಿಸದೆ, ಬೂಕನಕೆರೆಯ ಸಿದ್ದಲಿಂಗಪ್ಪ ಯಡಿಯೂರಪ್ಪ ನಿರ್ಗಮಿಸಿದ್ದಾರೆ. ಸಾಮಾನ್ಯ ರೈತನೊಬ್ಬನ ಮಗ ಕ್ಲರ್ಕ್ ಹುದ್ದೆಯಿಂದ ರಾಜ್ಯದ ಮುಖ್ಯಮಂತ್ರಿಯ ಗಾದಿಯ ವರೆಗೂ ನಡೆದುಬಂದ ಹಾದಿಯೇ ಕಲ್ಲು ಮುಳ್ಳಿನದ್ದು. ರಾಜ್ಯದ ಮಟ್ಟಿಗೆ ಮಹಾನಾಯಕನ ನಿರ್ಗಮನ ಬಿಜೆಪಿಗೆ ಹೊಸ ದಿಕ್ಕನ್ನು ನೀಡುತ್ತಾ ಕಾದುನೋಡಬೇಕು.
BS Yeddyurappa story of a clerk from Mandya who brought BJP into Mighty power in Karnataka a complete political biography. Born on February 27, 1943, to Puttathayamma and Siddalingappa in Boonankere village in Karnataka's Mandya district, Yeddyurappa was named after the presiding deity of a Shaivite temple at Yediyur -- built by saint Siddalingeshwara - in Tumkur district. BS in his name stands for Boonankere (village) and Siddalinagappa (father). Yeddyurappa earned his BA degree from a Mandya college and went on to work as a clerk in the Karnataka government's Department of Social Welfare in 1965. But, he did not like the job, which he quit and shifted to Shikaripura, now his constituency.
25-11-24 05:51 pm
Bangalore Correspondent
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm