ಮೀರ್ ಸಾದಿಕ್ ಯಾರೆಂದು ಸಾಬೀತಾಯ್ತು ; ಎಲ್ಲ ಸೇರಿ ಭೀಷ್ಮನನ್ನು ಶರಶಯ್ಯೆಯಲ್ಲಿ ಮಲಗಿಸಿದ್ರಲ್ಲ ; ಕಾಂಗ್ರೆಸ್ ಟ್ವೀಟ್

26-07-21 05:27 pm       Headline Karnataka News Network   ಕರ್ನಾಟಕ

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜಿನಾಮೆ ನೀಡುತ್ತಿದ್ದಂತೆ ಕರ್ನಾಟಕ ಕಾಂಗ್ರೆಸ್, ರಾಜ್ಯ ಬಿಜೆಪಿಯನ್ನು ತಿವಿಯುವ ರೀತಿ ಟ್ವೀಟ್ ಮೂಲಕ ಟೀಕೆ ಮಾಡಿದೆ.

ಬೆಂಗಳೂರು, ಜುಲೈ 26: ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜಿನಾಮೆ ನೀಡುತ್ತಿದ್ದಂತೆ ಕರ್ನಾಟಕ ಕಾಂಗ್ರೆಸ್, ರಾಜ್ಯ ಬಿಜೆಪಿಯನ್ನು ತಿವಿಯುವ ರೀತಿ ಟ್ವೀಟ್ ಮೂಲಕ ಟೀಕೆ ಮಾಡಿದೆ. ವಾರದ ಹಿಂದೆ ಆಡಿಯೋ ಹೊರ ಬಂದಿದ್ದನ್ನು ನೆಪವಾಗಿರಿಸಿ, ಮೀರ್ ಸಾದಿಕ್ ಕಟೀಲರ ಆಡಿಯೋ ಮಿಮಿಕ್ರಿ ಆರ್ಟಿಸ್ಟ್ ನಳಿನ್ ಕುಮಾರ್ ಕಟೀಲು ಅವರೇ ಅನ್ನುವುದು ಸಾಬೀತಾಯ್ತು. ಯಡಿಯೂರಪ್ಪ ಬಿಜೆಪಿ ಪಾಲಿಗೆ ಆತ್ಮ ಎನ್ನುತ್ತಲೇ ಆತ್ಮವಂಚನೆಯ ಕೆಲಸ ಮಾಡಿದ್ದಾರೆ. ಅವರು ಇಂದು ‘ಸಂತೋಷ’ದಿಂದ ಕುಣಿದು ಕುಪ್ಪಳಿಸುತ್ತಿರಬಹುದು. ಅದೇನೇ ಆದರೂ ಹಿರಿಯ ನಾಯಕನಿಗೆ ಕಣ್ಣೀರು ಹಾಕುವ ಕಷ್ಟ ಕೊಡಬಾರದಿತ್ತು ಎಂದು ಟ್ವೀಟ್ ಮಾಡಿದೆ.

ಮೊನ್ನೆ ಮೊನ್ನೆ ವರೆಗೂ ಇನ್ನೆರಡು ವರ್ಷ ನಾನೇ ಸಿಎಂ ಎನ್ನುತ್ತಿದ್ದವರು ಈಗ ರಾಜಿನಾಮೆ ನೀಡಿದ ಕಾರಣವೇನು ? ನಿಮ್ಮ ಭೀಷ್ಮನನ್ನು ಸಿ.ಟಿ.ರವಿ, ನಳಿನ್ ಕಟೀಲ್ ಸೇರಿ ಬಾಣ ಬಿಟ್ಟು ಶರಶಯ್ಯೆಯಲ್ಲಿ ಮಲಗಿಸಿಬಿಟ್ಟಿರಲ್ಲ. ಅವರ ಕಣ್ಣೀರಿಗೆ ನಿಮ್ಮ ದ್ರೋಹ ಕಾರಣವಲ್ಲವೇ ? ಎಂದು ಮತ್ತೊಂದು ಟ್ವೀಟ್ ನಲ್ಲಿ ಪ್ರಶ್ನೆ ಮಾಡಿದೆ.

ಇದೇ ವಿಚಾರದಲ್ಲಿ ಟ್ವೀಟ್ ಮೂಲಕ ಪ್ರಶ್ನೆ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇದು ಒಬ್ಬ ವ್ಯಕ್ತಿಯ ಕಣ್ಣೀರಲ್ಲ. ರಾಜ್ಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿಯ ಕಣ್ಣೀರು. ಅವರ ರಾಜಿನಾಮೆ ಹಿಂದೆ ಸಂತೋಷ ಕಾಣಲಿಲ್ಲ. ಬದಲಿಗೆ ಅವರ ನಿರ್ಧಾರದಲ್ಲಿ ನೋವಿತ್ತು. ಆ ನೋವು ಕೊಟ್ಟವರು ಯಾರು ಎಂಬ ಬಗ್ಗೆ ರಾಜ್ಯದ ಜನರಿಗೆ ತಿಳಿಸಬೇಕು ಎಂದಿದ್ದಾರೆ.

Yediyurappa resigns as Karnataka CM congress take Twitter to slam party. Yediyurappa announced his resignation at the event to commemorate the second anniversary of the BJP government.