ಆಗಸ್ಟ್ 23ರಿಂದಲೇ 9ರಿಂದ 12ನೇ ತರಗತಿಗೆ ಶಾಲೆ ಆರಂಭ ; ತಜ್ಞರ ಸಭೆಯಲ್ಲಿ ನಿರ್ಧಾರ

06-08-21 03:49 pm       Headline Karnataka News Network   ಕರ್ನಾಟಕ

ಒಂದೆಡೆ ಕೊರೊನಾ ಮೂರನೇ ಅಲೆಯ ಆತಂಕದ ನಡುವಲ್ಲೇ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ರಾಜ್ಯ ಸರಕಾರ ನಿರ್ಧಾರ ಕೈಗೊಂಡಿದೆ.

ಬೆಂಗಳೂರು, ಆಗಸ್ಟ್ 6 : ಒಂದೆಡೆ ಕೊರೊನಾ ಮೂರನೇ ಅಲೆಯ ಆತಂಕದ ನಡುವಲ್ಲೇ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ರಾಜ್ಯ ಸರಕಾರ ನಿರ್ಧಾರ ಕೈಗೊಂಡಿದೆ. ಆಗಸ್ಟ್‌ 23ರಿಂದ 9, 10, 11 ಹಾಗೂ 12ನೇ ತರಗತಿಗಳನ್ನು ಆರಂಭಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ.

ಕೊರೊನಾ ಸೋಂಕಿನ ಹೆಚ್ಚಳ ಹಿನ್ನೆಲೆಯಲ್ಲಿ ಶಿಕ್ಷಣ ತಜ್ಞರು, ವೈದ್ಯಕೀಯ ತಜ್ಞರು ಮತ್ತು ಅಧಿಕಾರಿಗಳ ಜೊತೆಗೆ ಮುಖ್ಯಮಂತ್ರಿ ಸಭೆ ನಡೆಸಿದರು. ಸಭೆಯಲ್ಲಿ ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಆರಂಭಿಕ ಹಂತದಲ್ಲಿ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ಆರಂಭಿಸಲಾಗುತ್ತದೆ. ಎರಡು ಪಾಳಿಯಲ್ಲಿ ಶಾಲೆಗಳು ನಡೆಯಲಿದೆ. ಎಲ್ಲಾ ವಿದ್ಯಾರ್ಥಿಗಳನ್ನು ಎರಡು ವಿಭಾಗಗಳನ್ನಾಗಿ ಮಾಡಿಕೊಂಡು ವಾರದಲ್ಲಿ ಮೂರು ದಿನಗಳ ಕಾಲ ಎರಡು ಪಾಳಿಯಲ್ಲಿ ತರಗತಿ ನಡೆಯಲಿದೆ ಎಂದಿದ್ದಾರೆ.

ಆಗಸ್ಟ್‌ ಅಂತ್ಯದಲ್ಲಿ ಕೊರೊನಾ ವೈಪರೀತ್ಯ ನೋಡಿಕೊಂಡು ಇತರೇ ಶಾಲೆಗಳ ಆರಂಭದ ವಿಚಾರದಲ್ಲಿ ನಿರ್ಧಾರಕ್ಕೆ  ಬರಲಾಗುತ್ತದೆ. ಸೋಂಕಿನ ಪ್ರಮಾಣವನ್ನು ಆಧರಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಸೋಂಕು ತೀವ್ರತೆ ಕಡಿಮೆಯಾದರೆ, ಸಪ್ಟೆಂಬರ್‌ ತಿಂಗಳಿನಿಂದಲೇ ಪ್ರಾಥಮಿಕ ಶಾಲೆಗಳನ್ನು ಕೂಡ ಆರಂಭಿಸಲಾಗುವುದು ಎಂದಿದ್ದಾರೆ.