ತರಬೇತಿ ಪಡೆಯುತ್ತಿದ್ದ ಪೊಲೀಸ್ ಕಾನ್‌ಸ್ಟೇಬಲ್ ಕುಸಿದು ಬಿದ್ದು ಸಾವು ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾವು ಆರೋಪ 

12-08-21 05:37 pm       Mangaluru Correspondent   ಕರ್ನಾಟಕ

ಪೊಲೀಸ್ ತರಬೇತಿ ಅಕಾಡೆಮಿಯಲ್ಲಿ ತರಬೇತು ಪಡೆಯುತ್ತಿದ್ದ ಮಾಜಿ ಸೈನಿಕರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಪೊಲೀಸ್ ತರಬೇತಿ ಶಾಲೆಯಲ್ಲಿ ನಡೆದಿದೆ.

ರಾಮನಗರ, ಆಗಸ್ಟ್ 12: ಪೊಲೀಸ್ ತರಬೇತಿ ಅಕಾಡೆಮಿಯಲ್ಲಿ ತರಬೇತು ಪಡೆಯುತ್ತಿದ್ದ ಮಾಜಿ ಸೈನಿಕರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಪೊಲೀಸ್ ತರಬೇತಿ ಶಾಲೆಯಲ್ಲಿ ನಡೆದಿದೆ. ಸೈನಿಕನ ಸಾವಿಗೆ ಅಲ್ಲಿನ ಅಧಿಕಾರಿಗಳೇ ಕಾರಣ ಎಂದು ಇತರೇ ಪೊಲೀಸ್ ಪೇದೆಗಳು ಪ್ರತಿಭಟನೆ ನಡೆಸಿದ್ದಾರೆ. 

ಚನ್ನಪಟ್ಟಣದ ಪೊಲೀಸ್ ತರಬೇತಿ ಪಡೆಯುತ್ತಿದ್ದ ವೇಳೆ ಪೊಲೀಸ್ ಕಾನ್‌ಸ್ಟೆಬಲ್ ಎಲ್ಲಪ್ಪ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೂಲತಃ ಗದಗ ಜಿಲ್ಲೆ ನರಗುಂದ ತಾಲೂಕಿನವರಾದ ಎಲ್ಲಪ್ಪ, ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ವಂದರಾಗುಪ್ಪೆ ಗ್ರಾಮದಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದರು. 

ಪೊಲೀಸ್ ತರಬೇತಿ ಶಾಲೆಯ ಅಧಿಕಾರಿಗಳು ಸೂಕ್ತ ಚಿಕಿತ್ಸೆ ಕೊಡಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಘಟನೆಯನ್ನು ಖಂಡಿಸಿ ಉಳಿದ ಪೇದೆಗಳು ಪಿಟಿಎಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.

ಅಧಿಕಾರಿ ಅಮಾನತ್ತಿಗೆ ಮಾಜಿ ಸೈನಿಕರ ಆಗ್ರಹ 

ಮಾಜಿ ಸೈನಿಕ ಎಲ್ಲಪ್ಪ ಸಾವಿಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸೈನಿಕರ ಸಂಘ, ಕರ್ತವ್ಯ ಲೋಪ ಎಸಗಿರುವ ಪೊಲೀಸ್ ಅಧಿಕಾರಿ ಆಮಾನತ್ತಿಗೆ ಆಗ್ರಹಿಸಿ ಪೊಲೀಸ್ ತರಬೇತಿ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು‌. ಮೃತ ಪೊಲೀಸ್ ಕಾನ್‌ಸ್ಟೆಬಲ್ ಎಲ್ಲಪ್ಪ ನೋವಿನಿಂದ ಎರಡು ಗಂಟೆ ನರಳಾಡಿದರೂ, ಅಧಿಕಾರಿಗಳು ಚಿಕಿತ್ಸೆ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ಮಾಜಿ ಸೈನಿಕರ ಸಂಘ ಸದಸ್ಯರು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

"ಪೊಲೀಸ್ ತರಬೇತಿ ಶಾಲೆಯಲ್ಲಿ ಸುಮಾರು 700 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಆದರೆ ಶಾಲೆಯಲ್ಲಿ ಯಾವುದೇ ವೈದ್ಯರನ್ನು ನೇಮಕ ಮಾಡಿಕೊಂಡಿಲ್ಲ. ಅಲ್ಲಿ ಕೇವಲ ಒಬ್ಬರು ನರ್ಸ್ ಮಾತ್ರ ಇದ್ದಾರೆ. 700 ಜನ ವಿದ್ಯಾರ್ಥಿಗಳಿಗೆ ಒಬ್ಬರು ನರ್ಸ್ ಸಾಕೇ? ಎಂದು ಪ್ರಶ್ನಿಸಿದರು.

Ramnagara Probationary police constable dies suddenly during training.