ರಾಜ್ಯದಲ್ಲಿ 1 ರಿಂದ 8 ತರಗತಿ ಶಾಲಾರಂಭಕ್ಕೆ ಪ್ಲಾನ್ ; ಪೋಷಕರ ಅಭಿಪ್ರಾಯ ಸಂಗ್ರಹಕ್ಕೆ ಸೂಚನೆ

19-08-21 04:10 pm       Headline Karnataka News Network   ಕರ್ನಾಟಕ

ರಾಜ್ಯದಲ್ಲಿ 1 ರಿಂದ 8 ತರಗತಿ ಶಾಲಾರಂಭಕ್ಕೆ ಸಂಬಂಧಿಸಿದಂತೆ ಅಂಕಿಅಂಶಗಳ ಸಂಗ್ರಹಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.

ಬೆಂಗಳೂರು, ಆಗಸ್ಟ್ 19: ರಾಜ್ಯದಲ್ಲಿ 1 ರಿಂದ 8 ತರಗತಿ ಶಾಲಾರಂಭಕ್ಕೆ ಸಂಬಂಧಿಸಿದಂತೆ ಅಂಕಿಅಂಶಗಳ ಸಂಗ್ರಹಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಶಾಲೆಗಳನ್ನು ತೆರೆಯುವ ಕುರಿತು ಪೋಷಕರಿಂದ ಅಭಿಪ್ರಾಯ ಸಂಗ್ರಹ ಮಾಡುವಂತೆ ಬಿಇಓಗಳಿಗೆ ಸೂಚನೆಯನ್ನು ನೀಡಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಗಸ್ಟ್‌ ೨೩ರಿಂದ ರಾಜ್ಯದಲ್ಲಿ ೯ ರಿಂದ ೧೨ನೇ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಅಲ್ಲದೇ 1 ರಿಂದ 8 ತರಗತಿ ಶಾಲಾರಂಭ ಮಾಡುವ ಕುರಿತು ಸರಕಾರ ಚಿಂತನೆಯನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಪೋಷಕರ ಅಭಿಪ್ರಾಯ ಮುಖ್ಯವಾಗಿದೆ. ಹೀಗಾಗಿ ಎಲ್ಲಾ ಬಿಇಓಗಳ ಮೂಲಕ ಈ ಕಾರ್ಯವನ್ನು ಮಾಡಲಾಗುತ್ತದೆ. ಪೋಷಕರ ಅಭಿಪ್ರಾಯ ಸಂಗ್ರಹ ಮಾಡಿದ ನಂತರದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಶಿಕ್ಷಣ ಇಲಾಖೆ ಈಗಾಗಲೇ ಮಾಹಿತಿ ಕಲೆಹಾಕುವ ಕಾರ್ಯವನ್ನು ಮಾಡುತ್ತಿದೆ. ಶಾಲೆಗಳನ್ನು ತೆರೆಯುವ ಕುರಿತು ಅಗಸ್ಟ್‌ ೩೦ರ ಒಳಗೆ ಸಭೆಯನ್ನು ನಡೆಸಲಾಗುತ್ತದೆ. ಮುಖ್ಯಮಂತ್ರಿಗಳ ಚರ್ಚೆಯನ್ನು ನಡೆಸಿದ ನಂತರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚುತ್ತಿದ್ದು, ಇನ್ನೊಂದೆಡೆಯಲ್ಲಿ ಸರಕಾರ ಶಾಲೆಗಳನ್ನು ಆರಂಭಿಸುತ್ತಿದೆ. ಕೊರೊನಾ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಸದ್ಯಕ್ಕೆ ಶಾಲೆಗಳು ಆರಂಭವಾಗುತ್ತಿಲ್ಲ. ಶಾಲಾರಂಭದ ಸಾಧಕ ಬಾಧಕ ಅರಿಯದೇ ಇದೀಗ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಕುರಿತು ಅಪಸ್ವರ ಕೇಳಿಬಂದಿದೆ.