ಕುಟುಂಬಸ್ಥರಿಗೆ ವಾಯ್ಸ್ ಮೆಸೇಜ್ ಕಳುಹಿಸಿ ಕಾರಿನಲ್ಲೇ ನದಿಗೆ ಧುಮುಕಿದ ಕುಟುಂಬ ! ತಾಯಿ, ಮಗ ಪಾರು

26-08-21 06:00 pm       Headline Karnataka News Network   ಕರ್ನಾಟಕ

ಕುಟುಂಬಸ್ಥರಿಗೆ ವಾಯ್ಸ್ ಮೆಸೇಜ್ ಕಳುಹಿಸಿ, ಒಂದೇ ಕುಟುಂಬದ ನಾಲ್ಕು ಮಂದಿ ಕಾರಿನಲ್ಲಿದ್ದುಕೊಂಡೇ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭದ್ರಾ ನಾಲೆಯಲ್ಲಿ ನಡೆದಿದ್ದು ಇಬ್ಬರು ಸಾವು ಕಂಡಿದ್ದಾರೆ. 

ಚಿಕ್ಕಮಗಳೂರು, ಆಗಸ್ಟ್ 26: ಕುಟುಂಬಸ್ಥರಿಗೆ ವಾಯ್ಸ್ ಮೆಸೇಜ್ ಕಳುಹಿಸಿ, ಒಂದೇ ಕುಟುಂಬದ ನಾಲ್ಕು ಮಂದಿ ಕಾರಿನಲ್ಲಿದ್ದುಕೊಂಡೇ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎಂ.ಸಿ ಹಳ್ಳಿ ಬಳಿಯ ಭದ್ರಾ ನಾಲೆಯಲ್ಲಿ ನಡೆದಿದ್ದು ಇಬ್ಬರು ಸಾವು ಕಂಡಿದ್ದಾರೆ. 

ಮಂಜು, ಆತನ ಪತ್ನಿ ನೀತು, ಮಗ ಧ್ಯಾನ್ ಹಾಗು ನೀತು ತಾಯಿ ಆತ್ಮಹತ್ಯೆಗೆ ಯತ್ನಿಸಿದವರು. 13 ವರ್ಷದ ಮಗ ಧ್ಯಾನ್ ಮತ್ತು ಆತನ ತಾಯಿ ನೀತು(35) ಸಾವಿನಿಂದ ಪಾರಾಗಿದ್ದಾರೆ. ಮಂಜು ಮತ್ತು ಆತನ ಅತ್ತೆ ನೀರಿನಲ್ಲಿ ಮುಳುಗಿ ಸಾವು ಕಂಡಿದ್ದಾರೆ. 

ಕಾರಿನಲ್ಲಿ ಪತ್ನಿ, ಮಗ ಹಾಗು ಅತ್ತೆ ಮಲಗಿದ್ದ ಸಂದರ್ಭದಲ್ಲಿ ತನ್ನ ಸೋದರನ  ಮಕ್ಕಳೊಂದಿಗೆ ಮಂಜು ಕರೆ ಮಾಡಿ ಮಾತನಾಡಿದ್ದಾರೆ.  ನನ್ನನ್ನು ನಂಬಿದವರಿದಂದಲೇ ನಾನು ಮೋಸ ಹೋದೆ. ನೀವು ಜಗತ್ತಿನಲ್ಲಿ ಯಾರನ್ನು ನಂಬಬೇಡಿ. ನನ್ನ ಪತ್ನಿಯೇ ನನ್ನ ಪ್ರಪಂಚ ಎಂದು ಹೇಳಿ ಇನ್ನು ಹತ್ತು ನಿಮಿಷದಲ್ಲಿ ನಾವೆಲ್ಲರು ಈ ಜಗದಲ್ಲಿ ಇರುವುದಿಲ್ಲ ಎಂದು ಮಂಜು ಹೇಳಿದ್ದಾರೆ. 

ಘಟನೆಯಲ್ಲಿ ಮಂಜು ಹಾಗು ಸುನಂದಮ್ಮ ನೀರು ಪಾಲಾಗಿದ್ದು, ಮೃತದೇಹ ಪತ್ತೆ ಹಚ್ಚಲಾಗಿದೆ. ಅದೃಷ್ಟವಶಾತ್ ತಾಯಿ ನೀತು ಹಾಗು ಮಗ ಧ್ಯಾನ್ ಈಜಿ ದಡ ಸೇರಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನ ಗಿರಿನಗರದಲ್ಲಿ ನೆಲೆಸಿದ್ದ ಮಂಜು ಜೇಡಿಕಟ್ಟೆಯಲ್ಲಿರುವ ಪತ್ನಿ ಸುನಂದಾ ಜೊತೆಗೆ ತವರು ಮನೆಗೆ ಆಗಮಿಸಿದ್ದರು. ನಿನ್ನೆ  ಪುನಃ ಬೆಂಗಳೂರಿಗೆ ವಾಪಸ್ಸಾಗುವಾಗ, ಮಂಜು ಸಂಬಂಧಿ ರಾಜುರವರಿಗೆ ವಾಟ್ಸಾಪ್ ಮೆಸೆಜ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ತಕ್ಷಣ ರಾಜು ಮಂಜುಗೆ ಫೋನ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳದಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ರಾಜು ಎಷ್ಟೇ ಮನವೊಲಿಸಿದರೂ ಮಂಜು ಮತ್ತು ಕುಟುಂಬ ಆತ್ಮಹತ್ಯೆಯ ಕಠಿಣ ನಿರ್ಧಾರ ತಳೆದಿದ್ದರು.

ಕಡೂರು ತಾಲೂಕಿನ ಸಿಂಗಟನಕೆರೆ ಗ್ರಾಮದ ಮಂಜು ಹನ್ನೆರಡು ವರ್ಷಗಳ ಹಿಂದಷ್ಟೆ ನೀತುರನ್ನು ಮದುವೆಯಾಗಿದ್ರು.  ಮಂಜು ವ್ಯವಹಾರದಲ್ಲಿ ಒಂದು ಕೋಟಿ ಲಾಸ್ ಆಗಿತ್ತು ಎನ್ನಲಾಗಿದೆ. ನಂಬಿದವರೇ ಕೈಕೊಟ್ಟಿದ್ದರಿಂದ ಮಂಜು ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ರು ಎನ್ನಲಾಗಿದೆ.

ಆದರೆ ಮಂಜು ಆತ್ಮಹತ್ಯೆ ನಿರ್ಧಾರ ಕುಟುಂಬದವರಿಗೆ ತಿಳಿದಿರಲಿಲ್ಲ. ಹೀಗಿದ್ರೂ ತನ್ನ ಕುಟುಂಬವನ್ನು ಮಂಜು   ಬಲಿಕೊಡಲು ಮುಂದಾಗಿದ್ದು ಏಕೆ ಎಂಬುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ. ತರೀಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Video: 

Chikmagalur Family attempts suicide by sending voice message to family mother and son rescued