ಅರುಣ್ ಸಿಂಗ್ ಒಬ್ಬ ದಲ್ಲಾಳಿ, ರಾಜ್ಯಕ್ಕೆ ಬಂದಿದ್ದು ದುಡ್ಡು ಕಲೆಕ್ಷನ್ ಮಾಡೋಕೆ.. ಹೀನಾಯ ಜರೆದುಬಿಟ್ಟ ಎಚ್ಡಿಕೆ

01-09-21 03:48 pm       Headline Karnataka News Network   ಕರ್ನಾಟಕ

ಅರುಣ್‌ ಸಿಂಗ್ ಕೇಂದ್ರ ಸರ್ಕಾರದ ಏಜೆಂಟ್, ದಲ್ಲಾಳಿ. ಅವನು ರಾಜ್ಯಕ್ಕೆ ಬಂದಿದ್ದು ದುಡ್ಡು ಕಲೆಕ್ಷನ್ ಮಾಡೋದಕ್ಕಾಗಿ. ಹೀಗೆಂದು ಜರೆದಿದ್ದು ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ.

ಮೈಸೂರು, ಸೆ.1: ಅರುಣ್‌ ಸಿಂಗ್ ಕೇಂದ್ರ ಸರ್ಕಾರದ ಏಜೆಂಟ್, ದಲ್ಲಾಳಿ. ಅವನು ರಾಜ್ಯಕ್ಕೆ ಬಂದಿದ್ದು ದುಡ್ಡು ಕಲೆಕ್ಷನ್ ಮಾಡೋದಕ್ಕಾಗಿ.. ಹೀಗೆಂದು ಬಿಜೆಪಿ ರಾಜ್ಯ ಉಸ್ತುವಾರಿಯನ್ನು ಹೀನಾಯವಾಗಿ ಜರೆದಿದ್ದು ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅವನಿಗೆ ಇಲ್ಲಿಯ ರಾಜಕಾರಣ ಗೊತ್ತಿಲ್ಲ. ಹೀಗಾಗಿ ಜೆಡಿಎಸ್‌ ಅನ್ನು ಮುಳುಗುತ್ತಿರುವ ಹಡಗು ಎಂದಿದ್ದಾರೆ. ಮುಳುಗುತ್ತಿರುವುದು ಬಿಜೆಪಿ ಪಕ್ಷ. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಬೇಡಿ. ಕೇಂದ್ರದಿಂದ ಬರುವ ಇಂತಹ ದಲ್ಲಾಳಿಗಳಿಗೆ ಇಲ್ಲಿನ ವಾಸ್ತವವನ್ನ ರಾಜ್ಯ ನಾಯಕರು ಹೇಳಬೇಕು ಎಂದು ಹೇಳಿದರು.

ನಾವೇನು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೀವಾ? ಅರ್ಧ ರಾತ್ರಿಯಲ್ಲಿ ಮೈಸೂರಿನ ಸಾ.ರಾ.ಮಹೇಶ್‌ ಮನೆಗೆ ಬಂದಿದ್ದು ಯಾರು? ಜೆಡಿಎಸ್ ಬಗ್ಗೆ ಮಾತನಾಡಿದವರು ಯಾರ್ಯಾರು ಏನೇನಾಗಿದ್ದಾರೆ ಅಂತ ಇತಿಹಾಸ ಇದೆ. ಜೆಡಿಎಸ್‌ನ ಫ್ಯೂಸ್ ಕೀಳಲು ಯಾರಿಂದಲೂ ಸಾಧ್ಯವಿಲ್ಲ. ಜೆಡಿಎಸ್‌ ಗ್ರೌಂಡಿಂಗ್ ಬಹಳ ಭದ್ರವಾಗಿದೆ ಎಂದು ಹೇಳಿದರು ಕುಮಾರಸ್ವಾಮಿ. ಮೇಕೆದಾಟು ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರವನ್ನ ಒತ್ತಾಯಿಸಲು ಕರ್ನಾಟಕ ಸಂಸದರಿಗೆ ಮೂಳೆ‌, ಎಲುಬು ಎರಡೂ ಇಲ್ಲ. ಅರುಣ್ ಸಿಂಗ್ ಸೂಟ್‌ಕೇಸ್ ತಗೊಂಡೋದ್ರೆ ಸಾಲದು. ಇಂತಹ ಸಮಸ್ಯೆಯನ್ನ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಟಾಂಗ್ ನೀಡಿದ್ರು. ನಾಯಕರು ಕೂಡ ಜೆಡಿಎಸ್ ಬಿಟ್ಟು ಹೋಗುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ಜೆಡಿಎಸ್ ಬಾಗಿಲು ದೊಡ್ಡದಾಗಿ ತೆರೆದಿದೆ.

ಬರುವವರು ಬರಬಹುದು, ಹೋಗೋರು ಹೋಗಬಹುದು ಎಂದು ಹೇಳಿದ ಕುಮಾರಸ್ವಾಮಿ, ಶಾಸಕ ಜಿ.ಟಿ.ದೇವೇಗೌಡ ಪಕ್ಷ ತೊರೆಯುವ ವಿಚಾರದಲ್ಲಿ ಪ್ರತಿಕ್ರಿಯಿಸಿ, ಎರಡು ವರ್ಷದ ಹಿಂದೆಯೇ ಪಕ್ಷದಿಂದ ದೂರ ಸರಿದಿದ್ದೇನೆ ಎಂದು ಅವರೇ ಹೇಳಿದ್ದಾರೆ. ಈಗ ಒಂದು ನೆಪ ಹೇಳಿ ಹೋಗೋಕೆ ಮುಂದಾಗಿದ್ದಾರೆ. ದ್ರಾಕ್ಷಿ ಕೈಗೆಟಕುದಿದ್ದಾಗ ನರಿ ಹೇಳುವ ಕಥೆಯಂತಾಗಿದೆ. ಈಗ ನಮ್ಮಿಂದ ಹೊರ ಹೋಗುವುದಾದರೆ 2008 ರಲ್ಲಿ ಯಾವ ಕಾರಣಕ್ಕಾಗಿ ಬಿಜೆಪಿಗೆ ಹೋದರು ಎಂದು ಶಾಸಕ ಜಿಟಿಡಿಗೆ ಟಾಂಗ್‌ ಕೊಟ್ಟರು.

ಜೆಡಿಎಸ್ ದುಡ್ಡಿಗಾಗಿ ರಾಜಕಾರಣ ಮಾಡ್ತಾರೆ

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ದುಡ್ಡು ವಸೂಲಿಗಾಗಿ ಕರ್ನಾಟಕಕ್ಕೆ ಬರುತ್ತಾರೆಂಬ ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್, ಜೆಡಿಎಸ್ ನವರು ದುಡ್ಡಿಗಾಗಿ ರಾಜಕಾರಣ ಮಾಡುತ್ತಾರೆ.

ಅದು ಜೆಡಿಎಸ್ ಸಂಸ್ಕೃತಿ. ಹಳದಿ ರೋಗದವರಿಗೆ ನೋಡಿದ್ದೆಲ್ಲಾ ಹಳದಿಯಾಗಿ ಕಾಣಿಸುತ್ತದೆ. ಇವರು ರಾಜ್ಯವನ್ನು, ದೇಶವನ್ನು ಆಳಿದವರು. ಇವರಿಗೆ ಎಲುಬು, ನಾಲಿಗೆ ಸರಿಯಾಗಿದ್ದರೇ ಜೆಡಿಎಸ್ ಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ಟಾಂಗ್ ಕೊಟ್ಟರು.