ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ಹರಿಹಾಯ್ದ ಸಾರಾ ಮಹೇಶ್ ; ಬಟ್ಟೆ ಬ್ಯಾಗ್ ಹೆಸರಲ್ಲಿ ಭ್ರಷ್ಟಾಚಾರ, ಭಾರೀ ಕಿಕ್ ಬ್ಯಾಕ್ ಆರೋಪ

03-09-21 01:31 pm       Headline Karnataka News Network   ಕರ್ನಾಟಕ

ಮೈಸೂರು ಜಿಲ್ಲಾಧಿಕಾರಿ ಆಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಮುಖಂಡ ಸಾರಾ ಮಹೇಶ್ ಮತ್ತೊಂದು ಆರೋಪ ಮಾಡಿದ್ದಾರೆ.

ಮೈಸೂರು, ಸೆ.3: ಮೈಸೂರು ಜಿಲ್ಲಾಧಿಕಾರಿ ಆಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಮುಖಂಡ ಸಾರಾ ಮಹೇಶ್ ಮತ್ತೊಂದು ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಸಾರಾ ಮಹೇಶ್, ಮೈಸೂರು ಜಿಲ್ಲೆಗೆ ಬಂದ ಎಂಟು ಕೋಟಿ ಎಸ್‌ಎಸ್‌ಸಿ ಅನುದಾನವನ್ನು ರೋಹಿಣಿ ದುರ್ಬಳಕೆ ಮಾಡಿದ್ದಾರೆ‌. ಪ್ಲಾಸ್ಟಿಕ್ ಮುಕ್ತ ಮೈಸೂರು ಮಾಡುವ ನೆಪದಲ್ಲಿ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ‌

ಪ್ಲಾಸ್ಟಿಕ್ ಬದಲು ಬಟ್ಟೆ ಬ್ಯಾಗ್ ಖರೀದಿಸಲಾಗಿದ್ದು ಭಾರೀ ಭ್ರಷ್ಟಾಚಾರ ನಡೆಸಲಾಗಿದೆ. ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಹೀಗೆ ಯಾವುದೇ ಆಡಳಿತಾಂಗದ ಅನುಮತಿ ಪಡೆಯದೆ ಬಟ್ಟೆ ಬ್ಯಾಗ್ ಖರೀದಿಸಲಾಗಿದೆ.‌ ಮೈಸೂರು ಪಾಲಿಕೆಯ ಕೌನ್ಸಿಲ್ ಸಭೆಯಲ್ಲೂ ಅನುಮತಿ ಪಡೆದಿಲ್ಲ. ಪಾಲಿಕೆ ಅನುಮತಿ ಪಡೆಯದೆ ಒಟ್ಟು 7.65 ಕೋಟಿ ರೂಪಾಯಿ ಹಣ ಬಳಕೆ ಮಾಡಲಾಗಿದೆ. ಖರೀದಿ ಯೋಜನೆಗೆ ಮೈಸೂರಿನ ಉಪ ವಿಭಾಗಾಧಿಕಾರಿಯೊಬ್ಬರ ಪತಿಯೇ ಗುತ್ತಿಗೆದಾರನಾಗಿದ್ದು ಆತನಿಂದ ಕಿಕ್‌ಬ್ಯಾಕ್ ಪಡೆದು ಅವ್ಯವಹಾರ ನಡೆಸಲಾಗಿದೆ. ಐದು ಕೆ.ಜಿ. ಬ್ಯಾಗ್‌ಗೆ 52 ರೂ.  ಬಿಲ್ ಮಾಡಿದ್ದಾರೆ. ಆದರೆ, ನಾವು ನೇರವಾಗಿ ಖರೀದಿ ಮಾಡಿದರೆ, ಕೇವಲ 13 ರೂ.ಗೆ ಬಟ್ಟೆ ಬ್ಯಾಗ್ ಸಿಗುತ್ತದೆ. ಆದರೆ ಪ್ರತಿ ಬ್ಯಾಗ್‌ಗೆ 52 ರೂಪಾಯಿನಂತೆ ಖರೀದಿ ಮಾಡಿದ್ದಾರೆ. ಒಟ್ಟು 14,71,458 ಬ್ಯಾಗ್‌ಗಳ ಖರೀದಿ  ಮಾಡಿದ್ದು ಇದರ ವಾಸ್ತವ ಬೆಲೆ‌ 1,47,14,586 ರೂ. ಆಗುತ್ತದೆ. ಆದರೆ 7.65 ಕೋಟಿಯಷ್ಟು ಬಿಲ್ ಮಾಡಲು ಹೊರಟಿದ್ದಾರೆ. ಬರೋಬ್ಬರಿ ಆರು ಕೋಟಿಗೂ ಅಧಿಕ ಭ್ರಷ್ಟಾಚಾರ ನಡೆದಿದೆ ಎಂದು ಸಾರಾ ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ. 

ಕರ್ನಾಟಕದ ತೆರಿಗೆ ಹಣ ಆಂಧ್ರದಲ್ಲಿ ಆಸ್ತಿ ಮಾಡುವವರ ಪಾಲಾಗ್ತಿದೆ. ಈ ಭ್ರಷ್ಟಾಚಾರ ಮುಚ್ಚಿ ಹಾಕಿಕೊಳ್ಳಲು ಸಿಎಂ ಮನೆಗೆ ಹೋಗಿದ್ದಾರೆಯೇ ಎಂದು ಪ್ರಶ್ನೆ ಮಾಡಿರುವ ಸಾರಾ ಮಹೇಶ್, ಇವತ್ತೇ ಈ ಬಗ್ಗೆ ಸಿಎಂ ಮತ್ತು ಸಿಎಸ್ ಅವರನ್ನು ಭೇಟಿ ಮಾಡ್ತೀನಿ. ಸಿಂಧೂರಿ ಅವರನ್ನ ಅಮಾನತ್ತಿನಲ್ಲಿಟ್ಟು ತನಿಖೆ ಮಾಡದಿದ್ರೆ ಧರಣಿ ಕೂರ್ತೀನಿ. ಇಂತಹ ದಕ್ಷತೆ ಇಲ್ಲದ ಅಪ್ರಾಮಾಣಿಕ ಅಧಿಕಾರಿಯನ್ನ ನೇಮಕ ಮಾಡಬೇಡಿ ಎಂದು ಹೇಳಿದ್ದೆ. ಆದರೆ ಇವರು ಕೇಳಲಿಲ್ಲ. ಸ್ವಿಮ್ಮಿಂಗ್ ಪೂಲ್, ಜಿಮ್, ಕಟ್ಟಡ ನವೀಕರಣದ ಹಣವನ್ನ ಅವರಿಂದಲೇ ಭರಿಸುವಂತೆ ಒತ್ತಾಯ ಮಾಡಿದ್ದೇನೆ‌. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನ ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ. 

ಇನ್ನು ಈ ಬ್ಯಾಗ್ ಸರಬರಾಜು ಮಾಡಿರುವ ಗುತ್ತಿಗೆದಾರ ಈಗ ಅಳುತ್ತಿದ್ದಾನೆ. ಇಂತಹ ಭ್ರಷ್ಟ ಅಧಿಕಾರಿಯನ್ನ‌ ನಾವು ಇಟ್ಕೊಂಡಿದ್ದಕ್ಕೆ ನಾವು ಕ್ಷಮೆ ಕೇಳ್ತೀವಿ. ಇವರು ನಿಜವಾಗ್ಲೂ ಐಎಎಸ್ ಮಾಡಿದ್ದಾರಾ.. ಅಥವಾ ಬೇರೆ ಯಾರದ್ದಾದರೂ ಅಂಕಪಟ್ಟಿ ತಂದು ಐಎಎಸ್ ಪಾಸ್ ಮಾಡಿದ್ರಾ ಎಂದು ವಾಗ್ದಾಳಿ ನಡೆಸಿದ ಅವರು, ನಿಮಗೆ ಐಷಾರಾಮಿ ಜೀವನ ಮಾಡಲು ನಿಮಗೆ ಸಾರ್ವಜನಿಕರ ಹಣ ಬೇಕೇ ಎಂದು ಪ್ರಶ್ನೆ ಮಾಡಿದರು. ಈ ಕುರಿತ ಬಿಲ್ ಅನ್ನು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ  ತಡೆ ಹಿಡಿದಿದ್ದಾರೆ. ಮೂರ್ನಾಲ್ಕು ದಿನದಲ್ಲಿ ಈ ಬಗ್ಗೆ ಕ್ರಮ ಆಗದಿದ್ರೆ ಮುಖ್ಯ ಕಾರ್ಯದರ್ಶಿ ಕಚೇರಿ ಮುಂದೆ ಧರಣಿ ಕೂರ್ತೀನಿ. ಇವರ ವಿರುದ್ಧ ಕ್ರಿಮಿನಲ್ ಕೇಸ್ ಬುಕ್ ಮಾಡಿ ತನಿಖೆ ಮಾಡಬೇಕು. ಇವರು ಎಲ್ಲೆಲ್ಲಿ ಕೆಲಸ ಮಾಡಿದ್ದಾರೆ,  ಅಲ್ಲೆಲ್ಲಾ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಬೇಕು‌. ಮುಖ್ಯ ಕಾರ್ಯದರ್ಶಿಗಳೇ ನಿಮ್ಮ ರಕ್ಷಣೆ ಇದೆ ಅಂತ ಊರು ತುಂಬಾ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನಿಮ್ಮ ಮೇಲೆ ನಂಬಿಕೆ ಇದೆ , ಕ್ರಮ ಕೈಗೊಳ್ಳಿ. ಮೈಸೂರಿನ ಜನ ಒಳ್ಳೆಯ ಅಧಿಕಾರಿಗಳಿಗೆ ಕೈ ಮುಗಿತೀವಿ. ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಪಾಠ ಆಗಬೇಕು ಎಂದು ಒತ್ತಾಯ ಮಾಡ್ತೀವಿ ಎಂದು ಹೇಳಿದರು.

Sa Ra Mahesh makes fresh allegation against Rohini Sindhuri says complete corruption revealed in Mysuru. Exposes with documents.