ಗಾಳಿ, ಮಳೆಗೆ ಮಗುಚಿಬಿದ್ದ ದೋಣಿ; ಮೂವರು ಮೀನುಗಾರರ ರಕ್ಷಣೆ

05-09-21 10:19 pm       Headline Karnataka News Network   ಕರ್ನಾಟಕ

ಗಾಳಿಸಹಿತ ಭಾರಿ ಮಳೆಗೆ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯೊಂದು ಮಗುಚಿಬಿದ್ದಿತ್ತು.

ಉಡುಪಿ, ಸೆ.5: ಗಾಳಿಸಹಿತ ಭಾರಿ ಮಳೆಗೆ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯೊಂದು ಮಗುಚಿಬಿದ್ದಿತ್ತು. ಇದರಲ್ಲಿದ್ದ ಮೂವರು ಮೀನುಗಾರರನನ್ನು ಕಂಚುಗೋಡು ಸಮೀಪದ ಕಡಲಿನಲ್ಲಿ ರಕ್ಷಿಸಲಾಗಿದೆ.

ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ನಿವಾಸಿ ರಾಮ ಖಾರ್ವಿ (65), ನಾಗರಾಜ ಖಾರ್ವಿ (38) ಮತ್ತು ವಿನಯ ಖಾರ್ವಿ (30) ಪ್ರಾಣಾಪಾಯದಿಂದ ಪಾರಾದ ಮೀನುಗಾರರು.

ಈ ಮೂವರು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದ ವೇಳೆ ಭಾರಿ ಗಾಳಿ, ಮಳೆ ಮತ್ತು ಅಲೆಗಳ ಹೊಡೆತದಿಂದ ದೋಣಿ ಕಂಚುಗೋಡು ಕಿನಾರೆ ಸಮೀಪ ಸಮುದ್ರದಲ್ಲಿ ಮಗುಚಿತು. ಈ ವಿಷಯ ತಿಳಿದು ಕೂಡಲೇ ಸಮೀಪದಲ್ಲಿದ್ದ ದೋಣಿಗಳಲ್ಲಿದ್ದವರು ಮೂವರನ್ನು ರಕ್ಷಿಸಿ ದಡ ಸೇರಿಸಿದ್ದಾರೆ.

ದೋಣಿಯಲ್ಲಿದ್ದ ಇಂಜಿನ್, ಬಲೆ ಹಾಗೂ ಇನ್ನಿತರ ವಸ್ತುಗಳು ಮುಳುಗಿ 4.5ಲಕ್ಷ ರೂ. ನಷ್ಟವಾಗಿದೆ ಎಂದು ವಿನಯ ಖಾರ್ವಿ ಕರಾವಳಿ ಕಾವಲು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Udupi Heavy winds and rains fishing boat Capsized three fishermen rescued. 4.5 lakh estimated.