ಹಿಂದು ಧರ್ಮ ಗುತ್ತಿಗೆ ಪಡೆದವರಿಗೆ ದೇವಸ್ಥಾನ ಕೆಡವಿದಾಗ ಹಿಂದುತ್ವ ನೆನಪಾಗಲಿಲ್ಲವೇ ? ಬಿಜೆಪಿ ನಾಯಕರಿಗೆ ತಿವಿದ ಸಿದ್ದರಾಮಯ್ಯ  

11-09-21 09:14 pm       Headline Karnataka News Network   ಕರ್ನಾಟಕ

ನಂಜನಗೂಡಿನಲ್ಲಿ ಪುರಾತನ ದೇವಸ್ಥಾನವನ್ನು ಕೆಡವಿ ಹಾಕಿರುವುದು ಖಂಡನೀಯ ಕೃತ್ಯ ಎಂದು ಮಾಜಿ ಸಿಎಂ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು, ಸೆ.11: ನಂಜನಗೂಡಿನಲ್ಲಿ ಪುರಾತನ ದೇವಸ್ಥಾನವನ್ನು ಕೆಡವಿ ಹಾಕಿರುವುದು ಖಂಡನೀಯ ಕೃತ್ಯ. ಇದೊಂದು ಧರ್ಮಸೂಕ್ಷ್ಮ ವಿಷಯವಾಗಿದ್ದು ಇಂತಹ ನಿರ್ಧಾರ ಕೈಗೊಳ್ಳುವ ಮೊದಲು ಬಿಜೆಪಿ ರಾಜ್ಯ ಸರಕಾರವು ಸ್ಥಳೀಯರ ಜೊತೆ ಮಾತುಕತೆ ನಡೆಸಬೇಕಾಗಿತ್ತು ಎಂದು ಮಾಜಿ ಸಿಎಂ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ನ್ಯಾಯಾಲಯದ ಆದೇಶವಿದ್ದರೂ ಅದನ್ನು ತರಾತುರಿಯಲ್ಲಿ ಅನುಷ್ಠಾನಿಸುವ ಮುನ್ನ ಪರಿಣಾಮದ ಬಗ್ಗೆ ಯೋಚನೆ ಮಾಡಬೇಕಾಗಿತ್ತು. ಹಿಂದು ಧರ್ಮದ ಗುತ್ತಿಗೆ ಪಡೆದವರ ರೀತಿ ಮಾತನಾಡುವ ಬಿಜೆಪಿಗೆ ಇಂತಹ ದುಸ್ಸಾಹಸ ಮಾಡುವ ಮೊದಲು ಹಿಂದುತ್ವದ ರಕ್ಷಣೆಯ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ದೇವಸ್ಥಾನ ಕೆಡವಿ ಹಾಕಿದ ಘಟನೆಯ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಷ್ಪಕ್ಷಪಾತ ತನಿಖೆ ನಡೆಸಿ ಕಾರಣಕರ್ತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೊಸ ನಿವೇಶನವನ್ನು ಮಂಜೂರು ಮಾಡಿ ಸರ್ವರನ್ನೂ ವಿಶ್ವಾಸಕ್ಕೆ ಪಡೆದು ಹೊಸ ದೇವಸ್ಥಾನವನ್ನು ಕಟ್ಟಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ನಂಜನಗೂಡಿನಲ್ಲಿ ರಸ್ತೆ ಅಗಲೀಕರಣದ ನೆಪದಲ್ಲಿ ಹಳೆಯ ದೇವಸ್ಥಾನ ಒಂದನ್ನು ಅಧಿಕಾರಿಗಳು ಸ್ಥಳೀಯರ ವಿರೋಧದ ಮಧ್ಯೆಯೇ ಇಂದು ನೆಲಸಮ ಮಾಡಿದ್ದರು. ಈ ಬಗ್ಗೆ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿದ್ದರೂ, ಸ್ಥಳೀಯ ಶಾಸಕರಾದಿಯಾಗಿ ಬಿಜೆಪಿ ನಾಯಕರು ಸರಕಾರದ ಕ್ರಮವನ್ನು ಸಮರ್ಥಿಸಿದ್ದರು. ಆದರೆ, ಘಟನೆಯನ್ನು ಖಂಡಿಸಿರುವ ಸಿದ್ದರಾಮಯ್ಯ ದೇವಸ್ಥಾನ ಕೆಡವಿದ ವಿಡಿಯೋ ಜೊತೆಗೆ ಟ್ವೀಟ್ ಮಾಡಿ ಜನರ ಗಮನ ಸೆಳೆದಿದ್ದಾರೆ. 

Former Karnataka Chief Minister Siddaramaiah on Saturday condemned the demolition of an 'ancient' Hindu temple at Nanjangud in Mysuru district and said the BJP government should have consulted the local residents before taking such an action 'which has hurt the religious sentiments of the people".