ಭಾರತೀಯ ಮಾಧ್ಯಮಗಳು ಜಾಗತಿಕ ಮಟ್ಟಕ್ಕೆ ಏರಬೇಕು; ನರೇಂದ್ರ ಮೋದಿ

08-09-20 08:12 pm       Dhruthi Anchan - Correspondent   ಕರ್ನಾಟಕ

ಭಾರತದ ಉತ್ಪನ್ನಗಳು ಮಾತ್ರವಲ್ಲದೇ ಭಾರತದ ಧ್ವನಿಯೂ ಸಹ ಜಗತ್ತಿನ ಮೂಲೆ ಮೂಲೆವರೆಗೂ ತಲುಪಬೇಕು ಎಂದು ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

ನವದೆಹಲಿ, ಸೆಪ್ಟೆಂಬರ್.8: ಭಾರತೀಯ ಮಾಧ್ಯಮಗಳು ಜಾಗತಿಕ ಮಟ್ಟಕ್ಕೆ ಹೋಗಬೇಕಾದ ಅಗತ್ಯತೆ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇಂದು ಜೈಪುರದ ಪತ್ರಿಕಾ ಗೇಟ್ ಉದ್ಘಾಟಿಸಿದ ಪ್ರಧಾನಿ ಪತ್ರಿಕಾ ಗ್ರೂಪ್​ನ ಚೇರ್​ಮನ್ ಗುಲಾಬ್ ಕೊಠಾರಿ ಬರೆದ ಎರಡು ಪುಸ್ತಕಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿ ನಮ್ಮ ಸುದ್ದಿಪತ್ರಿಕೆಗಳು ಮತ್ತು ಮ್ಯಾಗಜಿನ್​ಗಳು ಅಂತರಾಷ್ಟ್ರಿಯ ಮನ್ನಣೆ ಗಳಿಸಬೇಕು. ಈ ಡಿಜಿಟ್ ಯುಗದಲ್ಲಿ ಡಿಜಿಟಲ್ ಮೂಲಕವೇ ಜಗತ್ತಿನಾದ್ಯಂತ ಬೆಳೆಯಬೇಕು. ಭಾರತದ ವಿದ್ಯಾಲಯಗಳು ವಿದೇಶಗಳಲ್ಲಿ ನೀಡುವಂತೆ ಸಾಹಿತ್ಯ ಪ್ರಶಸ್ತಿಗಳನ್ನು ನೀಡಬೇಕು. ಇದು ಈಗ ಭಾರತಕ್ಕೆ ಅವಶ್ಯ ಮತ್ತು ಅನಿವಾರ್ಯ ಎಂದು ಹೇಳಿದರು.

ಕೊರೋನಾ ಕಾಲದಲ್ಲಿ ಮಾಧ್ಯಮಗಳು ಅಭೂತ ಪೂರ್ವವಾಗಿ ಕೆಲಸ ಮಾಡಿವೆ. ಜನರಲ್ಲಿ ಹೆಚ್ಚಿನ ಅರಿವು ಮೂಡಿಸಿವೆ. ಹಾಗೇ ಮಾಧ್ಯಮಗಳು ಸರ್ಕಾರಗಳು, ಆಡಳಿತದ ತಪ್ಪುಗಳನ್ನು ತೋರಿಸಿ, ಟೀಕಿಸುವ ಮೂಲಕ ಎಚ್ಚರಿಸುವ ಕೆಲಸವನ್ನೂ ಮಾಡುತ್ತಿವೆ. ಅಂಥ ಟೀಕೆಗಳಿಂದ ಪ್ರತಿಯೊಬ್ಬರೂ ಪಾಠ ಕಲಿಯುವ ಅಗತ್ಯವಿದೆ. ಸಕಾರಾತ್ಮಕವಾಗಿ ಟೀಕೆಗಳನ್ನು ಮಾಡುವುದರಿಂದ, ಅದರಿಂದ ಕಲಿಯುವ ಪಾಠಗಳಿಂದ ಭಾರತದ ಪ್ರಜಾಪ್ರಭುತ್ವ ಇನ್ನಷ್ಟು ಸದೃಢಗೊಳ್ಳುತ್ತದೆ ಎಂದು ಹೇಳಿದರು. ಹಾಗೇ ಈಗಿನ ಯುವಪೀಳಿಗೆ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಹೆಚ್ಚೆಚ್ಚು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು