ಬಿಜೆಪಿ ತಾಲಿಬಾನ್ ಆಗ್ತಿದ್ದರೆ ವಿಪಕ್ಷ ನಾಯಕರನ್ನು ನೇತು ಹಾಕ್ತಿದ್ವಿ.. ಸಿದ್ರಾಮಯ್ಯರ ಪಂಚೆ ಹೇಗಿರ್ತಿತ್ತು ; ಸಿಟಿ ರವಿ ವ್ಯಂಗ್ಯ

28-09-21 11:11 am       Headline Karnataka News Network   ಕರ್ನಾಟಕ

ಬಿಜೆಪಿಯವರು ತಾಲಿಬಾನಿಗಳಿದ್ದಂತೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

ಬೆಂಗಳೂರು, ಸೆ.28: ಬಿಜೆಪಿಯವರು ತಾಲಿಬಾನಿಗಳಿದ್ದಂತೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು. ಸಿದ್ದರಾಮಯ್ಯ ಹೆಸರು ಸುಳ್ಳುರಾಮಯ್ಯ ಅಂದಾಗಬೇಕಿತ್ತು. ವಯಸ್ಸಾದ್ಮೇಲೆ ಕಣ್ಣಿನ ಪೊರೆ ಜಾಸ್ತಿ ಆದಂತೆ, ಅವರಿಗೆ ಯಾವ ಯಾವ ಪೊರೆ ಬೆಳೆದಿದೆಯೋ ಗೊತ್ತಿಲ್ಲ. ಇಲ್ಲಿ ಬಿಜೆಪಿ ತಾಲಿಬಾನ್ ರೀತಿ ಆಗುತ್ತಿದ್ರೆ, ಸಿದ್ದರಾಮಯ್ಯ ಪರಿಸ್ಥಿತಿ ಏನು ಆಗ್ತಿತ್ತು. ಅಫ್ಘಾನಿಸ್ತಾನದಲ್ಲಿ ವಿಪಕ್ಷಗಳನ್ನು ಕ್ರೇನ್ ನಲ್ಲಿ ನೇತು ಹಾಕಿದ್ದಾರೆ. ಅದರಂತೆ ಇಲ್ಲಿ ಬಿಜೆಪಿ ತಾಲಿಬಾನ್ ಆಗಿದ್ರೆ ಅವರ ಸ್ಥಿತಿಗತಿ ಏನು ಆಗ್ತಿತ್ತು. ಇವರನ್ನು ಕ್ರೇನ್ ಮೂಲಕ ನೇತಾಡಿಸ್ತಿದ್ರೆ ಅವ್ರ ಪಂಚೇ ಏನು ಆಗ್ತಿತ್ತು ಎಂದು ವ್ಯಂಗ್ಯವಾಡಿದರು. 

ಅಕಸ್ಮಾತ್ ಬಿಜೆಪಿ ಸರ್ಕಾರ ತಾಲಿಬಾನ್ ಆಗಿದಿದ್ರೆ, ವಿಪಕ್ಷ ನಾಯಕರನ್ನು ಕ್ರೇನ್ ಮೂಲಕ ನೇತು ಹಾಕ್ತಿದ್ವಿ. ಆದರೆ ನಾವು ತಾಲಿಬಾನ್ ಗಳಲ್ಲ. ಎಲ್ಲಿವರೆಗೂ ಆರ್ ಎಸ್ ಎಸ್ ಇರುತ್ತೋ, ಅಲ್ಲಿಯವರೆಗೂ ಸಿದ್ದರಾಮಯ್ಯ ಸೇರಿದಂತೆ ಅವ್ರ ಮಕ್ಕಳು, ಮೊಮ್ಮಕ್ಕಳು ಮಜಬೂತ್ ಆಗಿರ್ತಾರೆ. ಆರ್ ಎಸ್ ಎಸ್ ನವರಿಂದಲೇ ಸ್ವಾತಂತ್ರ್ಯ ಇರೋದು. ತಾಲಿಬಾನ್ ಜೊತೆ ಕಾಂಗ್ರೆಸ್ ಗೆ ಸಂಬಂಧ ಇರೋದು ಎಂದು ವಾಗ್ದಾಳಿ ನಡೆಸಿದರು. 

ಇನ್ನಾದ್ರೂ ಅರಾಜಕತೆ ಸೃಷ್ಟಿಸೋದನ್ನು ಬಿಡಲಿ 

ಕೃಷಿ ಕಾಯಿದೆ ವಿರೋಧಿಸಿ ರೈತರಿಂದ ಭಾರತ್ ಬಂದ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ನಿರೀಕ್ಷಿತ ಪ್ರಮಾಣದಲ್ಲಿ ಬಂದ್ ಬೆಂಬಲಿಸದೇ ಬಂದ್ ವಿಫಲಗೊಂಡಿದೆ. ಜನ ಮೋದಿಯವರ ಪರ ನಿಂತಿದ್ದಾರೆ. ನನಗೂ ಒಂದು ಆತಂಕ ಇತ್ತು. ನೂರಕ್ಕೂ ಹೆಚ್ಚು ಸಂಘಟನೆಗಳು ಹಾಗೂ ಬಿಜೆಪಿ ವಿರೋಧಿ ಪಕ್ಷಗಳು ನಿಂತಾಗ ಒಂದು ಹಕ್ಕಿ ಕೂಡ ಹಾರಾಡದ ರೀತಿ ಸಂದರ್ಭ ಸೃಷ್ಟಿಸುತ್ತಾರೋ ಅನ್ನುವ ಆತಂಕ ಇತ್ತು. ಆದರೆ ಅವ್ರ ಪ್ರಯತ್ನ ಸಫಲ ಆಗಿಲ್ಲ ಎಂದು ವ್ಯಂಗ್ಯವಾಡಿದರು. 

ಈಗಲಾದ್ರೂ ರೈತರ ಹೆಸರಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸೋದನ್ನು ಬಿಡಬೇಕು. ಸುಧಾರಣೆ ತರೋದೆ ಅಪರಾಧ ಎಂಬ ಬಿಂಬಿಸಲು ಪ್ರಯತ್ನ ಮಾಡ್ತಿದ್ದಾರೆ. ಐದು ರಾಜ್ಯಗಳ ಚುನಾವಣೆ ವರೆಗೂ ಇದೇ ಸ್ಪಿರಿಟ್ ನಲ್ಲಿ ಪ್ರಯತ್ನ ಮಾಡಬಹುದು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ಮಲಗಿದಾಗ ಗೊತ್ತಾಗುತ್ತೆ ಎಂದರು. ಕಾಂಗ್ರೆಸ್ ನ ನಿಲುವು ರೈತರ ಪರ ನಿಲುವಲ್ಲ. ರೈತರನ್ನು ಹಿಂಸಿಸುವ ದಲ್ಲಾಳಿಗಳ ಪರ ನಿಲುವು. ಈ ಮೂರು ಕೃಷಿ ಮಸೂದೆಯಲ್ಲಿ ರೈತರ ವಿರೋಧಿ ಅಂತಾ ಯಾವುದಿದೆ ಹೇಳಿ. ರಾಜಕೀಯ ಪ್ರೇರಿತ ಪಟ್ಟಾಭದ್ರ ಹಿತಾಸಕ್ತಿಗಳು ಮಾಡುತ್ತಿರುವ ಬಿಜೆಪಿ ವಿರುದ್ಧದ ಹೋರಾಟ ಇದು ಎಂದು ಆರೋಪಿಸಿದರು. 

ಕುರಬೂರು ಶಾಂತಕುಮಾರ್, ಕೋಡಿಹಳ್ಳಿ ಚಂದ್ರಶೇಖರ್ ಗೆ ಕೇಳಲು ಬಯಸುತ್ತೇನೆ. ಅವರಿಬ್ಬರು ಪ್ರೊ.ನಂಜುಂಡಸ್ವಾಮಿ ಅವರ ಹಳೇ ಕ್ಯಾಸೆಟ್ ಹಾಕಿಕೊಂಡು ಕೇಳಲಿ. ನಾವು ಬೆಳೆದ ಬೆಳೆಯ ಬೆಲೆಯನ್ನು ಅವನ್ಯಾರು ನಿರ್ಧಾರ ಮಾಡೋನು ಅಂದಿದ್ರು, ಅದನ್ನ ಇವರೆಲ್ಲ ಮರೆತುಬಿಟ್ಟರಾ..? ರೈತ ತನ್ನ ಬೆಳೆಗೆ ಒಪ್ಪಂದ ಮಾಡಿಕೊಳ್ಳೋದು ತಪ್ಪಾ..? ಕಾಯ್ದೆಯ ಲೋಪ ಏನು ಅಂತಾ ಹೇಳಲಿ ಅವರು ಎಂದು ಸಿಟಿ ರವಿ ಸವಾಲೆಸೆದರು.‌

ct ravi said if bjp acted like taliban we would have hung siddaramaiah to crane.