39 ಕೋಟಿ ರೂ. ತೆರಿಗೆ ಬಾಕಿ ; ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಬೀಗ ಜಡಿದ ಅಧಿಕಾರಿಗಳು, ಕಡೆಗೂ ದಂಡ ಎತ್ತಿಕೊಂಡ ಬಿಬಿಎಂಪಿ !

30-09-21 03:01 pm       Headline Karnataka News Network   ಕರ್ನಾಟಕ

ಬಿಬಿಎಂಪಿ ಅಧಿಕಾರಿಗಳು ಕಡೆಗೂ ದಂಡ ಪ್ರಯೋಗ ಮಾಡಿದ್ದಾರೆ. 39 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವ ಪ್ರತಿಷ್ಠಿತ ಮಂತ್ರಿ ಮಾಲ್‍ ಕಟ್ಟಡಕ್ಕೆ ಅಧಿಕಾರಿಗಳು ಬೀಗ ಹಾಕಿದ್ದಾರೆ

ಬೆಂಗಳೂರು, ಸೆ.30 : ಬಿಬಿಎಂಪಿ ಅಧಿಕಾರಿಗಳು ಕಡೆಗೂ ದಂಡ ಪ್ರಯೋಗ ಮಾಡಿದ್ದಾರೆ. 39 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವ ಪ್ರತಿಷ್ಠಿತ ಮಂತ್ರಿ ಮಾಲ್‍ ಕಟ್ಟಡಕ್ಕೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ತೆರಿಗೆ ಕಟ್ಟುವವರೆಗೆ ಮಾಲ್ ಓಪನ್ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. 

ಕಳೆದ ಮೂರು ವರ್ಷಗಳಿಂದ ಮಂತ್ರಿ ಮಾಲ್ ತೆರಿಗೆ ಕಟ್ಟಿರಲಿಲ್ಲ. ಬಡ್ಡಿ ಸೇರಿ ಒಟ್ಟು 39 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ. ಇಂದು ಪಾಲಿಕೆ ಅಧಿಕಾರಿಗಳು ವಸೂಲಿಗೆ ತೆರಳಿದ್ದರು. ತೆರಿಗೆ ಪಾವತಿಯಾಗದ ಕಾರಣ ಬೀಗ ಜಡಿಯಲಾಗಿದೆ ಎಂದು ಮಲ್ಲೇಶ್ವರ ಪಶ್ಚಿಮ ಡಿಸಿಪಿ ಪ್ರಸನ್ನ ಕುಮಾರ್ ಮಾಹಿತಿ ನೀಡಿದ್ದಾರೆ

2017ರಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಬಾಕಿ ಪಾವತಿಸುವಂತೆ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತರು ನೋಟಿಸ್ ನೀಡಿದ್ದರು. ಬಳಿಕ 5 ಕೋಟಿ ರೂ. ಪಾವತಿಸಿ, ಉಳಿದ ಹಣವನ್ನು ಅಕ್ಟೋಬರ್ ಅಂತ್ಯದ ವೇಳೆ ಕಟ್ಟುವುದಾಗಿ ಭರವಸೆ ನೀಡಿದ್ದರು. ಆದರೆ, ಸೆಪ್ಟೆಂಬರ್ ಒಳಗಡೆ ತೆರಿಗೆ ಪಾವತಿಸದಿದ್ದರೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು.‌

ಅಭಿಷೇಕ್ ಡೆವಲಪರ್ಸ್ ಹೆಸರಿನಲ್ಲಿ ಮಂತ್ರಿ ಮಾಲ್ ಬಿಬಿಎಂಪಿಗೆ ತೆರಿಗೆ ಪಾವತಿ ಮಾಡುತ್ತಾ ಬಂದಿದೆ. ಆದರೆ, 2017ರಿಂದ ಇದುವರೆಗೂ ಆಸ್ತಿ ತೆರಿಗೆ ಕಟ್ಟಿಲ್ಲ. ಮಂತ್ರಿ ಮಾಲ್ ಗೆ ನೋಟಿಸ್ ಕೊಟ್ಟು ಬಿಬಿಎಂಪಿ ಸುಸ್ತಾಗಿದೆ. ತೆರಿಗೆ ಕಟ್ಟದಿದ್ದರೆ ಆಸ್ತಿ ಮುಟ್ಟುಗೋಲು ಹಾಕುವ ಎಚ್ಚರಿಕೆಯನ್ನು ಸಹ ನೀಡಲಾಗಿತ್ತು. ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಅತೀ ದೊಡ್ಡ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಮಂತ್ರಿ ಮಾಲ್ ಮೊದಲ ಸ್ಥಾನದಲ್ಲಿದೆ.

ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ, ಕಳೆದ 3 ವರ್ಷದಿಂದ ಬಡ್ಡಿ ಸೇರಿ ಒಟ್ಟು 39 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದರು. ಈ ಪೈಕಿ ಡಿಡಿ ಮೂಲಕ 5 ಕೋಟಿ ರೂ.ಗಳಷ್ಟು ಪಾವತಿ ಮಾಡಿದ್ದಾರೆ. ಕೊರೊನಾ ನೆಪ ಹೇಳಿದ್ದರು. ಸೆಪ್ಟೆಂಬರ್ ಒಳಗಡೆ ಪೂರ್ತಿ ತೆರಿಗೆ ಕಟ್ಟುವಂತೆ ನೋಟಿಸ್ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.

Malleshwaram Mantri Mall Fails to Pay Property Tax BBMP Officilas Close the Mall.