ವಿನಾಯಕ ಬಾಳಿಗಾ ಕೊಲೆ ಪ್ರಕರಣ ; ಎಸ್ ಪಿಪಿ ರವೀಂದ್ರನಾಥ್ ಕಾಮತ್ ನೇಮಕ ಆದೇಶ ರದ್ದುಪಡಿಸಿದ ಹೈಕೋರ್ಟ್

01-10-21 11:12 am       Headline Karnataka News Network   ಕರ್ನಾಟಕ

ಮಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಲು ಹಿರಿಯ ವಕೀಲ ರವೀಂದ್ರನಾಥ ಕಾಮತ್ ಅವರನ್ನು ನೇಮಿಸಿದ್ದ ರಾಜ್ಯ ಸರಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಬೆಂಗಳೂರು, ಅ.1 : ಮಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಲು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ (ಎಸ್‌ಪಿಪಿ) ಹಿರಿಯ ವಕೀಲ ರವೀಂದ್ರನಾಥ ಕಾಮತ್ ಅವರನ್ನು ನೇಮಿಸಿದ್ದ ರಾಜ್ಯ ಸರಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ರಾಜ್ಯ ಸರಕಾರ 2016 ರಲ್ಲಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕ ಸದಸ್ಯ ಪೀಠವು ಈ ಆದೇಶ ಮಾಡಿದೆ.

ಹೊಸ ವಿಶೇಷ ಸರಕಾರಿ ಅಭಿಯೋಜಕರನ್ನು ನೇಮಿಸಲು ಅರ್ಜಿಯಲ್ಲಿ 6ನೇ ಪ್ರತಿವಾದಿಯಾಗಿರುವ ಬಾಳಿಗಾ ಸಹೋದರಿ ಅನುರಾಧಾ ಬಾಳಿಗಾ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲು ಮುಕ್ತ ಅವಕಾಶ ಹೊಂದಿದ್ದಾರೆ. ಒಂದೊಮ್ಮೆ ಬಾಳಿಗಾ ಸಹೋದರಿ ಅನುರಾಧಾ ಮನವಿ ಸಲ್ಲಿಸಿದರೆ, ಅರ್ಜಿಯನ್ನು ಕಾನೂನು ಪ್ರಕಾರ ಪರಿಗಣಿಸಬೇಕು ಎಂದು ರಾಜ್ಯ ಸರಕಾರಕ್ಕೆ ಪೀಠ ನಿರ್ದೇಶಿಸಿದೆ.

ಮಂಗಳೂರಿನ ಕೊಡಿಯಾಲ್‌ ಬೈಲ್‌ನಲ್ಲಿ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರನ್ನು 2016ರ ಮಾ.21ರ ಬೆಳಗಿನ ಜಾವ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಲು ರವೀಂದ್ರನಾಥ್ ಕಾಮತ್ ಅವರನ್ನು ನೇಮಿಸಿ 2016ರ ಡಿ.21ರಂದು ರಾಜ್ಯ ಸರಕಾರ ಆದೇಶ ಹೊರಡಿಸಿತ್ತು.

ವಿನಾಯಕ ಬಾಳಿಗಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿನಿಂದಲೂ ನ್ಯಾಯಾಲಯಗಳಲ್ಲಿ ದೂರುದಾರರ ಪರವಾಗಿ ಮತ್ತು ಮೃತ ಕುಟುಂಬದವರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳಲ್ಲಿ ರವೀಂದ್ರನಾಥ್ ಕಾಮತ್ ವಾದ ಮಂಡಿಸಿದ್ದಾರೆ. ಕೊಲೆಯ ನಂತರ ನಡೆದ ಹಲವು ಪ್ರತಿಭಟನೆಗಳಲ್ಲಿ ಕಾಮತ್ ಭಾಗವಹಿಸಿದ್ದರು. ಮೃತರ ತಂದೆ ನಡೆಸಿದ ಸುದ್ದಿಗೋಷ್ಠಿಯಲ್ಲೂ ಪಾಲ್ಗೊಂಡು ನನ್ನ ವಿರುದ್ಧ ಹೇಳಿಕೆ ನೀಡಿದ್ದರು. ಮೃತನ ಕುಟುಂಬದವರ ಮನವಿ ಮೇರೆಗೆ ರವೀಂದ್ರನಾಥ್ ಅವರನ್ನೇ ಎಸ್‌ಪಿಪಿಯಾಗಿ ನೇಮಿಸಲಾಗಿದೆ. ಹೀಗಾಗಿ, ಕಾಮತ್‌ ಎಸ್‌ಪಿಪಿಯಾಗಿ ಮುಂದುವರಿದರೆ ನಿಷ್ಪಕ್ಷಪಾತ ವಿಚಾರಣೆ ಸಾಧ್ಯವಿಲ್ಲ. ಆದ್ದರಿಂದ, ಅವರ ನೇಮಕಾತಿ ರದ್ದುಪಡಿಸಬೇಕು ಎಂದು ಆರೋಪಿ ನರೇಶ್ ಶೆಣೈ ಕೋರಿದ್ದರು.

RTI Activist Vinayak Baliga killing Karntaka HC Orders for Removal of SSP Ravindranath Kamath