ಗೋಕಾಕ್ ಫಾಲ್ಸ್ ಮಧ್ಯೆ ಪ್ರಪಾತಕ್ಕೆ ಬಿದ್ದರೂ ಬದುಕಿ ಬಂದ ಯುವಕ ! ಕಾರ್ಯಾಚರಣೆ ನಿಲ್ಲಿಸಿ ಹೋದವರಿಗೇ ಶಾಕ್ ! 

03-10-21 04:06 pm       Headline Karnataka News Network   ಕರ್ನಾಟಕ

ಅದೃಷ್ಟ ಇದ್ದಲ್ಲಿ ಪಾತಾಳಕ್ಕೆ ಬಿದ್ದರೂ, ಬದುಕಿ ಬರ್ತಾರೆ ಎನ್ನುವ ಮಾತಿದೆ. ಅದೇ ಮಾತಿನಂತೆ, ಇಲ್ಲೊಬ್ಬ ಯುವಕ ಪ್ರಪಾತವನ್ನೇ ಮೈವೆತ್ತಿ ನಿಂತ ಗೋಕಾಕ್ ಫಾಲ್ಸ್ ಮಧ್ಯೆ 140 ಅಡಿ ಕಂದಕಕ್ಕೆ ಬಿದ್ದರೂ ಪವಾಡ ಸದೃಶ ಬದುಕಿ ಬಂದಿದ್ದಾನೆ. 

ಬೆಳಗಾವಿ, ಅ.3: ಅದೃಷ್ಟ ಇದ್ದಲ್ಲಿ ಪಾತಾಳಕ್ಕೆ ಬಿದ್ದರೂ, ಬದುಕಿ ಬರ್ತಾರೆ ಎನ್ನುವ ಮಾತಿದೆ. ಅದೇ ಮಾತಿನಂತೆ, ಇಲ್ಲೊಬ್ಬ ಯುವಕ ಪ್ರಪಾತವನ್ನೇ ಮೈವೆತ್ತಿ ನಿಂತ ಗೋಕಾಕ್ ಫಾಲ್ಸ್ ಮಧ್ಯೆ 140 ಅಡಿ ಕಂದಕಕ್ಕೆ ಬಿದ್ದರೂ ಪವಾಡ ಸದೃಶ ಬದುಕಿ ಬಂದಿದ್ದಾನೆ. 

ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್‌ನಲ್ಲಿ ಘಟನೆ ನಡೆದಿದ್ದು ಕಲ್ಲು ಬಂಡೆಗಳ ನಡುವೆ 140 ಅಡಿ ಕಂದಕಕ್ಕೆ‌ ಬಿದ್ದರೂ ಯುವಕ ಬದುಕಿದ್ದು ಸ್ಥಳೀಯರಲ್ಲಿ ಅಚ್ಚರಿ ಸೃಷ್ಟಿಸಿದೆ. ‌

ಬೆಳಗಾವಿ ಪೇಟೆಯಲ್ಲಿ ಬ್ಯಾಂಕ್ ನೌಕರನಾಗಿರುವ ಪ್ರದೀಪ ಸಾಗರ್ ಹೀಗೆ ದುರಂತದಲ್ಲಿ ಬದುಕಿ ಬಂದ ಯುವಕ. ಶನಿವಾರ ಸ್ನೇಹಿತರ ಜೊತೆಗೆ ಗೋಕಾಕ್ ಫಾಲ್ಸ್ ವೀಕ್ಷಣೆಗೆ ಬಂದಿದ್ದ ವೇಳೆ ಘಟನೆ ನಡೆದಿತ್ತು. ಕೂಡಲೇ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಗೋಕಾಕ ಪೊಲೀಸರು ಹಾಗೂ ಅಗ್ನಿಶಾಮಕ ದಳದ‌ ಸಿಬ್ಬಂದಿ ರಾತ್ರಿ ವೇಳೆಯೇ ಕಾರ್ಯಾಚರಣೆ ನಡೆಸಿದ್ದಾರೆ. ‌

ಆದರೆ, ರಾತ್ರಿ ಕತ್ತಲು ಕವಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ‌‌ಸ್ಥಗಿತಗೊಳಿಸಲಾಗಿತ್ತು. ಯುವಕನ ಮೇಲಿನ ಭರವಸೆಯೂ ಕ್ಷೀಣವಾಗಿತ್ತು. 140 ಅಡಿ ಆಳದ ಕಂದಕಕ್ಕೆ  ಬಿದ್ದಿದ್ದ ಕಾರಣ ಯುವಕ ಪ್ರಜ್ಞೆ ಕಳೆದುಕೊಂಡಿದ್ದ. ಫೋನ್ ರಿಂಗ್ ಆಗ್ತಿದ್ರೂ ರಿಸಿವ್ ಮಾಡುತ್ತಿರಲಿಲ್ಲ. ಕಾರ್ಯಾಚರಣೆ ಸ್ಥಗಿತ ಆಗಿದ್ದರಿಂದ ಇಡೀ ರಾತ್ರಿ ಕಂದಕದಲ್ಲಿಯೇ ಉಳಿದಿದ್ದ ಪ್ರದೀಪ್ ಸಾಗರ್, ಬೆಳಗ್ಗೆ 4 ಗಂಟೆಗೆ ಪ್ರಜ್ಞೆ ಬಂದಾಗ ತಾನೇ ಸ್ನೇಹಿತರಿಗೆ ಫೋನ್ ಮಾಡಿದ್ದಾನೆ. 

ಬಳಿಕ ಗೋಕಾಕದ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್ ಹಾಗೂ ಪೊಲೀಸರು ಸೇರಿ ಪ್ರದೀಪನ ರಕ್ಷಣೆ ಮಾಡಿದ್ದಾರೆ. ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ತಲೆಗೆ ಸಣ್ಣ ಪುಟ್ಟ ಗಾಯ ಆಗಿದ್ದು ಬಿಟ್ಟರೆ ಸುರಕ್ಷಿತವಾಗಿದ್ದಾನೆ. ಕಲ್ಲು ಬಂಡೆಗಳ ನಡುವೆ ಪ್ರಪಾತಕ್ಕೆ ಬಿದ್ದರೂ ಬದುಕಿ ಬಂದಿದ್ದು ಅಚ್ಚರಿಗೆ ಕಾರಣವಾಗಿದೆ.

Man survives after falling 140 feet tall from Gokak falls in Belagavi. He was rescued by the fire brigade team. He was found alive.