ನೈತಿಕ ಪೊಲೀಸ್‌ ಸಿಎಂ ಹೇಳಿಕೆಗೆ ಜಾಲತಾಣದಲ್ಲಿ ಆಕ್ರೋಶ ; ರಿಸೈನ್ ಸಿಎಂ ಟ್ವಿಟರ್ ನಲ್ಲಿ ಟ್ರೆಂಡ್ ! ಬಿಜೆಪಿ ಮುಖ್ಯಮಂತ್ರಿಯೇ ಎಂದು ಟೀಕೆ 

14-10-21 06:16 pm       Headline Karnataka News Network   ಕರ್ನಾಟಕ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರು ಭೇಟಿ ವೇಳೆ ನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿ ನೀಡಿದ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರು, ಅ.14: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರು ಭೇಟಿ ವೇಳೆ ನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿ ನೀಡಿದ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ‌ಟ್ವಿಟರ್ ನಲ್ಲಿ 'ರಿಸೈನ್ ಕರ್ನಾಟಕ ಸಿಎಂ, 'ಸಿಎಂ ಸಪೋರ್ಟ್ ಮಾರಲ್ ಪೊಲೀಸಿಂಗ್' ಎಂಬ ಹ್ಯಾಷ್‌ಟ್ಯಾಗ್ ಮತ್ತು ಪ್ರತಿಕ್ರಿಯೆಗಳು ಟ್ರೆಂಡ್ ಸೃಷ್ಟಿಸಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹಿತ ಹಲವರು ಮುಖ್ಯಮಂತ್ರಿ ಹೇಳಿಕೆಯನ್ನು ಖಂಡಿಸಿದ್ದಾರೆ.

ಅ.13ರಂದು ಕರಾವಳಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿ ಹಿಂದು ಸಂಘಟನೆಗಳ ದಾಳಿಯನ್ನು ಪರೋಕ್ಷವಾಗಿ ಸಮರ್ಥಿಸಿ ಹೇಳಿಕೆ ನೀಡಿದ್ದರು. ನೈತಿಕತೆಗೆ ಧಕ್ಕೆಯಾದಾಗ ಆಕ್ಷನ್, ರಿಯಾಕ್ಷನ್ ಆಗುವುದು ಸಹಜ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಸಮಾಜದಲ್ಲಿ ನಾವೆಲ್ಲರೂ ಜವಾಬ್ದಾರಿ ಹೊಂದಿರಬೇಕಿ. ಸಮಾಜದಲ್ಲಿ ಹಲವಾರು ಭಾವನೆಗಳ ಜನರಿದ್ದಾರೆ. ಈ ಭಾವನೆಗಳಿಗೆ ಧಕ್ಕೆ ಆಗದ ಹಾಗೆ ನಾವು ನಡೆದುಕೊಳ್ಳಬೇಕಾಗುತ್ತದೆ. ಆ ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆಕ್ಷನ್ ಮತ್ತು ರಿಯಾಕ್ಷನ್ ಆಗುತ್ತದೆ ಎಂದು ಹೇಳಿದ್ದರು ಸಿಎಂ. ‌

ಇದಕ್ಕೆ ಆಕ್ಷೇಪಿಸಿ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ನಾಳೆಯಿಂದ ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ಅನೈತಿಕ ಪೊಲೀಸ್‌ಗಿರಿಯನ್ನು ಯಾರೇ ನಡೆಸಲಿ, ಅವರದ್ದು ಮುಖವಾಡ ಮಾತ್ರ. ಅಸಲಿ ಮುಖ ಅಂತಹ ಕೃತ್ಯಕ್ಕೆ ಪ್ರಚೋದನೆ, ಉತ್ತೇಜನ ಮತ್ತು ರಕ್ಷಣೆ ನೀಡುವ ಕೆಲಸ ನಿಮ್ಮದು ಎಂದು ತಿಳಿದುಕೊಳ್ಳಬಹುದೇ? ಎಂದು ಟ್ವೀಟ್ ಮಾಡಿದ್ದಾರೆ. ಆ್ಯಕ್ಷನ್ ಗೆ ರಿಯಾಕ್ಷನ್ ಇರುತ್ತದೆ ಎಂದು ಹೇಳುವ ಮೂಲಕ ಯಾವ ಕಾಡಿನ ನ್ಯಾಯವನ್ನು ಪಾಠ ಮಾಡುತ್ತಿದ್ದೀರಿ ಬೊಮ್ಮಾಯಿ ಅವರೇ..  ಪೊಲೀಸ್ ಇಲಾಖೆಯನ್ನು ರದ್ದು ಮಾಡಿ ನಿಮ್ಮ ಪರಿವಾರಕ್ಕೆ ಕಾನೂನು ಪಾಲನೆಯ ಕೆಲಸವನ್ನು ವಹಿಸಿಕೊಡುವ ದುಷ್ಟ ಉದ್ದೇಶವೇನಾದರೂ ನಿಮಗೆ ಇದೆಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 

ಇದರ ಬೆನ್ನಲ್ಲೇ ಸಿಎಂ ಹೇಳಿಕೆಯನ್ನು ಹಲವರು ಟೀಕಿಸಿದ್ದಾರೆ. ಸಬಿತ್ ಬಜ್ಪೆ ಎಂಬವರು ಟ್ವೀಟ್ ಮಾಡಿ, "ಸ್ವತಃ ಮುಖ್ಯಮಂತ್ರಿಗಳೇ ನೀಡಿರುವ ಹೇಳಿಕೆ ಸಾಕಷ್ಟು ಡ್ಯಾಮೇಜ್ ಉಂಟುಮಾಡಿದೆ. ನೀವು ಮುಖ್ಯಮಂತ್ರಿ ಆಗಿರುವುದು ಕರ್ನಾಟಕ ರಾಜ್ಯಕ್ಕೋ ಅಥವಾ ಬಿಜೆಪಿ ಪಕ್ಷಕ್ಕೋ? ನೈತಿಕ ಪೊಲೀಸ್‌ಗಿರಿಯನ್ನು ಸಮರ್ಥಿಸುವ ಮೂಲಕ ಯುವಕರ ಮಧ್ಯೆ ಜಗಳ ಹಚ್ಚುತ್ತಿದ್ದೀರಿ ಎಂದು ಹೇಳಿದ್ದಾರೆ. 

"ಪೊಲೀಸ್ ಇಲಾಖೆಯನ್ನು ರದ್ದು ಮಾಡಿ ಕಾನೂನು ಮತ್ತು ಸುವ್ಯವಸ್ಥೆ ಜವಾಬ್ದಾರಿಯನ್ನು ಆರ್‌ಎಸ್‌ಗೆ ವಹಿಸುವ ಉದ್ದೇಶವೇನಾದರೂ ಇದೆಯೇ? ಜಂಗಲ್ ರಾಜ್ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದೀರಾ? ಎಂದು ಶಶಿಗೌಡ ನಿರವಾಣಿ ಎಂಬವರು ಪ್ರಶ್ನಿಸಿದ್ದಾರೆ.

Karnataka Chief Minister Basavaraj Bommai has triggered a controversy on Wednesday when he responded to questions on moral policing carried out by vigilante groups in the purported cause of protection of Hindu culture in the Dakshina Kannada region of the state. In a media interaction at the Bajpe airport in Mangaluru, the BJP CM seemed to justify moral policing when asked a question on growing incidents of right-wing vigilantes impinging on the privacy of people to prevent inter-community relationships.