ಮಂಡ್ಯ, ಮೈಸೂರಿನಲ್ಲಿ ಅಭಿಮಾನಿಗಳ ಆಕ್ರಂದನ, ಹೆದ್ದಾರಿ ತಡೆ ಯತ್ನ, ಚಿತ್ರಮಂದಿರಕ್ಕೆ ಕಲ್ಲು ; ಬಾಗಲಕೋಟದಲ್ಲಿ ಥಿಯೇಟರ್ ನುಗ್ಗಿ ದಾಂಧಲೆ

29-10-21 06:15 pm       Bengaluru, HK Desk   ಕರ್ನಾಟಕ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಮಂಡ್ಯ, ಮೈಸೂರಿನಲ್ಲಿ ಅಭಿಮಾನಿಗಳು ಹೆದ್ದಾರಿಯನ್ನು ತಡೆದು ನೋವು ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಅ.29: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಮಂಡ್ಯ, ಮೈಸೂರಿನಲ್ಲಿ ಅಭಿಮಾನಿಗಳು ಹೆದ್ದಾರಿಯನ್ನು ತಡೆದು ನೋವು ವ್ಯಕ್ತಪಡಿಸಿದ್ದಾರೆ. ಬಲವಂತದಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಯತ್ನಿಸಿದ್ದಾರೆ.

ಮಂಡ್ಯದಲ್ಲಿ ಹೆದ್ದಾರಿಯನ್ನು ತಡೆದು ವಾಹನಗಳನ್ನು ನಿಲ್ಲಿಸಲು ಯತ್ನಿಸಿದ ಅಭಿಮಾನಿಗಳನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ, ರಂಪಾಟ ನಡೆದಿದ್ದು, ಪೊಲೀಸರು ಮತ್ತು ರೊಚ್ಚಿಗೆದ್ದ ಅಭಿಮಾನಿಗಳ ನಡುವೆ ವಾಗ್ವಾದ ನಡೆದಿದೆ. ವಾಹನ ನಿಲ್ಲಿಸಿ, ರಸ್ತೆ ಬಂದ್ ಮಾಡಿದ ಒಬ್ಬಾತನನ್ನು ಪೊಲೀಸರು ತೆಗೆದು ಪೊಲೀಸ್ ಜೀಪಿಗೆ ತಳ್ಳಿದ ಘಟನೆ ನಡೆದಿದ್ದು, ಉದ್ರಿಕ್ತರು ಸುತ್ತುವರಿದ ಬಳಿಕ ಬಿಡುಗಡೆಗೊಳಿಸಿದ್ದಾರೆ.

ಮಂಡ್ಯದಲ್ಲಿ ಅಭಿಮಾನಿಗಳ ರಂಪಾಟ ಹೆಚ್ಚಿದ್ದು, ಪೇಟೆಯ ಉದ್ದಕ್ಕೂ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ಮಂಡ್ಯದ ಸಂಜಯ ವೃತ್ತದಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಕಾರ್ಯಕರ್ತರು ಸೂಚನೆ ನೀಡುತ್ತಲೇ ವ್ಯಾಪಾರಸ್ಥರು ಶಟರ್ ಎಳೆದು ಅಂಗಡಿ ಬಂದ್ ಮಾಡಿದ್ದಾರೆ. ಮೈಸೂರಿನ ಕೆ.ಆರ್ ಸರ್ಕಲ್ ಬಳಿ ಅಭಿಮಾನಿಗಳು ಪುನೀತ್ ಫೋಟೋ ಮುಂದಿಟ್ಟು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಣ್ಣಾ ಮತ್ತೆ ಹುಟ್ಟಿ ಬನ್ನಿ ಎನ್ನುತ್ತಾ ಕಣ್ಣೀರು ಹಾಕಿದ್ದಾರೆ. ಮೈಸೂರಿನ ವುಡ್ ಲ್ಯಾಂಡ್ ಚಿತ್ರಮಂದಿರದಲ್ಲಿ ಶಿವರಾಜ್ ಕುಮಾರ್ ಅಭಿನಯದ ಚಿತ್ರ ಪ್ರದರ್ಶನ ನಡೆಯುತ್ತಿದ್ದಾಗಲೇ ಪುನೀತ್ ಅಭಿಮಾನಿಗಳು ಎಂಟ್ರಿ ಕೊಟ್ಟು ಥಿಯೇಟರ್ ಬಂದ್ ಮಾಡಿಸಿದ್ದಾರೆ. ಚಿತ್ರ ಮಂದಿರಕ್ಕೆ ಕಲ್ಲು ಹೊಡೆದು ಬಂದ್ ಮಾಡುವಂತೆ ಒತ್ತಾಯಿಸಿದ್ದಾರೆ. ಆನಂತರ, ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿ ಪ್ರೇಕ್ಷಕರನ್ನು ಸಿಬಂದಿ ಹೊರಕ್ಕೆ ಕಳಿಸಿದ್ದಾರೆ.

ಇತ್ತ ವಿಜಯಪುರದಲ್ಲಿ ಪುನೀತ್ ರಾಜ್ ಕುಮಾರ್ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ತಿಳಿಯುತ್ತಲೇ ಸಿನಿಮಾ ನೋಡುತ್ತಿದ್ದವರು ಎದ್ದು ಹೋಗಿದ್ದಾರೆ. ಜನರು ಚಿತ್ರ ವೀಕ್ಷಣೆಯನ್ನು ಬಿಟ್ಟು ತೆರಳುತ್ತಲೇ ಅಲ್ಲಿನ ಸಿಬಂದಿ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿ, ಥಿಯೇಟರ್ ಬಂದ್ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಭಜರಂಗಿ ಚಿತ್ರ ಪ್ರದರ್ಶನ ನಡೆಯುತ್ತಿದ್ದಾಗಲೇ ಪುನೀತ್ ಅಭಿಮಾನಿಗಳು ಥಿಯೇಟರ್ ನುಗ್ಗಿ ದಾಂಧಲೆ ನಡೆಸಿದ್ದಾರೆ. ಕಲ್ಲೆಸೆದು ಗಾಜು ಒಡೆದು ಹಾಕಿದ್ದು, ಗಲಾಟೆ ಎಬ್ಬಿಸಿದ್ದಾರೆ.

ಕೋಲಾರ, ಚಿತ್ರದುರ್ಗದಲ್ಲಿಯೂ ಕೆಲವು ಅಂಗಡಿಗಳನ್ನು ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಬಂದ್ ಮಾಡಿ, ಸಂತಾಪ ಸೂಚಿಸಿದ್ದಾರೆ. ಹುಬ್ಬಳ್ಳಿ, ಚಿತ್ರದುರ್ಗ, ಶಿವಮೊಗ್ಗ, ಕೋಲಾರ, ಚಾಮರಾಜನಗರ ಸೇರಿದಂತೆ ಹಲವೆಡೆ ಪ್ರಮುಖ ವೃತ್ತದಲ್ಲಿ ಸೇರಿದ ಅಭಿಮಾನಿಗಳು, ಕರವೇ ಕಾರ್ಯಕರ್ತರು ಅಗಲಿದ ನಟನ ನೆನೆದು ಕಣ್ಣೀರು ಹಾಕಿದ್ದಾರೆ. ಶ್ರದ್ಧಾಂಜಲಿ ಅರ್ಪಿಸಿ, ಮತ್ತೆ ಹುಟ್ಟಿ ಬರುವಂತೆ ಪ್ರಾರ್ಥಿಸಿದ್ದಾರೆ. 

Puneeth Rajkumar passes away due to a heart attack at 46 turmoil in Mandya and Mysuru. Puneeth Rajkumar Death News Updates: Popular Kannada actor Puneeth Rajkumar has died after suffering a massive heart attack on Friday morning. Puneeth Rajkumar was rushed to the hospital after the heart attack. Dr Ranganath Nayak of the Vikram Hospital in Bengaluru said Puneeth Rajkumar was admitted at 11.30 am on Friday.