ಅಪ್ಪು ಸಾವಿನಿಂದ ತೀವ್ರ ಶಾಕ್ ; ತಮಿಳು, ತೆಲುಗು, ಮಲಯಾಳಂ ಸ್ಟಾರ್ ನಟರ ಕಂಬನಿ, ಕಂಠೀರವದಲ್ಲಿ ದರ್ಶನಕ್ಕೆ ವ್ಯವಸ್ಥೆ, ಅಭಿಮಾನಿ ಕುಸಿದು ಸಾವು!

29-10-21 07:55 pm       Bengaluru, HK Desk   ಕರ್ನಾಟಕ

ಪವರ್ ಸ್ಟಾರ್ ಪುನೀತ್ ನಿಧನದಿಂದ ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ತೀವ್ರ ಶಾಕ್ ಗೆ ಒಳಗಾಗಿದೆ. ತಮಿಳು, ತೆಲುಗು, ಮಲಯಾಳಂ, ಹಿಂದಿ ಚಿತ್ರರಂಗದ ದಿಗ್ಗಜರೆಲ್ಲ ಪುನೀತ್ ಸಾವಿನಿಂದ ಆಘಾತಗೊಂಡಿದ್ದಾಗಿ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು, ಅ.29: ಪವರ್ ಸ್ಟಾರ್ ಪುನೀತ್ ನಿಧನದಿಂದ ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ತೀವ್ರ ಶಾಕ್ ಗೆ ಒಳಗಾಗಿದೆ. ತಮಿಳು, ತೆಲುಗು, ಮಲಯಾಳಂ, ಹಿಂದಿ ಚಿತ್ರರಂಗದ ದಿಗ್ಗಜರೆಲ್ಲ ಪುನೀತ್ ಸಾವಿನಿಂದ ಆಘಾತಗೊಂಡಿದ್ದಾಗಿ ಟ್ವೀಟ್ ಮಾಡಿದ್ದಾರೆ. ರಜನಿಕಾಂತ್, ಮೋಹನ್ ಲಾಲ್, ಕಮಲಹಾಸನ್ ಸೇರಿದಂತೆ ಖ್ಯಾತ ನಟರು ತೀವ್ರ ಕಂಬನಿ ಮಿಡಿದಿದ್ದಾರೆ.

ಪುನೀತ್ ಸಾವು ತಿಳಿಯುತ್ತಿದ್ದಂತೆ ಬೆಂಗಳೂರು ಮಹಾನಗರದಲ್ಲಿ ಶೋಕ ಸಾಗರವೇ ಮಡುಗಟ್ಟಿದೆ. ವ್ಯಾಪಾರಸ್ಥರು ತಮ್ಮ ಅಂಗಡಿ, ವಾಣಿಜ್ಯ ಸಂಕೀರ್ಣಗಳನ್ನು ಮುಚ್ಚಿ ಗೌರವ ಸೂಚಿಸಿದ್ದಾರೆ. ಜನರು ತಮ್ಮ ಕುಟುಂಬದಲ್ಲಿಯೇ ಏನೋ ಆಗಿದೆ ಅನ್ನುವ ರೀತಿ ಶಾಕ್ ಆಗಿದ್ದಾರೆ. ಎಂದಿನಂತೆ ಮಾರುಕಟ್ಟೆಗಳಿಗೆ ಜನರು ಹೋಗದೇ ದೂರ ಉಳಿದಿದ್ದಾರೆ. ಬೆಂಗಳೂರು ನಗರ ವ್ಯಾಪಾರಸ್ಥರ ಸಂಘದವರು ವ್ಯಾಪಾರ ಸ್ಥಗಿತಗೊಳಿಸಿ ಗೌರವ ಅರ್ಪಿಸಿದ್ದಾರೆ.

ಈ ನಡುವೆ, ಪುನೀತ್ ಪಾರ್ಥಿವ ಶರೀರವನ್ನು ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗಿದೆ. ಇದಕ್ಕೂ ಮುನ್ನ ಪಾರ್ಥಿವ ಶರೀರವನ್ನು ಕಂಠೀರವ ಸ್ಟೇಡಿಯಂನತ್ತ ಭಾರೀ ಜನಸಾಗರದ ಜೊತೆ ಮೆರವಣಿಗೆಯಲ್ಲಿ ತರಲಾಯ್ತು. ಸಂಜೆ 7 ಗಂಟೆ ಸುಮಾರಿಗೆ ಆಂಬುಲೆನ್ಸ್ ನಲ್ಲಿ ತರಲಾಗಿದ್ದು, ಕ್ಯಾಂಡಲ್ ಹಿಡಿದ ಅಭಿಮಾನಿಗಳು, ಕರವೇ ಕಾರ್ಯಕರ್ತರು ನಡೆದುಕೊಂಡೇ ಹಿಂಬಾಲಿಸಿದ್ದಾರೆ. ಮಲ್ಯ ಆಸ್ಪತ್ರೆಯ ಬಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ. ರಾತ್ರಿಯಿಡೀ ಜಾಗರಣೆ ನಡೆಸಲು ತಯಾರಾಗಿದ್ದಾರೆ.

ಇದೇ ವೇಳೆ, ಚಾಮರಾಜನಗರ ಜಿಲ್ಲೆಯ ಮರೂರು ಗ್ರಾಮದಲ್ಲಿ ಪುನೀತ್ ಅಭಿಮಾನಿಯೊಬ್ಬ ಟಿವಿ ನೋಡುತ್ತಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮರೂರು ಗ್ರಾಮದ ನಿವಾಸಿ ಮುನಿಯಪ್ಪ ಆಘಾತದಿಂದ ಹೃದಯಾಘಾತಕ್ಕೊಳಗಾಗಿದ್ದು ಸಾವು ಕಂಡಿದ್ದಾರೆ. ಪುನೀತ್ ಸಾವಿನಿಂದಾಗಿ ಶೋಕಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಯೂನಿವರ್ಟಿಸಿ ವ್ಯಾಪ್ತಿಯಲ್ಲಿ ನಡೆಯುವ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಶನಿವಾರ ಮತ್ತು ಸೋಮವಾರದ ಪರೀಕ್ಷೆಗಳನ್ನು ಮಂಗಳವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.

ನಟ ಪುನೀತ್ ಕಾಫಿನಾಡಿನ ಅಳಿಯ

ಪುನೀತ್ ರಾಜಕುಮಾರ್ ಕಾಫಿನಾಡಿನ ಹೆಣ್ಮಗಳನ್ನು ವರಿಸಿದ್ದರು. ಅವರ ಪತ್ನಿ ಅಶ್ವಿನಿ ಚಿಕ್ಕಮಗಳೂರು ಜಿಲ್ಲೆಯ ಭಾಗಮನೆಯವರು. ಹೀಗಾಗಿ ಕಾಫಿನಾಡಿಗೂ ಪುನೀತ್ ಅವರಿಗೂ ಅವಿನಾಭಾವ ನಂಟು ಇತ್ತು. ಅಶ್ವಿನಿ ತಂದೆ ರೇವನಾಥ್ ಮತ್ತು ತಾಯಿ ವಿಜಯಾ ಭಾಗಮನೆಯವರಾಗಿದ್ದು ಈಗ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ವರ್ಷಕ್ಕೊಮ್ಮೆ ಊರಿಗೆ ಬರುತ್ತಿದ್ದರು. ಪುನೀತ್ ಆಗಿಂದಾಗ್ಗೆ ಕಾಫಿನಾಡಿಗೆ ಬಂದು ಇದ್ದುಕೊಂಡು ಹೋಗುತ್ತಿದ್ದರು.

ಪುನೀತ್ ನಿಧನದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಅ.29ರಿಂದ 31ರ ರಾತ್ರಿ 12 ಗಂಟೆ ವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ ಎಂದು ಬೆಂಗಳೂರು ಕಮಿಷನರ್ ಕಮಲ್ ಪಂತ್ ತಿಳಿಸಿದ್ದಾರೆ.

ಪುನೀತ್ ನಿಧನಕ್ಕೆ ಪ್ರಧಾನಿ ಮೋದಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ತಮ್ಮ ಜೊತೆಗೆ ನಿಂತು ತೆಗೆಸಿಕೊಂಡಿದ್ದ ಪುನೀತ್ ದಂಪತಿಯ ಫೋಟೋವನ್ನು ಟ್ವೀಟ್ ಮಾಡಿರುವ ಮೋದಿ, ಅತ್ಯಂತ ಪ್ರತಿಭಾನ್ವಿತ ನಟನನ್ನು ವಿಧಿ ನಮ್ಮಿಂದ ಕಿತ್ತುಕೊಂಡಿದೆ. ಇದು ಸಾಯುವ ವಯಸ್ಸಲ್ಲ. ಮುಂದಿನ ಜನಾಂಗ ನಿಮ್ಮ ಕೆಲಸಗಳನ್ನು ಖಂಡಿತವಾಗಿ ನೆನಪಿಟ್ಟುಕೊಳ್ಳಲಿದೆ ಎಂದು ಹೇಳಿದ್ದಾರೆ. 

ಅಪ್ಪು ಅಮರರಾಗಿಯೇ ಉಳಿಯಲಿದ್ದಾರೆ – ಯಡಿಯೂರಪ್ಪ

ಕನ್ನಡಿಗರ ಹೃದಯದಲ್ಲಿ ಅಪ್ಪು ಅಮರರಾಗಿಯೇ ಉಳಿಯಲಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಸ್ಮರಿಸಿದ್ದಾರೆ. ಕಿರಿಯ ವಯಸ್ಸಿನಲ್ಲಿ ಪುನೀತ್ ನಮ್ಮನ್ನು ಅಗಲಿದ್ದು ಮನಸ್ಸಿಗೆ ತೀವ್ರ ಆಘಾತ ಮೂಡಿಸಿದೆ. ನಿಮ್ಮ ನೆನಪು ಸದಾ ಚಿರಾಯು ಎಂದು ಟ್ವೀಟ್ ಮಾಡಿದ್ದಾರೆ.  

Condolences pour in for Actor Puneeth Rajkumar. Karnataka minister Basavaraj Bommai has announced a state funeral for Kannada superstar Puneeth Rajkumar who died of a heart attack on Friday. The actor’s family has decided to keep his mortal remains at the Kanteerava Stadium till Saturday evening for his fans to pay their last respects. In an official statement, the state announced that the last rites of the beloved actor will be done with state honours.