ಪಟಾಕಿ ತರಲು ಹೊರಟಿದ್ದ ಯುವಕನ ಅಪಹರಿಸಿ, 50 ಲಕ್ಷ ಹಣಕ್ಕೆ ಡಿಮ್ಯಾಂಡ್ ; ಹಣ ನೀಡಲು ನಿರಾಕರಿಸಿದ್ದಕ್ಕೆ ಕೊಲೆ, ದಿಢೀರ್ ಶ್ರೀಮಂತರಾಗಲು ಹೋದವರಿಗೆ ಬಿತ್ತು ಕೈಕೋಳ !

06-11-21 06:32 pm       Headline Karnataka News Desk   ಕರ್ನಾಟಕ

ದಿಢೀರ್ ಶ್ರೀಮಂತರಾಗಬೇಕೆಂಬ ಹುಚ್ಚು ಕನಸಿನಲ್ಲಿದ್ದ ಇಬ್ಬರು ಹರಾಮಿಗಳು ತಾವು ಕೆಲಸ ಮಾಡುತ್ತಿದ್ದ ಕಂಟ್ರಾಕ್ಟರ್ ಒಬ್ಬರ ಮಗನನ್ನೇ ಅಪಹರಿಸಿ, 50 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದಲ್ಲದೆ ಕೊನೆಗೆ ಹರೆಯದ ಯುವಕನನ್ನೇ ಕೊಂದು ಮುಗಿಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರು, ನ.6: ದಿಢೀರ್ ಶ್ರೀಮಂತರಾಗಬೇಕೆಂಬ ಹುಚ್ಚು ಕನಸಿನಲ್ಲಿದ್ದ ಇಬ್ಬರು ಹರಾಮಿಗಳು ತಾವು ಕೆಲಸ ಮಾಡುತ್ತಿದ್ದ ಕಂಟ್ರಾಕ್ಟರ್ ಒಬ್ಬರ ಮಗನನ್ನೇ ಅಪಹರಿಸಿ, 50 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದಲ್ಲದೆ ಕೊನೆಗೆ ಹರೆಯದ ಯುವಕನನ್ನೇ ಕೊಂದು ಮುಗಿಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧಿಸಿ ಪೊಲೀಸರು ಸಯ್ಯದ್ ತಜಾಮುಲ್ ಪಾಶಾ(39) ಮತ್ತು ಸೈಯದ್ ನಾಸಿರ್ (26) ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಕಂಟ್ರಾಕ್ಟ್ ಕೆಲಸ ಮಾಡಿಸುತ್ತಿದ್ದ ಮಣಿ ಎಂಬವರ ಮಗ 21 ವರ್ಷದ ಹುಡುಗ ತರುಣ್ ನ.1ರಂದು ದಿಢೀರ್ ನಾಪತ್ತೆಯಾಗಿದ್ದ. ಸಂಜೆ ಹೊತ್ತಿಗೆ ಪಟಾಕಿ ತರಲೆಂದು ತೆರಳಿದ್ದ ಹುಡುಗ ಕಾಣೆಯಾದ ಬಗ್ಗೆ ಹೆತ್ತವರು ಪೊಲೀಸ್ ದೂರು ದಾಖಲಿಸಿದ್ದರು.

ಹುಡುಗ ಪಟಾಕಿ ತರಲು ತೆರಳುತ್ತಿದ್ದಾಗ ಹಿಂಬಾಲಿಸಿ ಬಂದ ಪರಿಚಯದವರೇ ಆಗಿದ್ದ ಇಬ್ಬರು ಯುವಕರು, ಹುಡುಗನಲ್ಲಿ ಪಟಾಕಿ ಬೇರೊಂದು ಕಡೆಯಲ್ಲಿ ಕಡಿಮೆ ದರಕ್ಕೆ ಸಿಗುತ್ತೆ ಎಂದು ನಂಬಿಸಿದ್ದಾರೆ. ಅಲ್ಲದೆ, ತನ್ನ ತಂಗಿ ಮನೆಯ ಹತ್ತಿರದ ಅಂಗಡಿಯಲ್ಲಿ ಪಟಾಕಿ ಕಡಿಮೆ ದರಕ್ಕೆ ಸಿಗುತ್ತೆ ಅಂತ ನಂಬಿಸಿ ಅಲ್ಲಿಗೆ ಕರೆದೊಯ್ದಿದ್ದಾರೆ. ನಿಗೂಢ ಜಾಗಕ್ಕೆ ತೆರಳಿದ ಕೂಡಲೇ ಆರೋಪಿಗಳು ತರುಣ್ ನನ್ನು ಕೈಕಾಲು ಕಟ್ಟಿದ್ದು ಬಾಯಿಗೆ ಪ್ಲಾಸ್ಟರ್ ಹಾಕಿ, ಬೆದರಿಕೆ ಹಾಕಿದ್ದಾರೆ. ನೀನು ತಂದೆಗೆ ಫೋನ್ ಮಾಡಿ, 50 ಲಕ್ಷ ರೂಪಾಯಿ ನೀಡಲು ಹೇಳುವಂತೆ ಒತ್ತಡ ಹೇರಿದ್ದಾರೆ.

ಆದರೆ ತರುಣ್, ಯುವಕರ ಬೆದರಿಕೆಗೆ ಒಪ್ಪಿರಲಿಲ್ಲ. ಹಾಗಾಗಿ ಕೋಪಗೊಂಡ ಆರೋಪಿಗಳು ಹುಡುಗನ ಕುತ್ತಿಗೆಗೆ ಹಗ್ಗ ಬಿಗಿದು ನೇಣಿಗೇರಿಸಿದ್ದಾರೆ. ಅಂದು ಇಡೀ ರಾತ್ರಿ ಹುಡುಗನ ಶವವನ್ನು ಅದೇ ಕೋಣೆಯಲ್ಲಿ ಇರಿಸಿದ್ದು, ಮರುದಿನ ಒಂದು ಹಳೇ ಗೋಣಿಚೀಲದಲ್ಲಿ ತುಂಬಿಸಿ ನಗರದಲ್ಲಿ ಸುತ್ತಾಡಿದ್ದಾರೆ. ಕೊನೆಗೆ ಆರ್.ಆರ್ ನಗರದಲ್ಲಿ ಹರಿಯುವ ಚರಂಡಿಯಲ್ಲಿ ಗೋಣಿಯನ್ನು ಎಸೆದು ಹೋಗಿದ್ದರು. ಹುಡುಗನನ್ನು ಕೊಂದು ಮುಗಿಸಿದ್ರೂ ಆತನ ತಂದೆಗೆ ಫೋನ್ ಮಾಡಿದ್ದ ಇಬ್ಬರು, ಹಿಂದಿಯಲ್ಲಿ ಮಾತನಾಡುತ್ತಾ 50 ಲಕ್ಷ ಹಣ  ತಂದುಕೊಟ್ಟರೆ ಮಗನನ್ನು ತಂದೊಪ್ಪಿಸುವುದಾಗಿ ಹೇಳಿದ್ದರು. ಮಗ ಜೀವಂತ ಬರಬೇಕೆಂದರೆ ಹಣ ನೀಡುವಂತೆ ಒತ್ತಡ ಹೇರಿದ್ದರು. ಆದರೆ ಕೂಡಲೇ ಎಚ್ಚೆತ್ತ ಹುಡುಗನ ತಂದೆ ಮಣಿ ಪೊಲೀಸರಿಗೆ ವಿಷಯ ಮಟ್ಟಿಸಿದ್ದರು.

ಭಾರತೀ ನಗರ ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದರು. ಅದೇ ವೇಳೆ, ಮಣ್ಣು ಹಿಡಿದಿದ್ದ ಚೀಲದಲ್ಲಿ ಶವ ಪತ್ತೆಯಾಗಿದ್ದನ್ನು ನೋಡಿದ ಕಸ ಹೆಕ್ಕುವ ಮಹಿಳೆಯರು ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಹುಡುಗನ ಶವವನ್ನು ಹೆತ್ತವರ ಜೊತೆ ಸೇರಿ ನೋಡಿದಾಗ ತರುಣ್ ಶವ ಅನ್ನುವುದು ದೃಢಪಟ್ಟಿತ್ತು. ತಂದೆಗೆ ಮಾಡಿದ್ದ ಫೋನ್ ಕರೆಯನ್ನು ಆಧರಿಸಿ, ತನಿಖೆ ನಡೆಸಿದಾಗ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳು ವಿಚಾರಣೆ ವೇಳೆ, ಡ್ರಗ್ಸ್ ಖರೀದಿಸುವುದಕ್ಕಾಗಿ ಹುಡುಗನನ್ನು ಅಪಹರಿಸಿದ್ದಾಗಿ ಹೇಳಿಕೆ ನೀಡಿದ್ದಾರೆ. ಇದಲ್ಲದೆ, ಹುಡುಗನ ತಂದೆ ಮಣಿಯ ಜೊತೆ ಕೆಲಸ ಮಾಡುತ್ತಿದ್ದುದಲ್ಲದೆ ಹಣಕಾಸು ವ್ಯವಹಾರವನ್ನೂ ಸೈಯದ್ ತಾಜಮುಲ್ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಒಂದೇ ದಿನಕ್ಕೆ ಶ್ರೀಮಂತರಾಗಬೇಕೆಂಬ ಹುಚ್ಚು ಕನಸು ಕಟ್ಟಿಕೊಂಡಿದ್ದ ಹರಾಮಿಕೋರರು ದೀಪಾವಳಿ ಸಡಗರದ ಮಧ್ಯೆ ಪಟಾಕಿ ತರಲೆಂದು ಹೊರಟಿದ್ದ ಏನೂ ಅರಿಯದ ಮುಗ್ಧ ಹುಡುಗನನ್ನು ಕೊಂದು ಮುಗಿಸಿದ್ದು ಈಗ ಕಂಬಿ ಎಣಿಸುವಂತಾಗಿದೆ. 

Karnataka police have cracked the kidnap and murder case of a 21-year youth in Bengaluru and arrested two persons in this connection, the police sources said on Saturday November 6. Syed Tajammul Pasha (39) and Syed Nasir (26) have been arrested for the abduction and murder of Tarun, a student of hotel management.