ಶಾಲಾ ಸಮಿತಿ ಆಯ್ಕೆಯ ಗಲಾಟೆ ಕೊಲೆಯಲ್ಲಿ ಅಂತ್ಯ ; 7 ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ !

25-11-21 05:37 pm       HK news Desk   ಕರ್ನಾಟಕ

ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್​​ಡಿಎಂಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ವಿಷಯವಾಗಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಏಳು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಬಾಗಲಕೋಟೆ, ನ 25: ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್​​ಡಿಎಂಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ವಿಷಯವಾಗಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಏಳು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬಾಗಲಕೋಟೆಯ ಶಿರೂರು ಗ್ರಾಮದಲ್ಲಿ 2012ರಲ್ಲಿ ನಡೆದಿದ್ದ ಅಪರಾಧಕ್ಕೆ ಸಂಬಂಧಿಸಿದಂತೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಶಿರೂರು ಗ್ರಾಮದ ನಿವಾಸಿ ಯಲ್ಲಪ್ಪ ಗಾಳಿ(55) ಎಂಬುವರ ಕೊಲೆ ನಡೆದಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಬಾಗಲಕೋಟೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಸಂತೋಷ ಸಿ.ಬಿ. ನ.23 ರಂದು ಏಳು ಜನರಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಲಕ್ಷ್ಮಣ ಗಾಳಿ, ಬಸವರಾಜ ಕಡಿವಾಲ, ಮಲ್ಲಪ್ಪ ಕಡಿವಾಲ, ಲಕ್ಷ್ಮಣ ಕಡಿವಾಲ, ರಾಮಪ್ಪ ಕಡಿವಾಲ, ಸಕ್ರಪ್ಪ ಕಡಿವಾಲ, ಸಿದ್ದಪ್ಪ ಕಡಿವಾಲ ಜೀವಾವಧಿ ಶಿಕ್ಷೆಗೆ ಒಳಗಾದವರು.

ಏನಿದು ಘಟನೆ ;

 ಶಿಕ್ಷೆ ನೀಡಲಾಗಿರುವ ಆರೋಪಿಗಳಲ್ಲೊಬ್ಬರಾದ ಸಕ್ರಪ್ಪ ಎಂಬುವರನ್ನು ಶಿರೂರು ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್​​ಡಿಎಂಸಿ ಅಧ್ಯಕ್ಷರಾಗಿ ಆಯ್ಕೆ ಮಾಡಲು ಇತರ ಆರು ಆರೋಪಿಗಳು ಮುಂದಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಯಲ್ಲಪ್ಪ ಗಾಳಿ ಅವರ ಮನೆಗೆ 2012 ರ ಫೆಬ್ರವರಿ 1 ರ ರಾತ್ರಿ 1 ಗಂಟೆಗೆ ಪೆಟ್ರೋಲ್ ಎರಚಲಾಗಿತ್ತು. ಇಡೀ ಕುಟುಂಬಕ್ಕೆ ಬೆಂಕಿ ಹಚ್ಚಿ ಕೊಲೆಗೈಯ್ಯವ ಉದ್ದೇಶವಿತ್ತು. ಈ ಬೆಂಕಿಯಲ್ಲಿ ಗಂಭೀರವಾಗಿ ಗಾಯಗೊಂಡ ಯಲ್ಲಪ್ಪ, ಆಸ್ಪತ್ರೆಗೆ ದಾಖಲಾಗಿದ್ದರು. ನಂತರ 2013 ರ ಡಿಸೆಂಬರ್​ 4 ಕ್ಕೆ ಮಿರಜ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದ ಅವರು ಸಾವನ್ನಪ್ಪಿದ್ದರು ಎಂದು ಸರ್ಕಾರಿ ಅಭಿಯೋಜಕ ಸುನೀಲ್ ಹಂಜಿ ತಿಳಿಸಿದ್ದಾರೆ.

Bagalkote court sentensed seven accused for killing man over school election issue. The seven has killed a man by burning him on fire.