40 ಶೇ. ಕಮಿಷನ್ ಆರೋಪ ; ಪ್ರಧಾನಿ ಪ್ರಾಮಾಣಿಕ ಆಗಿದ್ದರೆ ಸರಕಾರ ವಜಾ ಮಾಡಬೇಕು - ಸಿದ್ದರಾಮಯ್ಯ

27-11-21 05:46 pm       HK Desk news   ಕರ್ನಾಟಕ

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40 ಶೇ. ಕಮಿಷನ್ ಆರೋಪವನ್ನು ಗುತ್ತಿಗೆದಾರರೇ ಮಾಡಿದ್ದಾರೆ.

ಮೈಸೂರು, ನ.27: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40 ಶೇ. ಕಮಿಷನ್ ಆರೋಪವನ್ನು ಗುತ್ತಿಗೆದಾರರೇ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಧಾನಿ ಮೋದಿ ಪ್ರಾಮಾಣಿಕರಾಗಿದ್ದರೆ ಸರ್ಕಾರವನ್ನು ವಜಾ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ‌

ಗುತ್ತಿಗೆದಾರರ ಸಂಘದವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಆದ್ರೆ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮುಖ್ಯ ಕಾರ್ಯದರ್ಶಿ ತನಿಖೆ ನಡೆಸುವುದಾಗಿ ಆದೇಶ ಮಾಡಿದ್ದಾರೆ. ಆದ್ರೆ ಯಾವ ಇಲಾಖೆ ವಿರುದ್ಧ ಭ್ರಷ್ಟಾಚಾರದ ಆರೋಪ ಇದೆಯೋ, ಅದೇ ಇಲಾಖೆಯ ಅಧಿಕಾರಿಗಳನ್ನು ತನಿಖೆಗೆ ನೇಮಿಸಿದರೆ ಹೇಗಾಗುತ್ತದೆ..? ಇದರಿಂದ ಸತ್ಯ ಹೊರಬರಲು ಸಾಧ್ಯವೇ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. 

ಆದ್ದರಿಂದ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸುವಂತೆ ನಾವು ಆಗ್ರಹಿಸಿದ್ದೇವೆ. ರಾಜ್ಯ ಸರ್ಕಾರ ಕಾಂಗ್ರೆಸ್ ಅವಧಿಯ ಟೆಂಡರ್ ಗಳನ್ನು ತನಿಖೆ ನಡೆಸುವುದಾಗಿ ಹೇಳಿದೆ. ಇದಕ್ಕೆ ನಮ್ಮ ಆಕ್ಷೇಪ ಏನೂ ಇಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಯಾರೊಂದಿಗೂ ಹೊಂದಾಣಿಕೆ ಮಾಡೋದಿಲ್ಲ. ನಾವು ಯಾವ ಕ್ಷೇತ್ರದಲ್ಲೂ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ನಮ್ಮ ಬೆಂಬಲಿತರಿಗೆ ಎಲ್ಲ ಕಡೆ ಸಿಂಗಲ್ ವೋಟ್ ಹಾಕಲು ಅಷ್ಟೇ ಸೂಚನೆ ಕೊಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಬಿಜೆಪಿ - ಜೆಡಿಎಸ್ ನಡುವೆ ಒಳ ಒಪ್ಪಂದ ಇದ್ದೇ ಇದೆ. ಈ ಚುನಾವಣೆಯಲ್ಲಿ ಮಾತ್ರ ಅಲ್ಲ. ಇತ್ತೀಚೆಗೆ ನಡೆದ ಉಪ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲೂ ಅವರಿಬ್ಬರೂ ಒಳ ಒಪ್ಪಂದ ಮಾಡಿಕೊಂಡೇ ಚುನಾವಣೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ, ಬೆಳಗಾವಿಯಲ್ಲಿ ಲಖನ್ ಜಾರಕಿಹೊಳಿ ಕಣಕ್ಕೆ ಇಳಿಸಿರೋದು ಬಿಜೆಪಿಯವರು. ನಮ್ಮವರು ನಮ್ಮ ಪರ ಕೆಲಸ ಮಾಡ್ತಿದ್ದಾರೆ. ಲಖನ್ ಜಾರಕಿಹೋಳಿ ಬಿಜೆಪಿಯಲ್ಲೇ ಇದ್ದವರು. ಹೀಗಾಗಿ ಗೊಂದಲ ಇರೋದು ಬಿಜೆಪಿಯಲ್ಲಿ. ಕೊಡಗಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೇ ನೇರ ಹಣಾಹಣಿ ಇದೆ. ನಾವು ಕಳೆದ ಬಾರಿ ಅಲ್ಪ ಮತದಿಂದ ಸೋತಿದ್ದೇವೆ. ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ಲಿಸಲು ಎಲ್ಲ ಪ್ರಯತ್ನ ಮಾಡುತ್ತೇವೆ ಎಂದರು. ಎ.ಮಂಜು ಕಾಂಗ್ರೆಸ್ ಸೇರೋದಿಲ್ಲ‌. ಅವರು ಕಾಂಗ್ರೆಸ್‌ಗೆ ಬರುವುದಾಗಿಯೂ ಹೇಳಿಲ್ಲ. ಬಂದರೂ ನಾವು ಸೇರಿಸಿಕೊಳ್ಳಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Leader of Opposition Siddaramaiah on Saturday said Congress will face the MLC elections solo and will not ally with any political party.