ಪಾಠ ಮಾಡುತ್ತಿದ್ದ ಶಿಕ್ಷಕರಿಗೆ ಕುಚೇಷ್ಟೆ ಮಾಡಿ ಹಲ್ಲೆ ; ವಿಕೃತಿ ಮೆರೆದು ವಿಡಿಯೋ ಹರಿಯಬಿಟ್ಟ ವಿದ್ಯಾರ್ಥಿಗಳು ! 

11-12-21 02:33 pm       HK Desk news   ಕರ್ನಾಟಕ

ಶಾಲೆಯಲ್ಲಿ ಹಿಂದಿ ಶಿಕ್ಷಕರು ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿಗಳು ಕುಚೇಷ್ಟೆ ಮಾಡಿ, ಅಸಭ್ಯವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ನಲ್ಲೂರಿನ ಹೈಸ್ಕೂಲ್ ವಿದ್ಯಾರ್ಥಿಗಳು ಈ ರೀತಿ ಮಾಡಿದ್ದು ಆಕ್ರೋಶ ಕೇಳಿಬಂದಿದೆ. 

ದಾವಣಗೆರೆ, ಡಿ.11 : ಶಾಲೆಯಲ್ಲಿ ಹಿಂದಿ ಶಿಕ್ಷಕರು ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿಗಳು ಕುಚೇಷ್ಟೆ ಮಾಡಿ, ಅಸಭ್ಯವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ನಲ್ಲೂರಿನ ಹೈಸ್ಕೂಲ್ ವಿದ್ಯಾರ್ಥಿಗಳು ಈ ರೀತಿ ಮಾಡಿದ್ದು ಆಕ್ರೋಶ ಕೇಳಿಬಂದಿದೆ. 

ನಲ್ಲೂರಿನ ಸರ್ಕಾರಿ ಜೂನಿಯರ್ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಕಾಶ್ ಬೋಗಾರ್‌ಗೆ ಶಾಲೆಯ ಐದಾರು ವಿದ್ಯಾರ್ಥಿಗಳು ಕುಚೇಷ್ಟೆ ಮೂಲಕ ಹಲ್ಲೆ ಮಾಡಿದ್ದಾರೆ. ಶಿಕ್ಷಕರ ತಲೆಯ ಮೇಲೆ ಬಕೆಟ್ ಇಟ್ಟು ವಿಕೃತಿ ಪ್ರದರ್ಶಿಸಿ ಸಂತೋಷಪಟ್ಟಿದ್ದಾರೆ. ಇದನ್ನು ವಿಡಿಯೋ ಮಾಡಿ, ಮನಸ್ಸಿಗೆ ಬಂದಂತೆ ಅವಹೇಳನ ಮಾಡಿದ್ದಾರೆ. ಕಳೆದ ನಾಲ್ಕೈದು ದಿನಗಳ ಹಿಂದೆ ಮಾಡಿದ್ದ ವಿಡಿಯೋ ಈಗ ವೈರಲ್ ಆಗಿದ್ದು, ವಿದ್ಯಾರ್ಥಿಗಳ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. 

ಪ್ರಕಾಶ್ ಬೋಗಾರ್ ಅತ್ಯಂತ ಸರಳ, ಸೌಮ್ಯ ಸ್ವಭಾವದ ಶಿಕ್ಷಕರಾಗಿದ್ದು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನಲ್ಲೂರಿಗೆ ಭೇಟಿ ನೀಡಿದ್ದಾರೆ. ಶಾಲೆಯ ಶಿಕ್ಷಕರು, ಪ್ರಾಂಶುಪಾಲರು, ಗ್ರಾಮಸ್ಥರ ಜೊತೆ ಚರ್ಚೆ ನಡೆಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಮಹಾಂತೇಶ್. ಆರ್. ಬೀಳಗಿ, ವಿದ್ಯಾರ್ಥಿಗಳು ಶಿಕ್ಷಕರಿಗೆ ಕುಚೇಷ್ಟೆ, ಅವಮಾನ ಮಾಡಿರುವ ವಿಡಿಯೋ ವೈರಲ್ ಆಗಿರುವುದು ಗಮನಕ್ಕೆ ಬಂದಿದೆ. ಯಾರೇ ತಪ್ಪು ಮಾಡಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ. ಶಿಕ್ಷಕರ ಕಡೆಯಿಂದ ತಪ್ಪಿದ್ದರೂ ಸಹ ಕ್ರಮ ಆಗುತ್ತದೆ ಎಂದು ಹೇಳಿದ್ದಾರೆ.

A video showing a group of students of a high school in Davanagere high school allegedly misbehaving and assaulting a teacher during classes had gone viral on social media and netizens demanded stringent action against the students.