ಕಾಂಗ್ರೆಸ್ ಸೋಲಿಸುವ ತಂತ್ರಗಾರಿಕೆ ಠುಸ್, 13 ಶಾಸಕರಿದ್ದರೂ ಬಿಜೆಪಿಗೆ ಲಾಸ್ ; ಗೆದ್ದ ಜಾರಕಿಹೊಳಿ ‘ಬ್ರದರ್ಸ್ ’! ಒಂದೇ ಅವಧಿಗೆ ನಾಲ್ವರು ಸೋದರರಿಗೆ ಶಾಸಕ ಭಾಗ್ಯ!

14-12-21 08:08 pm       HK Desk news   ಕರ್ನಾಟಕ

ಬೆಳಗಾವಿ ಮಟ್ಟಿಗೆ ಜಾರಕಿಹೊಳಿ ಸೋದರರೇ ಪವರ್ ಫುಲ್ ಅನ್ನುವುದು ಮತ್ತೆ ಸಾಬೀತಾಗಿದೆ.

ಬೆಳಗಾವಿ, ಡಿ.14 : ಬೆಳಗಾವಿ ಮಟ್ಟಿಗೆ ಜಾರಕಿಹೊಳಿ ಸೋದರರೇ ಪವರ್ ಫುಲ್ ಅನ್ನುವುದು ಮತ್ತೆ ಸಾಬೀತಾಗಿದೆ. ರಾಜ್ಯದ ಪ್ರಭಾವಿ ರಾಜಕೀಯ ಮನೆತನವಾಗಿರುವ ಜಾರಕಿಹೊಳಿ ಕುಟುಂಬದ ನಾಲ್ಕನೇ ವ್ಯಕ್ತಿ ಪರಿಷತ್ ಚುನಾವಣೆಯಲ್ಲಿ ಅಚ್ಚರಿ ಎನ್ನುವಂತೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ, ಬೆಳಗಾವಿ ರಾಜಕಾರಣ ಮತ್ತೆ ರಾಜ್ಯದ ಗಮನ ಸೆಳೆದಿದೆ.

ತೆರೆಮರೆಯಲ್ಲಿದ್ದುಕೊಂಡೇ ಜಿಲ್ಲೆಯ ರಾಜಕೀಯದಲ್ಲಿ ಬೊಂಬೆ ಆಡಿಸುತ್ತಿರುವ ರಮೇಶ ಜಾರಕಿಹೊಳಿ (ಗೋಕಾಕ್) ಮತ್ತು ಇನ್ನೊಬ್ಬ ತಮ್ಮ ಬಾಲಚಂದ್ರ ಜಾರಕಿಹೊಳಿ (ಅರಭಾವಿ) ಬಿಜೆಪಿ ಶಾಸಕರಾಗಿದ್ದಾರೆ. ಸೋದರರ ಪೈಕಿ ಹಿರಿಯನಾಗಿರುವ ಸತೀಶ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ. ಇದೀಗ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದಿಂದ ಕಿರಿಯ ಸೋದರ ಲಖನ್ ಕೂಡ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದು, ಜಾರಕಿಹೊಳಿ ಕುಟುಂಬದ ನಾಲ್ಕನೇ ಕುಡಿ ಒಂದೇ ಅವಧಿಯಲ್ಲಿ ಶಾಸಕನಾಗಿ ರಾಜ್ಯ ರಾಜಕಾರಣದಲ್ಲಿ ಮಿಂಚು ಹರಿಸಿದ್ದಾರೆ.

ಲಖನ್ ಈ ಹಿಂದೆ ಹಿರಿಯಣ್ಣ ಸತೀಶ ಜಾರಕಿಹೊಳಿ ಜೊತೆ ಕಾಂಗ್ರೆಸಿನಲ್ಲೇ ಇದ್ದವರು. ಕಳೆದ ಬಾರಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಪಕ್ಷ ಲಖನ್ ಅವರನ್ನೇ ಕಣಕ್ಕಿಳಿಸಿತ್ತು. ಅಲ್ಲೀ ವರೆಗೂ ರಾಜಕೀಯದ ಅನುಭವ ಹೊಂದಿರದ ಲಖನ್, ಸೋದರ ರಮೇಶ ಜಾರಕಿಹೊಳಿಯ ಪ್ರಭಾವಳಿಯ ಮುಂದೆ ಸೋಲುಂಡಿದ್ದರು. ಆದರ ನಿಧಾನಕ್ಕೆ ರಾಜಕೀಯದಲ್ಲಿ ಮೇಲೇರುವ ಆಸೆ ಗರಿಗೆದರಿತ್ತು. ಆನಂತರ ಲೋಕಸಭಾ ಉಪ ಚುನಾವಣೆಯಲ್ಲಿ ಮಂಗಳಾ ಅಂಗಡಿ ಸ್ಪರ್ಧೆಯ ವೇಳೆ ಬಿಜೆಪಿ ಪರ ಕೆಲಸ ಮಾಡುವುದಾಗಿ ಹೇಳಿದ್ದ ಲಖನ್ ಬಿಜೆಪಿಯಲ್ಲಿ ಬೆಳೆಯುವ ಇಂಗಿತ ಹೊರಹಾಕಿದ್ದರು. ಅದರೊಂದಿಗೆ ಲಖನ್ ಕೂಡ ಮಾನಸಿಕವಾಗಿ ಬಿಜೆಪಿ ಜೊತೆಯಲ್ಲೇ ಗುರುತಿಸಿಕೊಂಡಿದ್ದರು.

ಈ ಬಾರಿ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವಂತೆ ಜಾರಕಿಹೊಳಿ ಬ್ರದರ್ಸ್ ಬಹಿರಂಗವಾಗಿಯೇ ಕೇಳಿಕೊಂಡಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಕುಟುಂಬ ರಾಜಕಾರಣವನ್ನು ವಿರೋಧಿಸುವ ನೆಲೆಯಲ್ಲಿ ಟಿಕೆಟ್ ನೀಡಿರಲಿಲ್ಲ. ಈ ಬಗ್ಗೆ ತಂತ್ರಗಾರಿಕೆ ನಡೆಸಿದ ಬಾಲಚಂದ್ರ ಮತ್ತು ರಮೇಶ ಜಾರಕಿಹೊಳಿ ಸೋದರರು, ಸಣ್ಣ ತಮ್ಮನನ್ನು ಪಕ್ಷೇತರನಾಗಿಯೇ ಕಣಕ್ಕಿಳಿಸಲು ಮುಂದಾಗಿದ್ದಾರೆ. ದ್ವಿಸದಸ್ಯ ಕ್ಷೇತ್ರವಾದ ಬೆಳಗಾವಿಯಲ್ಲಿ ಅತಿ ಹೆಚ್ಚು ಮತಗಳನ್ನು ಹೊಂದಿರುವುದು ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಕೀಯ ಕಡುವೈರಿ ಲಕ್ಷ್ಮೀ ಹೆಬ್ಬಾಳಕರ್, ತನ್ನ ತಮ್ಮನನ್ನು ಕಣಕ್ಕಿಳಿಸಿದ್ದನ್ನು ವಿರುದ್ಧ ತಂತ್ರಗಾರಿಕೆ ನಡೆಸಲು ಮುಂದಾಗಿದ್ದರು. ಕಾಂಗ್ರೆಸ್ ಮತಗಳನ್ನು ಸೆಳೆಯುವ ಮೂಲಕ ಹೆಬ್ಬಾಳಕರ್ ಸೋದರರನ್ನು ಅಂಬೆಗಾಲಿಡುವಾಗಲೇ ಹೊರಕ್ಕಟ್ಟುವ ಯೋಚನೆ ಮಾಡಿದ್ದರು. ಇಡೀ ಜಿಲ್ಲೆಯಲ್ಲಿ ಪ್ರಭಾವ ಹೊಂದಿರುವುದರಿಂದ ಕಾಂಗ್ರೆಸ್ ಮತಗಳನ್ನು ಸುಲಭದಲ್ಲಿ ಸೆಳೆಯಬಹುದು ಅನ್ನುವ ಚಿಂತನೆ ಅವರದಾಗಿತ್ತು.   

ಆದರೆ ಜಾರಕಿಹೊಳಿ ಸೋದರರ ತಂತ್ರಗಾರಿಕೆಯ ಸವಾಲು ಬಿಜೆಪಿ ಪಾಲಿಗೆ ಮುಳುವಾಗಿದೆ. ಬಿಜೆಪಿಯಿಂದ ಮೊದಲ ಪ್ರಾಶಸ್ತ್ಯದ ಮತ ಅಧಿಕೃತ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರಿಗೇ ನೀಡಿ. ಆದರೆ, ಎರಡನೇ ಪ್ರಾಶಸ್ತ್ಯದ ಮತಗಳನ್ನು ತನ್ನ ತಮ್ಮನಿಗೆ ನೀಡುವಂತೆ ಪ್ರಚಾರ ಕಾರ್ಯ ನಡೆಸಿದ್ದೇ ಮುಳುವಾಯ್ತು. ಫಲಿತಾಂಶದಲ್ಲಿ ಪ್ರಥಮ ಪ್ರಾಶಸ್ತ್ಯದ ಮತಗಳು ಬಿಜೆಪಿ ಅಭ್ಯರ್ಥಿಗಿಂತ ಹೆಚ್ಚು ಲಖನ್ ಪರವಾಗಿಯೇ ಬಂದಿದ್ದು ಬೆಳಗಾವಿ ರಾಜಕೀಯದ ದಿಕ್ಕನ್ನೇ ಬದಲಿಸಿದೆ. ಅಚ್ಚರಿ ಅಂದ್ರೆ, ಕಾಂಗ್ರೆಸ್ ಅಭ್ಯರ್ಥಿಗೆ ನಿಗದಿಗಿಂತ 800 ಮತಗಳು ಹೆಚ್ಚುವರಿಯಾಗಿ ಬಂದು 3721ಕ್ಕೂ ಹೆಚ್ಚು ಪ್ರಥಮ ಪ್ರಾಶಸ್ತ್ಯದ ಮತಗಳಿಂದಲೇ ಗೆಲುವು ದಕ್ಕಿದೆ. ಇತ್ತ ಲಖನ್ ಜಾರಕಿಹೊಳಿಯ ಸ್ಪರ್ಧೆಯಿಂದಾಗಿ, ಸುಲಭ ಜಯ ಕಾಣಬೇಕಿದ್ದ ಬಿಜೆಪಿ ಅಭ್ಯರ್ಥಿಯೇ ಅಚ್ಚರಿಯ ಸೋಲು ಕಂಡಿದ್ದಾರೆ. ಲಖನ್ ಪ್ರಥಮ ಪ್ರಾಶಸ್ತ್ಯದಲ್ಲಿ 2522 ಮತಗಳನ್ನು ಪಡೆದರೆ, ಬಿಜೆಪಿಯ ಮಹಾಂತೇಶ ಕವಟಗಿಮಠ ಪರವಾಗಿ 2432 ಮತಗಳನ್ನಷ್ಟೇ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

13 ಶಾಸಕರಿದ್ದರೂ ಬಿಜೆಪಿಗೆ ಲಾಸ್

ಆಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಬೇಕೆಂಬ ಜಾರಕಿಹೊಳಿ ಬ್ರದರ್ಸ್ ತಂತ್ರಗಾರಿಕೆ ಕೈಕೊಟ್ಟಿದೆ. ಆದರೆ, ಸಣ್ಣ ತಮ್ಮನೂ ಶಾಸಕನಾಗಬೇಕು ಎಂಬ ಸೋದರರ ಮಹದಾಸೆ ಮಾತ್ರ ಫಲಿಸಿದೆ. ಅತ್ತ ಆಡಳಿತಾರೂಢ ಬಿಜೆಪಿ ಸರಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿರುವಾಗಲೇ ವ್ಯತಿರಿಕ್ತ ಫಲಿತಾಂಶ ಬಂದಿರುವುದು ಬಿಜೆಪಿ ಪಾಲಿಗೆ ಮಾತ್ರ ದೊಡ್ಡ ಹಿನ್ನಡೆಯಾಗಿದೆ. ಬೆಳಗಾವಿಯಲ್ಲಿ 13 ಜನ ಬಿಜೆಪಿ ಶಾಸಕರು, ಇಬ್ಬರು ಬಿಜೆಪಿ ಸಂಸದರು, ಒಬ್ಬ ರಾಜ್ಯಸಭಾ ಸದಸ್ಯರು ಇದ್ದರೂ, ಬಿಜೆಪಿ ಅಭ್ಯರ್ಥಿ ಸೋತಿದ್ದು ರಾಜ್ಯದ ಬಿಜೆಪಿ ಪಾಲಿಗೆ ತೀವ್ರ ಮುಜುಗರ ತರಿಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಜಾರಕಿಹೊಳಿ ಬ್ರದರ್ಸ್ ಮಾಡಿರುವ ತಂತ್ರಗಾರಿಕೆ ಫಲ ಕೊಟ್ಟಿಲ್ಲ ಎಂಬುದು ದೊಡ್ಡ ಮೈನಸ್ ಆಗಿದ್ದರೆ, ಜಾರಕಿಹೊಳಿ ಬ್ರದರ್ಸ್ ರಾಜ್ಯ ಬಿಜೆಪಿಯ ಕೆಂಗಣ್ಣಿಗೆ ತುತ್ತಾಗಿದ್ದಾರೆ.

ಹಿಂದಿನಿಂದಲೂ ಜಿಲ್ಲೆಯ ಮಟ್ಟಿಗೆ ತಮ್ಮ ಕೈಸನ್ನೆಯ ರೀತಿಯಲ್ಲೇ ರಾಜಕಾರಣ ನಡೆಯುತ್ತಾ ಬಂದಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಡಿಕೆಶಿ ಆಪ್ತೆಯಾಗಿರುವ ಲಕ್ಷ್ಮೀ ಹೆಬ್ಬಾಳಕರ್ ಪ್ರಭಾವಿಯಾಗಿದ್ದರು. ರಮೇಶ್ ಜಾರಕಿಹೊಳಿ ಅವರನ್ನು ಬಹಿರಂಗವಾಗಿಯೇ ಎದುರು ಹಾಕ್ಕೊಂಡು ತೊಡೆ ತಟ್ಟಿದ್ದು, ಜಿಲ್ಲೆಯಲ್ಲಿ ರಾಜಕೀಯ ದ್ವೇಷಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಹಿಂದೆ ಕಾಂಗ್ರೆಸಿನಲ್ಲೇ ದ್ದ ಜಾರಕಿಹೊಳಿ ಬ್ರದರ್ಸ್ ಬಿಜೆಪಿ ಬಾಗಿಲು ತಟ್ಟಿದ್ದರು. ಬೆಳಗಾವಿಯಲ್ಲಿ ಇವರ ಪ್ರಭಾವ ಅರಿತಿರುವ ಕಾಂಗ್ರೆಸ್, ಹಿರಿಯಣ್ಣ ಸತೀಶ ಜಾರಕಿಹೊಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಿ ಗೌರವಿಸಿದೆ. ಹೀಗಾಗಿ ಸತೀಶ ಮಾತ್ರ ಕಾಂಗ್ರೆಸಿನಲ್ಲಿ ಉಳಿದಿದ್ದು, ಇತರ ಮೂವರು ಕೂಡ ಬಿಜೆಪಿ ಸೇರಿದ್ದಾರೆ.

ಈಗಂತೂ, ಲಕ್ಷ್ಮೀ ಹೆಬ್ಬಾಳಕರ್ ತಮ್ಮ ಚನ್ನರಾಜ ಹಟ್ಟಿಹೊಳಿ ಕೂಡ ಶಾಸಕನಾಗಿ ಬೆಳಗಾವಿ ರಾಜಕೀಯಕ್ಕೆ ಅಧಿಕೃತ ಎಂಟ್ರಿ ಕೊಟ್ಟಿದ್ದು, ಬೆಳಗಾವಿ ರಾಜಕೀಯಕ್ಕೆ ಹೊಸ ಬಣ್ಣ ತಂದುಕೊಟ್ಟಿದೆ. ಜಾರಕಿಹೊಳಿ ಬ್ರದರ್ಸ್ ನಡೆ, ಮುಂದೆ ಹೇಗಿರುತ್ತೆ. ಬಿಜೆಪಿ ಇದನ್ನೆಲ್ಲ ಹೇಗೆ ಸಹಿಸಿಕೊಳ್ಳುತ್ತೆ ಅನ್ನುವುದು ಕುತೂಹಲದ ಅಂಶ.

Counting of votes is under way for the biennial election to the Karnataka Legislative Council's 25 seats from 20 Local Authorities' constituencies. The results of the polls will have a bearing on the power equation in the Upper House of the State Legislature. The BJP clinched 12 seats, falling short of a simple majority in the Council, while Congress have won 11. JD(S) won a lone seat in Hassan through Suraj Revanna. Meanwhile, former CM H D Kumaraswamy conceded defeat in the polls, saying money politics won over people politics.