ಹತ್ತು ವರ್ಷದ ಹಿಂದೆ ಸತ್ತಿದ್ದಾಳೆಂದು ತಿಳಿದಿದ್ದ ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ತಮಿಳುನಾಡಿನಲ್ಲಿ ಪ್ರತ್ಯಕ್ಷ ; ಪೊಲೀಸರಿಗೆ ಶರಣಾಗತಿ !

20-12-21 12:48 pm       HK Desk news   ಕರ್ನಾಟಕ

2010ರಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ತೀವ್ರವಾಗಿದ್ದಾಗ ಸತ್ತಿದ್ದಾಳೆ ಎಂದು ಹೇಳಲಾಗಿದ್ದ ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ತಮಿಳುನಾಡಿನಲ್ಲಿ ದಿಢೀರ್ ಪ್ರತ್ಯಕ್ಷ ಆಗಿದ್ದಾಳೆ.

ಶಿವಮೊಗ್ಗ, ಡಿ.20: 2010ರಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ತೀವ್ರವಾಗಿದ್ದಾಗ ಸತ್ತಿದ್ದಾಳೆ ಎಂದು ಹೇಳಲಾಗಿದ್ದ ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ತಮಿಳುನಾಡಿನಲ್ಲಿ ದಿಢೀರ್ ಪ್ರತ್ಯಕ್ಷ ಆಗಿದ್ದಾಳೆ. ತಮಿಳುನಾಡಿನ ವೆಲ್ಲೂರು ಜಿಲ್ಲೆಯ ತಿರುಪ್ಪೂರು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾಳೆ ಎನ್ನುವ ಮಾಹಿತಿ ಲಭಿಸಿದೆ.

ಮಲೆನಾಡಿನಲ್ಲಿ ನಕ್ಸಲ್ ಚಳವಳಿಯ ನಾಯಕನಾಗಿ ಗುರುತಿಸಲ್ಪಟ್ಟಿದ್ದ ಬಿ.ಜಿ.ಕೃಷ್ಣಮೂರ್ತಿ, ಒಂದು ತಿಂಗಳ ಹಿಂದೆ ಕೇರಳದ ವಯನಾಡಿನಲ್ಲಿ ಪೊಲೀಸರ ಬಲೆಗೆ ಬಿದ್ದು ಬಂಧನಕ್ಕೊಳಗಾಗಿದ್ದ. ಕೃಷ್ಣಮೂರ್ತಿಯ ಪತ್ನಿಯಾಗಿದ್ದ ಹೊಸಗದ್ದೆ ಪ್ರಭಾ ಆಬಳಿಕ ತೀರಾ ಚಿಂತೆಗೆ ಒಳಗಾಗಿದ್ದಳು ಎನ್ನಲಾಗುತ್ತಿದ್ದು, ಇದೀಗ ತಮಿಳುನಾಡಿನಲ್ಲಿ ಪೊಲೀಸರಿಗೆ ಶರಣಾಗಿದ್ದಾಳೆ.

ಚಿಕ್ಕಮಗಳೂರು ಜಿಲ್ಲೆಯ ಆಗುಂಬೆ ಬಳಿಯ ಹೊಸಗದ್ದೆ ಗ್ರಾಮದ ನಿವಾಸಿಯಾಗಿರುವ ಪ್ರಭಾ, 2005ರಲ್ಲಿ ಮನೆಯಿಂದ ನಾಪತ್ತೆಯಾಗಿದ್ದು, ನಕ್ಸಲ್ ಚಳವಳಿ ಸೇರಿದ್ದಳು. ಆಬಳಿಕ ಬಿ.ಜಿ.ಕೃಷ್ಣಮೂರ್ತಿಯ ಜೊತೆಗೆ ಮಲೆನಾಡಿನಲ್ಲಿ ನಕ್ಸಲ್ ಚಳವಳಿ ಬಲಪಡಿಸುವುದರಲ್ಲಿ ನಿರತಳಾಗಿದ್ದಳು. 2010ರಲ್ಲಿ ನಕ್ಸಲ್ ನಿಗ್ರಹ ಪಡೆಯ ಕಾರ್ಯಾಚರಣೆ ಹೆಚ್ಚಿದಾಗ ನಕ್ಸಲರು ಮಲೆನಾಡಿನಿಂದ ಕಾಲ್ಕಿತ್ತು ಕೇರಳ, ತಮಿಳುನಾಡಿಗೆ ಪರಾರಿಯಾಗಿದ್ದರು. ಅದೇ ಸಂದರ್ಭದಲ್ಲಿ ಹೊಸಗದ್ದೆ ಪ್ರಭಾವ ಸಾವನ್ನಪ್ಪಿದ್ದಾಳೆ ಎನ್ನುವ ವದಂತಿ ಹರಡಿತ್ತು.

ಹೊಸಗದ್ದೆಯ ಆಕೆಯ ಕುಟುಂಬಸ್ಥರಿಗೆ ಅಪರಿಚಿತರಿಂದ ಫೋನ್ ಕರೆ ಬಂದಿದ್ದು, ಪ್ರಭಾ ಸಾವನ್ನಪ್ಪಿದ್ದು ಆಕೆಯ ಅಂತ್ಯವಿಧಿಗಳನ್ನು ಮಾಡುವಂತೆ ತಿಳಿಸಲಾಗಿತ್ತು. ಈ ಬಗ್ಗೆ ಶಿವಮೊಗ್ಗ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು. ಆದರೆ ಆಗಿನ ಎಸ್ಪಿಯಾಗಿದ್ದ ಮುರುಗನ್, ಆಕೆಯ ಮೃತದೇಹ ಸಿಗದ ಹೊರತು ಪ್ರಭಾ ಸಾವನ್ನಪ್ಪಿದ್ದಾಳೆಂದು ಘೋಷಣೆ ಮಾಡಲಾಗದು ಎಂದು ವದಂತಿಯನ್ನು ನಿರಾಕರಿಸಿದ್ದರು.

ಆಬಳಿಕ ಹೊಸಗದ್ದೆ ಪ್ರಭಾ ಸೇರಿದಂತೆ ಬಿಜಿ ಕೃಷ್ಣಮೂರ್ತಿ, ವಿಕ್ರಂ ಗೌಡ, ಸಾವಿತ್ರಿ ಇನ್ನಿತರ ನಕ್ಸಲರು ಕೇರಳದ ಕಾಡಿನಲ್ಲಿ ತಲೆಮರೆಸಿಕೊಂಡಿದ್ದಾರೆ ಅನ್ನುವ ಮಾಹಿತಿಗಳು ಪೊಲೀಸರಿಗೆ ಲಭಿಸಿತ್ತು. ಆನಂತರ ಕರ್ನಾಟಕದ ಮಲೆನಾಡಿನಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯೂ ಕುಂಠಿತವಾಗಿತ್ತು. ನಕ್ಸಲ್ ಚಟುವಟಿಕೆಗೂ ಪೂರ್ತಿಯಾಗಿ ಬ್ರೇಕ್ ಬಿದ್ದಿತ್ತು. ಇತ್ತೀಚೆಗೆ ಈ ಭಾಗದ ನಕ್ಸಲ್ ಚಳವಳಿಗೆ ನೇತೃತ್ವ ವಹಿಸಿದ್ದ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಪೊಲೀಸರ ಬಲೆಗೆ ಬಿದ್ದಿದ್ದರು. ಇದರೊಂದಿಗೆ ಕೃಷ್ಣಮೂರ್ತಿಯ ಪತ್ನಿಯಾಗಿ ಗುರುತಿಸಿಕೊಂಡಿದ್ದ ಹೊಸಗದ್ದೆ ಪ್ರಭಾ ಖಿನ್ನಳಾಗಿದ್ದಲ್ಲದೆ, ಅನಾರೋಗ್ಯಕ್ಕೂ ತುತ್ತಾಗಿದ್ದಳು. ಪ್ಯಾರಾಲಿಸಿಸ್ ರೋಗದಿಂದ ಬಳಲುತ್ತಿದ್ದಾಳೆ ಎನ್ನುವ ಮಾಹಿತಿಗಳಿವೆ. ಇದೇ ಕಾರಣದಿಂದ ಆಕೆ ತಮಿಳುನಾಡಿನ ಪೊಲೀಸರಿಗೆ ಶರಣಾಗಿದ್ದಾಳೆ ಎನ್ನಲಾಗುತ್ತಿದೆ.

ಪ್ರಭಾ ಶರಣಾಗತಿಯ ಬೆನ್ನಲ್ಲೇ ಕಾಡಿನಲ್ಲಿ ಅವಿತುಕೊಂಡಿರುವ ಹಲವಾರು ನಕ್ಸಲರು ಪೊಲೀಸರಿಗೆ ಶರಣಾಗಲು ಮುಂದಾಗಿದ್ದಾರೆ ಅನ್ನುವ ಮಾಹಿತಿಗಳಿವೆ. ಪ್ರಭಾ ವಿರುದ್ಧ ಕರ್ನಾಟಕದಲ್ಲಿ 40ಕ್ಕೂ ಹೆಚ್ಚು ಪ್ರಕರಣಗಳಿವೆ. ತಲ್ಲೂರಿನಲ್ಲಿ ಅಂಗಡಿಗೆ ಬೆಂಕಿಯಿಟ್ಟಿದ್ದು, ಪೊಲೀಸರ ಬಸ್ಸಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲೂ ಆರೋಪಿಯಾಗಿದ್ದಾಳೆ. ಆಕೆಯ ಬಗ್ಗೆ ಮಾಹಿತಿ ಕೊಟ್ಟವರಿಗೆ 5 ಲಕ್ಷ ರೂ. ಬಹುಮಾನವನ್ನೂ ಕರ್ನಾಟಕ ಪೊಲೀಸರು ಘೋಷಿಸಿದ್ದರು.

Hosagadde Prabha, abouit whom rumours said that she had died in 2010, surfaced in Tamil Nadu and surrendered to the police. She surrendered at Tirupattur police station, Vellore, Tamil Nadu. Prabha's husband, B G Krishnamurthy, who is said to be the brain behind many naxal operations, had been arrested by the Tamil Nadu police recently. It is said that after the arrest of her husband, Prabha was suffering from depression.