ಮುಖ್ಯಮಂತ್ರಿ ಬದಲಾವಣೆ ವದಂತಿ ; 23ರ ವರೆಗೂ ಬೊಮ್ಮಾಯಿ ಅವರೇ ಸಿಎಂ ಆಗಿರುತ್ತಾರೆ ; ಸಚಿವ ಪ್ರಹ್ಲಾದ ಜೋಷಿ 

22-12-21 10:38 pm       HK Desk news   ಕರ್ನಾಟಕ

ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಸುದ್ದಿ ಹಬ್ಬಿದ್ದು ಮುಂದಿನ ಸಿಎಂ ಯಾರು ಎನ್ನುವ ಬಗ್ಗೆ ಚರ್ಚೆ ಆರಂಭಗೊಂಡಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಸಿಎಂ ಬದಲಾವಣೆಯ ಯಾವುದೇ ಪ್ರಸ್ತಾಪ ಇಲ್ಲ ಎಂದು ಹೇಳಿದ್ದಾರೆ. 

ಬೆಂಗಳೂರು, ಡಿ.22 ; ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಸುದ್ದಿ ಹಬ್ಬಿದ್ದು ಮುಂದಿನ ಸಿಎಂ ಯಾರು ಎನ್ನುವ ಬಗ್ಗೆ ಚರ್ಚೆ ಆರಂಭಗೊಂಡಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಸಿಎಂ ಬದಲಾವಣೆಯ ಯಾವುದೇ ಪ್ರಸ್ತಾಪ ಇಲ್ಲ ಎಂದು ಹೇಳಿದ್ದಾರೆ. 

ಬುಧವಾರ ಧಾರವಾಡ ಸಂಸದ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, "2023ರ ತನಕ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ" ಎಂದು ಹೇಳಿದ್ದಾರೆ. 

ಕಳೆದ ಭಾನುವಾರ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ ಅನಾವರಣ ಸಮಾರಂಭ ಇತ್ತು. ಸ್ವಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಗದ್ಗದಿತರಾದಂತೆ ಈ ಅಧಿಕಾರ ಏನಿದ್ದರೂ ಶಾಶ್ವತ ಅಲ್ಲ ಎನ್ನುವ ಧಾಟಿಯಲ್ಲಿ ಮಾತನಾಡಿದ್ದು ಸಿಎಂ ಬದಲಾವಣೆಯ ಬಗ್ಗೆ ಊಹಾಪೋಹ ಗರಿಗೆದರುವಂತೆ ಮಾಡಿತ್ತು.‌

ಕ್ಷೇತ್ರದ ಜನರ ಋಣ ತೀರಿಸಲು ಸಾಧ್ಯವೇ ಇಲ್ಲ. ನಿಮ್ಮ ಪ್ರೀತಿ, ವಿಶ್ವಾಸದ ಮುಂದೆ ಯಾವ ಅಧಿಕಾರವೂ ಮಹತ್ವದ್ದಲ್ಲ. ಅಧಿಕಾರ, ಸ್ಥಾನಮಾನ ಶಾಶ್ವತವಲ್ಲ. ಬಸವರಾಜ ಬೊಮ್ಮಾಯಿ ಅಷ್ಟೇ ಆಗಿರುತ್ತೇನೆ. ಹಿಂದಿರುವ ಪದನಾಮಕ್ಕೆ ಹೆಚ್ಚು ಆಯಸ್ಸು ಇಲ್ಲ ಎಂದು ಹೇಳಿದ್ದರು.

"ನಿಮ್ಮ ಆಶೀರ್ವಾದಲ್ಲಿ ಬಹುದೊಡ್ಡ ಶಕ್ತಿ ಇದೆ. ಅದೇ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಈಗಿರುವ ಸವಾಲುಗಳನ್ನು ಎದುರಿಸಲು ನಿಮ್ಮ ಆಶೀರ್ವಾದವೇ ಪ್ರೇರಣೆಯಾಗಿ ನಿಲ್ಲಲಿದೆ. ಕ್ಷೇತ್ರದ ಹೊರಗೆ ನಾನು ಮುಖ್ಯಮಂತ್ರಿ, ಇಲ್ಲಿ ಕೇವಲ ಬಸವರಾಜ ಬೊಮ್ಮಾಯಿ ಮಾತ್ರ. ಬಸವರಾಜ ಬೊಮ್ಮಾಯಿ ಶಾಶ್ವತವೇ ಹೊರತು ಹಿಂದಿರುವ ಪದನಾಮವಲ್ಲ" ಎಂದು ಭಾವುಕವಾಗಿ ಬೊಮ್ಮಾಯಿ ಮಾತನಾಡಿದ್ದು ನಾನಾ ಅರ್ಥಗಳನ್ನು ಹೊರಗೆಡವಿತ್ತು.

ಮುಖ್ಯಮಂತ್ರಿಗಳ ಹೇಳಿಕೆ ಬಳಿಕ ರಾಜ್ಯ ರಾಜಕೀಯದಲ್ಲಿ ಚರ್ಚೆಗಳು ಆರಂಭವಾಗಿದ್ದವು. ಹೈಕಮಾಂಡ್‌ನಿಂದ ಸಂದೇಶ ಬಂದಿದೆ. ಮುಖ್ಯಮಂತ್ರಿಗಳು ಬದಲಾವಣೆಯಾಗಲಿದ್ದಾರೆ. 2022ರ ಜನವರಿಯಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. 

ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಜುಲೈ 26ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಜುಲೈ 28ರಂದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಈಗ ಬೊಮ್ಮಾಯಿ ಅಧಿಕಾರಕ್ಕೇರಿ ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಅವರನ್ನೂ ಬದಲಾಯಿಸುವ ಮಾತು ಕೇಳಿಬಂದಿದೆ.

Union Parliamentary Affairs Minister Pralhad Joshi on Wednesday dismissed speculation about a leadership change in Karnataka, saying Basavaraj Bommai will continue as the chief minister.