ಎಷ್ಟೇ ವಿರೋಧ ಬಂದರೂ ಮತಾಂತರ ಕಾಯ್ದೆ ರಾಜ್ಯದಲ್ಲಿ ತಂದೇ ತರುತ್ತೇವೆ ; ಬಿಜೆಪಿ ಟ್ವೀಟ್

30-12-21 06:18 pm       HK Desk news   ಕರ್ನಾಟಕ

ಪ್ರತಿಪಕ್ಷಗಳು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ, ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ತಂದೇ ತರುತ್ತೇವೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

ಬೆಂಗಳೂರು, ಡಿ.30 : ಪ್ರತಿಪಕ್ಷಗಳು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ, ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ತಂದೇ ತರುತ್ತೇವೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

ಇತ್ತೀಚೆಗೆ ನಡೆಗ ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ ಧಾರ್ಮಿಕ ಹಕ್ಕುಗಳ ಸಂರಕ್ಷಣಾ ವಿಧೇಯಕ (ಮತಾಂತರ ನಿಷೇಧ ಕಾಯ್ದೆ) ವನ್ನು ಮಂಡಿಸಲಾಗಿತ್ತು. ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿದ್ದರೂ, ವಿಧಾನ ಪರಿಷತ್ತಿನಲ್ಲಿ ಮಂಡನೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಮುಂದಿನ ಅಧಿವೇಶನಕ್ಕಾಗಿ ಕಾಯುವಂತಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮಸೂದೆ ಜಾರಿಗೆ ಬಿಡುವುದಿಲ್ಲ ಎಂದಿದೆ.

ಹಾಗಿದ್ದರೂ, ಬಿಜೆಪಿ ಕಾರ್ಯಕಾರಿಣಿ ಮುಕ್ತಾಯಗೊಂಡ ಬೆನ್ನಲ್ಲೇ ಬಿಜೆಪಿ ಟ್ವೀಟ್ ಮಾಡಿದ್ದು, ಯಾರು ಎಷ್ಟೇ ವಿರೋಧಿಸಿದರೂ, ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ತಂದೇ ತರುತ್ತೇವೆ. ಈ ಬಗ್ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಾಯ್ದೆ ಜಾರಿಗಾಗಿ ವಿಶೇಷ ಟಾಸ್ಕ್ ಫೋರ್ಸ್ ರಚಿಸುತ್ತೇವೆ ಎಂದು ಹೇಳಿದೆ.

ದೇಗುಲದ ಹಣ ದೇಗುಲಕ್ಕೇ ಸೀಮಿತ

ಇದೇ ವೇಳೆ, ಮುಜರಾಯಿ ಇಲಾಖೆ ಹಿಡಿತದಲ್ಲಿರುವ ದೇವಸ್ಥಾನಗಳಲ್ಲಿ ಸರಕಾರದ ಹಿಡಿತವನ್ನು ಸಡಿಲಗೊಳಿಸುವ ಸುಳಿವನ್ನೂ ಸಿಎಂ ಬೊಮ್ಮಾಯಿ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮುಕ್ತಾಯಗೊಂಡ ಬಿಜೆಪಿ ಕಾರ್ಯಕಾರಿಣಿಯ ಕೊನೆಯಲ್ಲಿ ಸಿಎಂ ಈ ಬಗ್ಗೆ ಹೇಳಿಕೆ ನೀಡಿದ್ದರು. ಇದೇ ವಿಚಾರದಲ್ಲಿ ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದು, ಕೊಪ್ಪಳದ ಅಂಜನಾದ್ರಿ ಬೆಟ್ಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸುತ್ತೇವೆ. ದೇವಾಲಯಗಳನ್ನು ಕಾನೂನಿನ ಕಟ್ಟುಪಾಡುಗಳಿಂದ ಮುಕ್ತಗೊಳಿಸುತ್ತೇವೆ. ದೇವಾಲಯದ ಹಣ ದೇಗುಲದ ಅಭಿವೃದ್ಧಿಗೆ ಮಾತ್ರ ಉಪಯೋಗಿಸಬೇಕು. ಅದಕ್ಕಾಗಿ ಕಾನೂನು ರೂಪಿಸುತ್ತೇವೆ ಎಂದು ಹೇಳಿದ್ದಾರೆ.

Karnataka BJP Anti Conversion Bill to be implemented at any cost.  the Karnataka state assembly passed a new anti-conversion legislation, called the Karnataka Protection of Right to Freedom of Religion Bill, 2021. The bill now awaits its passage in the state legislative council to become a law.